ಗದ್ದುಗೆ ಸ್ಥಳಾಂತರ ವಾರದಲ್ಲಿ ನಿರ್ಧಾರ : ಎ.ಸಿ. ಗಂಗಪ್ಪ
ಗುಳೇದಗುಡ್ಡ,ಜು.6: ರಸ್ತೆ ಮಧ್ಯದಲ್ಲಿ ಬರುವ ಗದ್ದುಗೆಯನ್ನು ಸ್ಥಳಂತರಿಸುವ ಕುರಿತು ಇನ್ನು ಒಂದು ವಾರದ ಬಳಿಕ ನಿರ್ಧಾರ ತೆಗೆದುಕೊಳ್ಳಲಾಗುವುದೆಂದು ಬಾಗಲಕೋಟೆಯ ಉಪವಿಭಾಗಾಧಿಕಾರಿ ಎಂ.ಗಂಗಪ್ಪ ಹೇಳಿದ್ದಾರೆ.
ಮಂಗಳವಾರ ಪಟ್ಟಣದಲ್ಲಿ ನಡೆದಿರುವ ರಾಜ್ಯ ಹೆದ್ದಾರಿಯ ಕಾಮಗಾರಿಯನ್ನು ವೀಕ್ಷಿಸಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರ ನೀಡಿ, ಪಟ್ಟಣದಲ್ಲಿ ಹಾಯ್ದು ಹೋಗಿರುವ ಸಂಕೇಶ್ವರ- ಕೂಡಲ ಸಂಗಮ ರಾಜ್ಯ ಹೆದ್ದಾರಿಯ ನಿರ್ಮಾಣ ಕಾರ್ಯ ಪ್ರಗತಿ ಹಂತದಲ್ಲಿದೆ. ಅಂಚೆ ಕಚೇರಿ ಹತ್ತಿರ ಹಾಯ್ದಿರುವ ರಸ್ತೆಯ ಮಧ್ಯದಲ್ಲಿ ಮುರಘಾಮಠದ ಲಿಂ. ಶ್ರೀಗಳ ಗದ್ದುಗೆ ಇದೆ. ಅದರ ಸ್ಥಳಾಂತರದ ವಿಷಯವಾಗಿ ಒಂದು ವಾರದ ಒಳಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದರು.
ಇದು ಧಾರ್ಮಿಕ ವಿಷಯವಾಗಿರುವುದರಿಂದ ಅದರ ಸೂಕ್ಷ್ಮತೆಯನ್ನು ಅರಿತು ತಹಸೀಲ್ದಾರ್ ಅವರ ಜೊತೆಗೆ ಚರ್ಚಿಸಿ, ನಿರ್ಧಾಯ ಕೈಗೊಳ್ಳಬೇಕಾಗುತ್ತದೆ. ತಕ್ಷಣ ಇದಕ್ಕೆ ನಿರ್ಧಾರ ತೆಗೆದುಕೊಳ್ಳಲು ಬರುವುದಿಲ್ಲ. ಗದ್ದುಗೆ ಪಕ್ಕದಲ್ಲಿ ರಸ್ತೆ ಬಂದಿರಲಿ ಅಥವಾ ರಸ್ತೆ ಪಕ್ಕದಲ್ಲಿ ಗದ್ದುಗೆ ಬಂದಿರಲಿ ನಾವು ಸದ್ಯ ರಸ್ತೆಯ ಸ್ಥಳವನ್ನು ಸರ್ಕಾರದ ಜಗೆ ಎಂತಲೇ ಒಪ್ಪಿಕೊಳ್ಳಬೇಕಾಗುತ್ತದೆ. ಸಿಟಿ ಸರ್ವೇ ದಾಖಲೆಗಳಲ್ಲಿಯೂ ಇದಕ್ಕೆ ಸಂಬಂಧಪಟ್ಟ ಮಾಹಿತಿ ಇಲ್ಲ. ಹೀಗಾಗಿ ಚರ್ಚೆ ಮುಖಾಂತರವೇ ಒಂದು ನಿಧಾರಕ್ಕೆ ಬರಲಾಗುತ್ತದೆ ಎಂದು ಎ.ಸಿ. ಗಂಗಪ್ಪ ಮಾಧ್ಯಮ ಮಿತ್ರರ ಪ್ರಶ್ನೆಗಳಿಗೆ ಹೀಗೆ ಉತ್ತರ ನೀಡಿದರು.
ರಸ್ತೆ ಮಧ್ಯದಲ್ಲಿರುವ ಗದ್ದುಗೆಯನ್ನು ಸುಮಾರು 10 ಅಡಿ ಸರಿಸಿ ಡಿವೈಡರ್ ಮಧ್ಯದಲ್ಲಿ ಗದ್ದುಗೆ ಇಟ್ಟುಕೊಂಡೆ ಸರ್ಕಲ್ ಮಾಡಿದರೂ ತಪ್ಪೇನಿಲ್ಲ. ಹಾಗೆ ಮಾಡಿದರೂ ಗದ್ದುಗೆಯೂ ಉಳಿಯುತ್ತದೆ ರಸ್ತೆ ಅಗಲೀಕರಣಕ್ಕೂ ಯಾವುದೇ ತೊಂದರೆ ಬರಲಾರದು ಎಂದು ಸ್ಥಳದಲ್ಲಿದ್ದ ಕೆಲವರು ಮಾತನಾಡುತ್ತಿದ್ದರು. ಗುಳೇದಗುಡ್ಡ ತಾಲೂಕು ಕೇಂದ್ರವಾದ ಬಳಿಕ ಈ ಭಾಗದ ಶಾಸಕ, ಮಾಜಿ ಸಿಎಂ ಸಿದ್ದರಾಮಯ್ಯನವರ ಮಹತ್ವಾಕಾಂಕ್ಷಿ ಕಾಮಗಾರಿಗಳಲ್ಲಿ ಈ ರಸ್ತೆಯೂ ಒಂದು. ಮೂವತ್ತೈದು ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆದಿದೆ. ಆರಂಭದ ದಿನದಿಂದಲೂ ಹಲವು ಹತ್ತಾರು ಕಂಟಕಗಳು ಇದಕ್ಕೆ ಬರುತ್ತಲೇ ಇವೆ. ಹೀಗಾಗಿ ರಸ್ತೆ ಕಾಮಗಾರಿ ಕುಂಟುತ್ತ ಸಾಗಿದೆ ಎಂದು ಅಲ್ಲಿದ್ದ ಸಾರ್ವಜನಿಕರು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಚಿದಾನಂದ ಮಠಪತಿ, ಲೋಕೋಪಯೋಗಿ ಇಇಇ ಶಿವಾನಂದ ಜಾಡರ, ಅಭಿಯಂತರ ಎ.ಕೆ.ಮಕಾನದಾರ, ಕಂದಾಯ ನೀರೀಕ್ಷಕ ಮಹಾಂತೇಶ ಅಂಗಡಿ, ಸರ್ವೇಯರ್ ಪ್ರಶಾಂತ ಅಗಸಿಮನಿ ಸೇರಿದಂತೆ ಇತರರು ಇದ್ದರು.