ನೇಕಾರರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ : ಶೀಲವಂತ
ಗುಳೇದಗುಡ್ಡ 09: ನೇಕಾರರಿಗೆ ಕಡಿಮೆ ಬಡ್ಡಿ ದರದಲ್ಲಿ ನೀಡುವ ಸಾಲವನ್ನು ಬ್ಯಾಂಕಿನಿಂದ ಪಡೆದು ಸಕಾಲಕ್ಕೆ ಮರುಪಾವತಿ ಮಾಡಿ ಸಾಲದ ಸದುಪಯೋಗ ಪಡಿಸಿಕೊಳ್ಳಬೇಕೆಂದು ಬ್ಯಾಂಕಿನ ಅಧ್ಯಕ್ಷ ರಾಜಶೇಖರ ಶೀಲವಂತ ಹೇಳಿದರು.
ಅವರು ಮಂಗಳವಾರ ಸಾಯಂಕಾಲ ಪಟ್ಟಣದ ಲಕ್ಷ್ಮೀ ಸಹಕಾರಿ ಬ್ಯಾಂಕಿನಲ್ಲಿ ಜರುಗಿದ ನೇಕಾರರಿಗೆ ಕಡಿಮೆ ಬಡ್ಡ ದರದಲ್ಲಿ ಸಾಲ ವಿತರಣೆಯ ಅರ್ಜಿಗಳನ್ನು ಸಾಂಕೇತಿಕವಾಗಿ ವಿತರಿಸಿ ಮಾತನಾಡಿ, ಸರ್ಕಾರ ನೇಕಾರರ ಆರ್ಥಿಕ ಸಬಲೀಕರಣಕ್ಕಾಗಿ ಸರ್ಕಾರ ವಿಶೇಷ ಯೋಜನೆಯೊಂದನ್ನು ತಂದಿದೆ. ಇದು 2016 ರಲ್ಲಿಯೇ ಜಾರಿಗೆ ಬಂದಿದ್ದರೂ ಕೆಲ ತಾಂತ್ರಿಕ ತೊಂದರೆಗಳಿದ್ದುದರಿಂದ ಇಲ್ಲಿಯ ತನಕ ನಮ್ಮ ಬ್ಯಾಂಕಿನಿಂದ ನೇಕಾರರಿಗೆ ಸೌಲಭ್ಯ ನೀಡಲು ಆಗಿರಲಿಲ್ಲ. ಸದ್ಯ ತೊಡಕುಗಳ ಸರಳೀಕರಣ ವಾಗಿದ್ದರಿಂದ ಪ್ರ.ಶ.1 ಹಾಗೂ ಪ್ರ.ಶ.3 ರ ಬಡ್ಡಿ ದರದಲ್ಲಿ ಸಾಲ ವಿತರಿಸಲಾಗುತ್ತದೆ. ಆದರೆ ಈ ಸಾಲ ಪಡೆದ ನೇಕಾರರು ಪಡೆದ ವರ್ಷದೊಳಗೆ ಮರುಪಾವತಿ ಮಾಡಬೇಕು. ಹಾಗೆ ಮಾಡದಿದ್ದರೆ ಸರ್ಕಾರದ ಯಾವ ರಿಯಾಯತಿಯೂ ದೊರಕಲಾರದು. ಸಾಲ ಮರುಪಾವತಿ ಮಾಡುವಾಗ ಅಸಲಿನ ಜೊತೆಗೆ ಪ್ರ.ಶ. 13 ರ ಬಡ್ಡಿ ದರದಂತೆ ಕಟ್ಟಬೇಕು. ಸರ್ಕಾರದಿಂದ ರಿಯಾಯತಿ ಬಂದ ಬಳಿಕ ನಿಮ್ಮ ಖಾತೆಗೆ ಪ್ರ.ಶ.10 ರಿಯಾಯತಿ ಹಣವನ್ನು ಜಮಾ ಮಾಡಲಾಗುವುದು. ನೇಕಾರರನ್ನು ಗುರ್ತಿಸುವ ಕೆಲಸ ಜಿಲ್ಲೆಯ ಜವಳಿ ಇಲಾಖೆಗಿದ್ದೂ ನೇಕಾರರು ಭರ್ತಿ ಮಾಡಿ ನೀಡಿದ ಅರ್ಜಿಗಳನ್ನು ಜವಳಿ ಇಲಖೆಗೆ ಕೊಡಲಾಗುತ್ತದೆ. ಅವರು ನಿರ್ಣಯಿಸಿ ಸೂಚಿಸಿದ ನೇಕಾರರಿಗೆ ಮಾತ್ರ ಸಾಲ ನೀಡಲಾಗುತ್ತದೆ. ಈ ಸಾಲ ನೀಡಲು ನೇಕಾರರನ್ನು ಗುರ್ತಿಸುವ ಯಾವ ಹಕ್ಕೂ ಬ್ಯಾಂಕಿಗಿಲ್ಲ. ಜವಳಿ ಇಲಾಖೆಯ ಮಾರ್ಗದರ್ಶನದಂತೆ ಬ್ಯಾಂಕು ಸಾಲ ನೀಡುತ್ತದೆ ಎಂದು ಸ್ಪಷ್ಟವಾಗಿ ನೇಕಾರರಿಗೆ ಮನವರಿಕೆ ಮಾಡಿದರು.
ನಿರ್ದೇಶಕ ಮಂಡಳಿಯ ಗಣೇಶ ಶೀಲವಂತ, ಮುರಗೇಶ ರಾಜನಾಳ, ಸಂಜಯ ಕಾರಕೂನ, ಸಂಗಮೇಶ ಹುನಗುಂದ, ಸಂಪತ್‌ಕುಮಾರ ರಾಠಿ, ಈರಣ್ಣ ಕುರಹಟ್ಟಿ, ಲಕ್ಷ್ಮೀಬಾಯಿ ರೂಡಗಿ ಹಾಗೂ ಇತರರು ವೇದಿಕೆ ಮೇಲೆ ಇದ್ದರು. ಇದೇ ಸಂದರ್ಭದಲ್ಲಿ ಸಾಂಕೇತಿಕವಾಗಿ 5 ಜನ ನೇಕಾರರಿಗೆ ಸಾಲದ ಅರ್ಜಿಗಳನ್ನು ವಿತರಿಸಲಾಯಿತು. ಉಪಾಧ್ಯಕ್ಷ ಕಮಲಕಿಶೋರ ಮಾಲಪಾಣಿ ಸ್ವಾಗತಿಸಿದರು. ಬ್ಯಾಂಕಿನ ಸಿಬ್ಬಂದಿ ರವಿ ಅರಕಾಲಚಿಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕ ದೀಪಕ ನೇಮದಿ ವಂದಿಸಿದರು.
ನೇಕಾರರ ಒತ್ತಾಯ : ನೇಕಾರರು ಸಾಲ ಪಡೆದು ಆರ್ಥಿಕ ಅನುಕೂಲ ಮಾಡಿಕೊಳ್ಳಲು ತಿಂಗಳುಗಳೇ ಬೇಕಾಗುತ್ತವೆ. ಕಾರಣ ಸಾಲ ಮರುಪಾವತಿಗೆ ಗರಿಷ್ಟ 5 ವರ್ಷ ಅವಧಿ ನಿಗದಿಪಡಿಸಿದರೆ ಅನುಕೂಲವಾಗುತ್ತದೆ ಎಂದು ಬ್ಯಾಂಕಿನ ಅಧ್ಯಕ್ಷರಿಗೆ ಸಭೆಯಲ್ಲಿ ನೇಕಾರರ ಪರವಾಗಿ ರಂಗಪ್ಪ ಶೇಬಿನಕಟ್ಟಿ ಒತ್ತಾಯಿಸಿದರು. ತಮ್ಮ ಸಲಹೆಯನ್ನು ಜವಳಿ ಇಲಾಖೆಗೆ ಮನವರಿಕೆ ಮಾಡುವುದಾಗಿ ಬ್ಯಾಂಕಿನ ಅಧ್ಯಕ್ಷರು ಹಾಗು ನಿರ್ದೇಶಕ ಮಂಡಳಿ ಭರವಸೆ ನೀಡಿತು.
ಸಿ ಸರ್ಕಾರದ ನಿಯಮಾವಳಿ ಪ್ರಕಾರ ಕೈ ಮಗ್ಗ ನೇಕಾರರು ಮಗ್ಗ ಖರೀದಿಗಾಗಿ ಗರಿಷ್ಟ ರೂ. 30 ಸಾವಿರ ಅಥವಾ ದುಡಿಯುವ ಬಂಡವಾಳಕ್ಕಾಗಿ ರೂ.45 ಸಾವಿರ ಪ್ರತಿ ಮಗ್ಗಕ್ಕೆ ಪಡೆಯಬಹುದು. ವಿದ್ಯುತ್ ಮಗ್ಗಗಳ ನೇಕಾರರು ಮಗ್ಗ ಖರೀದಿಗಾಗಿ ಗರಿಷ್ಟ ರೂ.1,50,000 ಅಥವಾ ದುಡಿಯುವ ಬಂಡವಾಳಕ್ಕಾಗಿ ಗರಿಷ್ಟ ರೂ. 45 ಸಾವಿರ ಪ್ರತಿ ಮಗ್ಗಕ್ಕೆ ಪಡೆಯಬಹುದು.