ಲಯನ್ಸ್ ಶಾಲಾ ಭವನದಲ್ಲಿ ಎಂ ವಿಶ್ವೇಶ್ವರಯ್ಯ ದಿನಾಚರಣೆ
ರಾಣೇಬೆನ್ನೂರು 23: ತಂತ್ರಜ್ಞಾನ ಅಪಾರವಾಗಿ ಬೆಳೆದಿದೆ ಆದರೂ ಸಹ ನಮ್ಮ ಇತಿಹಾಸದ ಅಭಿಯಂತರರು ಮಾಡಿದ ಕೆಲಸ, ಮತ್ತು ನಿರ್ಮಿಸಿದ ಬಹುಮಾಡಿ ಕಟ್ಟಡಗಳು ನೋಡಿದರೆ ಅಂದಿಗೂ ಇಂದಿಗೂ ಬಹಳಷ್ಟು ಬದಲಾವಣೆಗಳಾಗಿವೆ ಎಷ್ಟೇ ಬೆಳವಣಿಗೆ ಕಂಡರೂ ಸಹ ಇಂದಿನ ಅಭಿಯಂತರರು ಇತಿಹಾಸದ ಅವಲೋಕನವನ್ನು ಮಾಡುವುದರ ಮೂಲಕ ಸಾಗಬೇಕಾಗಿದೆ ಎಂದು ಎಂ.ಜಿ.ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಲ್ಲೇಶಪ್ಪ ಅರಕೇರಿ ಹೇಳಿದರು.
ಅವರು ಶುಕ್ರವಾರ ರಾತ್ರಿ, ಮೆಡ್ಲೇರಿ ರಸ್ತೆ ಲಯನ್ ಶಾಲಾ ಭವನದಲ್ಲಿ ಆಯೋಜಿಸಲಾಗಿದ್ದ ಸರ್. ಎಂ.ವಿಶ್ವೇಶ್ವರಯ್ಯ ಅವರ ಜನ್ಮ ದಿನಾಚರಣೆ ಮತ್ತು ಕ್ಲಬ್ಬಿಗೆ ಆರ್ಸಿ, ಟಿ ವೀರಣ್ಣ ಮತ್ತು ಝೆಡ್ಸಿ ಕೆ ವೈ ಬಾಜಿರಾಯ ಅವರ ಅಧಿಕೃತ ಬೇಟಿ ಸಮಾರಂಭದಲ್ಲಿ, ಪಾಲ್ಗೊಂಡು ಮಾತನಾಡಿದರು. ಇಂದು ಎಲ್ಲ ಕ್ಷೇತ್ರಗಳು ವ್ಯವಹಾರಿಕವಾಗಿ ಸಾಗಿವೆ ಆದರೆ ಜೀವನದ ಕೊನೆಯವರೆಗೂ ಇರುವ ಕಟ್ಟಡಗಳು ಯಾವುದೇ ಕಾರಣಕ್ಕೂ ಭದ್ರತೆಯಿಂದ ನಿರ್ಮಾಣವಾಗಬಾರದು ಅದಕ್ಕಾಗಿ ಅಭಿಯಂತರರು ಸಮಾಜದಲ್ಲಿ ಅತ್ಯಂತ ಜವಾಬ್ದಾರಿತವಾಗಿ ತಮ್ಮ ಕರ್ತವ್ಯಗಳನ್ನು ನಿಭಾಯಿಸುತ್ತಾ, ಪ್ರೀತಿ, ವಿಶ್ವಾಸ,ಮತ್ತು ಗೌರವಕ್ಕೆ ಪಾತ್ರರಾಗಬೇಕಾದ ಅಗತ್ಯವಿದೆ ಎಂದರು.
ಕ್ಲಬ್ಗೆ ಭೇಟಿಯಿತ್ತ ಎಂ,ಜೆ, ಎಫ್, ಕೆ. ವೈ. ಬಾಜಿರಾವ್ ಅವರನ್ನು ಕ್ಲಬ್ಬಿನ ಪರವಾಗಿ ಅಭಿನಂದಿಸಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಯಾವುದೇ ಸಂಘಟನೆಗಳು, ಪರಿಣಾಮಕಾರಿಯಾಗಿ ಅಭಿವೃದ್ಧಿ ಕಾಣಬೇಕಾದರೆ ಅಲ್ಲಿರುವ ಸದಸ್ಯರ ಮತ್ತು ಹಿರಿಯ ಮಾರ್ಗದರ್ಶಕರ ಸಹಕಾರ ಬಹು ಮುಖ್ಯವಾಗಿದೆ. ಅಂತಹ ಸಹಕಾರವನ್ನು ಪಡೆದ ಲಯನ್ಸ್ ಸೇವಾ ಸಂಸ್ಥೆ 45 ವರ್ಷಗಳನ್ನು ಕಳೆದಿರುವುದು ಸ್ವಾಗತಾರ್ಹವಾಗಿದೆ ಎಂದು ತಮ್ಮ ಕೃತಜ್ಞತೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಅಭಿಯಂತರರ ದಿನಾಚರಣೆ ನಿಮಿತ್ತ ವಿವಿಧ ಇಲಾಖೆಗಳ ಅಭಿಯಂತರರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಸೇವಾ ಸಂಸ್ಥೆ ಅಧ್ಯಕ್ಷ ಪ್ರಭುಲಿಂಗಪ್ಪ ಹಲಗೇರಿ, ಅವರು ಸ್ವಾಗತಿಸಿ, ಸಮಾಜದಲ್ಲಿ ಪ್ರತಿಯೊಬ್ಬ ನಾಗರಿಕರು ಸಮಾನತೆಯಿಂದ ತಮ್ಮ ಬದುಕನ್ನು ಸಾಗಿಸಬೇಕಾದರೆ ಸಹಾಯ ಸಹಕಾರ ನೀಡುವ ಸಂಘ ಸಂಸ್ಥೆಗಳ ಪಾತ್ರ ಎಂಥ ಪ್ರಮುಖವಾಗಿದೆ, ವಾಣಿಜ್ಯ ನಗರದಲ್ಲಿ 46 ವರ್ಷಗಳ ಹಿಂದೆ ಜನ್ಮತಾಳಿದ ಲಯನ್ಸ್ ಸಂಸ್ಥೆ, ಇಂದು ಜನ ಸಮುದಾಯದಲ್ಲಿ ಆರೋಗ್ಯ ಶಿಕ್ಷಣ, ಸಹಕಾರ, ಕೌಶಲ್ಯ, ಮಕ್ಕಳಲ್ಲಿ ಸಾಂಸ್ಕೃತಿಕತೆ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದರು. ವೇದಿಕೆಯಲ್ಲಿ ಸಂಸ್ಥೆಯ ಗಣ್ಯರಾದ, ಬಸವರಾಜ ಬಡಿಗೇರ್, ಬಿ.ಎಸ್. ಪಾಟೀಲ, ಅಮೋಘ ಬದಾಮಿ, ಶಿವಪ್ಪ ಗುರಿಕಾರ್, ಎನ್ ಕೆ.ಕಠಾರಿ, ಬಸವರಾಜ ಪಾಟೀಲ್, ಕೆ ಸಿ ಎಮ್ಮಿ, ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿ ಸೌಜನ್ಯ ಪ್ರಾರ್ಥಿಸಿದರು. ಕಾರ್ಯದರ್ಶಿ ಕಿರಣ್ ಅಂತರವಳ್ಳಿ ವರದಿ ವಾಚಿಸಿದರು. ಸಂಜಿತ್ ಹಲಗೇರಿ ಧ್ವಜ ವಂದಿಸಿದರು. ಶಿಕ್ಷಕ ಆರ್ ವಿ ಸೂರಗೊಂಡ ನಿರೂಪಿಸಿದರು. ಖಜಾಂಚಿ ಗುತ್ಯಪ್ಪ ಹಳೆಮನಿ ವಂದಿಸಿದರು.