ಸರ್ಜಾ ಕುಟುಂಬಕ್ಕೆ ಜ್ಯೂನಿಯರ್ ಜಿರಂಜೀವಿ ಆಗಮನ: ಮಗುವನ್ನು ಆಶಿರ್ವದಿಸಿ – ದ್ರುವ ಸರ್ಜಾ
ಬೆಂಗಳೂರು, ಅ.22 : ಸ್ಯಾಂಡಲ್ ವುಡ್ ನ ಸರ್ಜಾ ಕುಟುಂಬಕ್ಕೆ ಜ್ಯೂನಿಯರ್ ಜಿರಂಜೀವಿಯ ಆಗಮನವಾಗಿದೆ. ನಟಿ ಮೇಘನಾ ಸರ್ಜಾ ಗುರುವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಜ್ಯೂನಿಯರ್ ಚಿರಂಜೀವಿ ಹುಟ್ಟಿ ಬಂದ ಹಿನ್ನೆಲೆಯಲ್ಲಿ ಕುಟುಂಬಸ್ಥರು, ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ. ಈಗಾಗಲೇ ಹೆರಿಗೆ ಮುಂಚಿತವಾಗಿಯೇ ಮೇಘನಾರ ಮೈದುನ ನಟ ಧ್ರುವಾ ಸರ್ಜಾ ಅವರು ಮಗುವಿಗೆ ಬೆಳ್ಳಿ ತೊಟ್ಟಿಲು ಮಾಡಿಸಿದ್ದಾರೆ. ಅಕಾಲಿಕವಾಗಿ ನಟ ಚಿರಂಜೀವಿ ಸರ್ಜಾ ನಿಧನವಾಗಿದ್ದರಿಂದ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿ ಕಗ್ಗತ್ತಲೂ ಆವರಿಸಿತ್ತು. ಇದೀಗ ಜ್ಯೂನಿಯರ್ ಚಿರಂಜೀವಿ ಬೆಳಕಾಗಿ ಮೇಘನಾರ ಮಡಿಲು ಸೇರಿದ್ದಾರೆ. ಹೆರಿಗೆಗಾಗಿ ಮೇಘನಾ ರಾಜ್ ಬುಧವಾರ ಕೆ.ಆರ್ ರಸ್ತೆಯಲ್ಲಿರುವ ಅಕ್ಷ ಆಸ್ಪತ್ರೆಗೆ ದಾಖಲಾಗಿದ್ದರು. ಸದ್ಯ ಮೇಘನಾ ತಾಯಿ ಪ್ರಮಿಳಾ ಜೋಷಾಯಿ, ತಂದೆ ಸುಂದರ್ ರಾಜ್ ಸೇರಿ ಕುಟುಂಬಸ್ಥರು ಹಾಗೂ ಸ್ನೇಹಿತರು ಆಸ್ಪತ್ರೆಯಲ್ಲಿ ತಾಯಿ ಮಗುವಿನ ಜೊತೆಗಿದ್ದಾರೆ. ದ್ರುವಾ ಸರ್ಜಾ ಜ್ಯೂನಿಯರ್ ಚಿರಂಜೀವಿಯನ್ನು ಎತ್ತಿ ಮುದ್ದಾಡಿದ್ದಾರೆ. ಇಂದು ಮೇಘನಾ ಹಾಗೂ ಚಿರಂಜೀವಿ ಸರ್ಜಾ ನಿಶ್ಚಿತಾರ್ಥವಾಗಿದ್ದ ದಿನ. 2017ರ ಅ. 22ರಂದು ಚಿರು ಮೇಘನಾ ನಿಶ್ಚಿತಾರ್ಥ ನಡೆದಿತ್ತು. ಇಂದೇ ಕುಟುಂಬಕ್ಕೆ ಮಗುವಿನ ಆಗಮನವಾಗಿದ್ದು ಸರ್ಜಾ ಕುಟುಂಬದಲ್ಲಿ ಸಂತಸ ಇಮ್ಮಡಿಗೊಳಿಸಿದೆ. ರಾಜ್ಯದ ಜನತೆ ತಾಯಿ, ಮಗುವನ್ನು ಆಶೀರ್ವದಿಸಿ ಎಂದು ನಟ ಧ್ರುವಾ ಸರ್ಜಾ ಕೋರಿದ್ದಾರೆ.
ಆಸ್ಪತ್ರೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ನಟ ಧ್ರುವಾ ಸರ್ಜಾ, ಕರ್ನಾಟಕ ರಾಜ್ಯದ ಜನತೆ ತಾಯಿ, ಮಗುವನ್ನು ಆಶೀರ್ವದಿಸಬೇಕು. ತಾಯಿ, ಮಗು ಇಬ್ಬರೂ ಕ್ಷೇಮವಾಗಿದ್ದಾರೆ. ಮಗು ಕೈಯಲ್ಲಿ ಎತ್ತಿಕೊಂಡಾಗ ಆದ ಖುಷಿ ಹೇಳಲು ಸಾಧ್ಯವಿಲ್ಲ ಎಂದರು.ಈ ಹಿಂದೆ ಅಣ್ಣ ಚಿರಂಜೀವಿ ತನಗೆ ಮಗನೇ ಹುಟ್ಟೋದು. ಶಾಲೆಯಲ್ಲಿ ಆತನ ಕಂಪ್ಲೆಂಟ್ಸ್ ಜಾಸ್ತಿ ಆಗಿರುತ್ತವೆ ಎಂದು ಹೇಳಿದ್ದ. ಆತ ಹೇಳಿದಂತೆ ಇಂದು ಗಂಡು ಮಗು ಜನಿಸಿದ್ದು, ತುಂಬಾ ಖುಷಿಯಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.ಚಿರಂಜೀವಿ ತಾಯಿ ಲಕ್ಷ್ಮೀ ದೇವಿ ಸುದ್ದಿಗಾರರೊಂದಿಗೆ ಮಾತನಾಡಿ, ಚಿರು ಕಳೆದುಕೊಂಡಾಗಿನಿಂದಲೂ ನಾವೆಲ್ಲ ತುಂಬಾ ದುಖಃದಲ್ಲಿದ್ದೇವು. ಇದೀಗ ಚಿರು ಪುತ್ರನ ಆಗಮನದಿಂದ ಎಲ್ಲರಿಗೂ ಬಹಳ ಸಂತೋಷವಾಗಿದೆ. ಇದೇ ಚಿರು ಮೇಘನಾ ನಿಶ್ಚಿತಾರ್ಥವಾಗಿತ್ತು. ಮೊಮ್ಮಗನು ಇಂದೇ ಜನಿಸಿದ್ದರಿಂದ ತುಂಬಾ ಖುಷಿಯಾಗಿದೆ. ಮಗು ನೋಡಿದರೇ ಥೇಟ್ ಚಿರಂಜೀವಿ ನೋಡಿದಂತೆ ಅನಿಸಿತು ಎಂದು ಸಂತಸ ವ್ಯಕ್ತಪಡಿಸಿದರು.
ಇಂದು ಬೆಳಗ್ಗೆ 11:07ಕ್ಕೆ ನಟಿ ಮೇಘನಾ ಸರ್ಜಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.ಕಿರಿಯ ಚಿರಂಜೀವಿ ಪಾದಾರ್ಪಣೆ ಮಾಡಿದ ಹಿನ್ನಲೆಯಲ್ಲಿ ಸರ್ಜಾ ಹಾಗೂ ಸುಂದರ್ ರಾಜ್ ಕುಟುಂಬಗಳು ಪರಸ್ಪರ ಸಿಹಿ ಹಂಚಿಕೊಂಡಿದ್ದಾರೆ. ನಟ ಅರ್ಜುನ್ ಸರ್ಜಾ ಹೊರತು ಪಡಿಸಿ, ಕುಟುಂಬಸ್ಥರೆಲ್ಲರೂ ಆಸ್ಪತ್ರೆಗೆ ಆಗಮಿಸಿದ್ದರು. ಚಿರು ಮತ್ತೆ ಹುಟ್ಟಿ ಬಂದಿದ್ದಾರೆ ಎಂಬ ಖುಷಿಗೆ ಅಭಿಮಾನಿಗಳು ಆಸ್ಪತ್ರೆಯ ಎದುರು ಪಟಾಕಿ ಹೊಡೆದು, ಸಿಹಿಹಂಚಿ ಸಂಭ್ರಮಿಸಿದರು.