ನಿವೃತ್ತ ಹೆಸ್ಕಾಂ ನೌಕರನ ಮನೆ ಮೇಲೆ ಲೋಕಾಯುಕ್ತ ದಾಳಿ, ಅಪಾರ ನಗ, ನಾಣ್ಯ ಪತ್ತೆ
ರಾಣಿಬೆನ್ನೂರು 08: ಈಶ್ವರ ನಗರದ ನಿವಾಸಿ, ಹೆಸ್ಕಾಂ ನಿವೃತ್ತ ನೌಕರ ಬಸವರಾಜ ಮಳಿಮಠ ಅವರ ಮನೆಯ ಮೇಲೆ ಮಂಗಳವಾರ ಧಾರವಾಡ ಲೋಕಾಯುಕ್ತ ಪೊಲೀಸರು ನಡೆಸಿದ ದಾಳಿ ವೇಳೆ 97 ಲಕ್ಷ ನಗದು ಸೇರಿದಂತೆ ಕೋಟ್ಯಂತರ ಮೌಲ್ಯದ ಆಸ್ತಿಪಾಸ್ತಿ ಪತ್ತೆಯಾಗಿದೆ.
ನಗರದ ಮನೆಯಲ್ಲಿ 97 ಲಕ್ಷ ನಗದು, ಬ್ಯಾಂಕ್ ಅಕೌಂಟಿನಲ್ಲಿ 30 ಲಕ್ಷ ಸೇರಿದಂತೆ ಒಟ್ಟು 1.27 ಕೋಟಿ ನಗದು ಪತ್ತೆಯಾಗಿದೆ. 317 ಗ್ರಾಂ ಚಿನ್ನಾಭರಣ, 26 ತೊಲೆ ಬೆಳ್ಳಿ ಹಾಗೂ ಇನ್ಸುರೆನ್ಸ್ ಪಾಲಿಸಿಗಳಿಗೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಲೋಕಾಯುಕ್ತ ಪೊಲೀಸರು ವಶಪಡಿಸಿಕೊಂಡಿದ್ದಾರೆ.ರಾಣಿಬೆನ್ನೂರು ಮತ್ತು ದಾವಣಗೆರೆಯಲ್ಲಿ ಒಟ್ಟು 3 ಭವ್ಯ ಮನೆಗಳು, ರಾಣಿಬೆನ್ನೂರಿನ ಸುವರ್ಣ ಪಾರ್ಕ್ ಬಳಿ 3 ಖಾಲಿ ನಿವೇಶನಗಳು, ಚಿದಂಬರ ನಗರದಲ್ಲಿ ವಾಣಿಜ್ಯ ಕಟ್ಟಡ ಸೇರಿದಂತೆ ಅಪಾರ ಆಸ್ತಿ ಪತ್ತೆಯಾಗಿದೆ.ಹೆಸ್ಕಾಂ ಇಲಾಖೆಯಲ್ಲಿ ಸ್ಟೋರ್ ಕೀಪರ್ಆಗಿದ್ದ ವೇಳೆ ಟ್ರಾನ್ಸ್ಫಾರ್ಮರ್ ವಿತರಣೆಯಲ್ಲಿ ಭಾರಿ ಅವ್ಯವಹಾರ ನಡೆಸಿದ ಆರೋಪದ ಹಿನ್ನೆಲೆ ಯಲ್ಲಿ ಲೋಕಾಯುಕ್ತ ದಾಳಿ ನಡೆದಿದೆ. ಕಿರಿಯ ಎಂಜಿನಿಯರ್ ಆಗಿ ಭಡ್ತಿ ಹೊಂದಿದ್ದ ಇವರು 2023ರ ಮೇ ತಿಂಗಳಲ್ಲಿ ನಿವೃತ್ತಿ ಹೊಂದಿದ್ದರು ಎಂದು ಮೂಲಗಳು ತಿಳಿಸಿವೆ.ಧಾರವಾಡ ಲೋಕಾಯುಕ್ತ ಎಸ್ಪಿ ಸತೀಶ ಚಿಟಗುಬ್ಬಿ ಮತ್ತು ಡಿವೈಎಸ್ಪಿ ವೆಂಕನಗೌಡ ಪಾಟೀಲ ಅವರ ನೇತೃತ್ವದಲ್ಲಿ ದಾಳಿ ನಡೆದಿದ್ದು, ತನಿಖೆ ಮುಂದುವರಿದಿದೆ. ಎಂದು ಹೇಳಿದ್ದಾರೆ.