ಗುಳೇಗುಡ್ಡ

ಕರ್ಫ್ಯೂ ಬಿಸಿಗೆ ಗುಳೇದಗುಡ್ಡ ಪಟ್ಟಣ ಸ್ಥಬ್ಧ

ಕರ್ಫ್ಯೂ ಬಿಸಿಗೆ ಗುಳೇದಗುಡ್ಡ ಪಟ್ಟಣ ಸ್ಥಬ್ಧ
ಗುಳೇದಗುಡ್ಡದ ಜನನಿಬಿಡ ಭಾರತ್ ಮಾರ್ಕೇಟ್ ಬುಧವಾರ ಬಿಕೋ ಎನ್ನುವ ದೃಶ್ಯ

ಅಗತ್ಯ ದಿನಸಿ ಖರೀದಿಸಲು ಮುಗಿಬಿದ್ದ ಜನ: ಮರಳಿ ಗೂಡು ಸೇರಿ ನಿಟ್ಟುಸಿರು ಬಿಟ್ಟ ಕೂಲಿಕಾರ್ಮಿಕರು 

ಗುಳೇದಗುಡ್ಡ,ಏ.28 :ಬೆಳಿಗ್ಗೆಯಿಂದ ಪಟ್ಟಣದ ಒಳಗೆ ಖಾಸಗಿ ವಾಹನಗಳ ಭರಾಟೆಯಿತ್ತು. ಬೇರೆ ಬೇರೆ ಕಡೆಗಳಿಂದ ಬಂದಿದ್ದ ಕೂಲಿಕಾರ್ಮಿಕರು ತಮ್ಮ ದುಡಿಮೆಯ ನೆಲೆಗಳನ್ನು ತೊರೆದು ಪಟ್ಟಣಕ್ಕೆ ಹಾಗೂ ತಾಲೂಕಿನ ವಿವಿಧ ಗ್ರಾಮಗಳಿಗೆ ಬಂದು ನಿಟ್ಟುಸಿರು ಬಿಟ್ಟರು. ಅಗತ್ಯ ದಿನಸಿ ವಸ್ತುಗಳನ್ನು ಖರೀದಿಸಲು ಸಾರ್ವಜನಿಕರು ಕಿರಾಣಿ, ತರಕಾರಿ ಹಾಗೂ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗಲು ಅಂಗಡಿಗಳಿಗೆ ಮುಗಿ ಬಿದ್ದಿದ್ದರು. 10 ಗಂಟೆ ನಂತರ ಪೊಲೀಸರ ಕೈರುಚಿ ತಿನ್ನಬೇಕಾಗುತ್ತೆಂಬ ಭಯದಲ್ಲಿ ಜನ ಮನೆಯಿಂದ ಮಾರ್ಕೆಟ್‌ಗೆ ಬಂದು ವಸ್ತುಗಳನ್ನು ಖರೀದಿಸಿ ಗಡಿಬಿಡಿಯಲ್ಲಿ ಮನೆಗಳತ್ತ ಹೋಗುವ ದೃಶ್ಯ ಕಂಡು ಬಂದಿತು.    

ಬೆಳಗಿನ ಜಾವ 6 ಗಂಟೆಯಿಂದ 10 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿರುವುದರಿಂದ ಜನರು ಬುಧವಾರ ಬೆಳಿಗ್ಗೆಯೇ ರಸ್ತೆಗಿಳಿದು ಮಾರುಕಟ್ಟೆಗೆ ಬಂದು ಅಗತ್ಯವಸ್ತುಗಳನ್ನು ಖರೀದಿಸುವ, ಬೇರೆ ಸ್ಥಳಗಳಿಂದ ಖಾಸಗಿ ವಾಹನಗಳಲ್ಲಿ, ಬೈಕ್‌ಗಳಲ್ಲಿ ಬರುವ ಭರಾಟೆ ಹೆಚ್ಚಾಗಿತ್ತು. ತಾಲೂಕಿನ ವಿವಿಧ  ಗ್ರಾಮಗಳಿಂದ ಜನ ಬೆಳಿಗ್ಗೆ ಪಟ್ಟಣಕ್ಕೆ ಬಂದು ಮದುವೆ ಸಂತೆ, ನಿತ್ಯದ ಸಂತೆಯನ್ನು ಮಾಡಿಕೊಂಡು  ಗಡಿಬಿಡಿಯಲ್ಲಿ ಹೋಗುವುದು ಕಂಡು ಬಂದಿತು. 

ದೂರದ ಮಹಾರಾಷ್ಟ್ರ, ಬೆಂಗಳೂರು, ಮಂಗಳೂರು, ಉಡುಪಿ ಹೀಗೆ ವಿವಿಧೆಡೆಗಳಿಂದ  ಉದ್ಯೋಗ ತೊರೆದು ಬಂದಿರುವ ಎಲ್ಲರೂ ಕೋವಿಡ್ ಮಾಡಿಸಿಕೊಳ್ಳುವ ಅಗತ್ಯವಿದೆ. ತಾಲೂಕಿನ ವಿವಿಧ ಗ್ರಾಮಗಳಿಗೆ ಹಾಗೂ ಪಟ್ಟಣಕ್ಕೆ ಬಂದಿರುವ ಕೋವಿಡ್ ಲಕ್ಷಣಗಳಿರದಿದ್ದರೂ ಟೆಸ್ಟ್‌ ಮಾಡಿಸಿಕೊಳ್ಳುವುದು ಆರೋಗ್ಯ ದೃಷ್ಠಿಯಿಂದ ಅಗತ್ಯವಾಗಿದೆ. ಎಲ್ಲರೂ ಸರ್ಕಾರಿ ಆಸ್ಪತ್ರೆಗೆ ಬಂದು ಕೋವಿಡ್ ಟೆಸ್ಟ್‌ ಮಾಡಿಸಿಕೊಳ್ಳಬೇಕೆಂದು ಇಲ್ಲಿನ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ನಾಗರಾಜ ಕುರಿ ವಿನಂತಿಸಿಕೊಂಡಿದ್ದಾರೆ.  

ಪಟ್ಟಣದ ಬಸ್ ನಿಲ್ದಾಣದ ಹೊರ​‍್ರದೇಶ, ಹಾದಿ ಬಸವೇಶ್ವರ ಗುಡಿ ಹತ್ತಿರ, ಹಳೆ ಮಾರ್ಕೇಟ್, ಕಾಲೇಜ್ ಸರ್ಕಲ್, ಭಾರತ್ ಮಾರ್ಕೆಟ್, ಚೌಬಝಾರ್ ಸೇರಿದಂತೆ ಇನ್ನೂ ಹಲವು ಸ್ಥಳಗಳು ನಿತ್ಯ ಜನದಟ್ಟಣೆಯಿಂದ ಕೂಡಿರುತ್ತಿದ್ದವು. ಆದರೆ ಜನತಾ ಕರ್ಫ್ಯೂ ಪ್ರಭಾವದ ಬಿಸಿ ಜನರಿಗೆ ತಾಕಿದ್ದರಿಂದ ಸ್ವಯಂ ಪ್ರೇರಣೆಯಿಂದಲೇ ಜನ ಬೀದಿಗಿಳಿಯಲಿಲ್ಲ. ಮದ್ಯದಂಗಡಿಗಳು ಬೆಳಿಗ್ಗೆ 10 ರ ನಂತರ ಬಂದ್ ಆಗಿದ್ದರಿಂದ ಅಲ್ಲಿಯೂ ಮದ್ಯಪ್ರಿಯರ ಸುಳಿವು ಇರಲಿಲ್ಲ. ಬಸ್ ನಿಲ್ದಾಣದ ಎದುರಿಗೆ ಸಾಕಷ್ಟು ಜನದಟ್ಟನೆ ಇರುವ ಸ್ಥಳ. ಪ್ರಥಮ ದಿನದ ಕರ್ಫ್ಯೂ ಅಲ್ಲಿಯೂ ಬಿಸಿ ತಾಗಿಸಿತ್ತು.   

ತಾಲೂಕು ಆಡಳಿತ, ಪೋಲಿಸ್ ಇಲಾಖೆಗಳ ಕಟ್ಟು ನಿಟ್ಟಿನ ಕ್ರಮ ಬುಧವಾರ ಕಂಡು ಬಂದಿತು. ಪಟ್ಟಣದಲ್ಲಿ ಎಲ್ಲ ಅಂಗಡಿಗಳನ್ನು ಬೆಳಿಗ್ಗೆ 10 ಗಂಟೆಯಿಂದ ಮುಚ್ಚಿಸಿದ್ದರಿಂದ ಜನ ಹೊರಗಡೆ ಬರಲಿಲ್ಲ. ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಪೋಲಿಸ್ ಬಂದೋಬಸ್ತ ವ್ಯವಸ್ಥಿತವಾಗಿತ್ತು.   

ತಹಸೀಲ್ದಾರ ಜಿ.ಎಂ.ಕುಲಕರ್ಣಿ ಅವರ ತಂಡ ಹಾಗೂ ಪಿಎಸೈ ಪುಂಡಲೀಕ ಪಟಾತರ್ ಅವರ ತಂಡದ ಗಸ್ತು ನಿರಂತರ ಕಂಡು ಬಂದಿದ್ದರಿಂದ ಜನರ ಸುಳಿವು ರಸ್ತೆ ಮೆಲೆ ಕಂಡು ಬರಲಿಲ್ಲ. ವಾಹನ ಇಲ್ಲದ ಸಮಯ ನೋಡಿ ಕೆಲ ಕಿಡಗೇಡಿಗಳ ತ್ರಿರೈಡ್ ಬೈಕ್ ಸವಾರಿ ಅಪರೂಪಕ್ಕೆ ಕಂಡು ಬರುತ್ತಿತ್ತು. ಪ್ರಥಮ ದಿನದ ಜನತಾ ಕರ್ಫ್ಯೂ ಪಟ್ಟಣದಲ್ಲಿ ಸಂಪೂರ್ಣ ಯಶಸ್ವಿಯಾದರೂ ಹೊರಗಡೆಯಿಂದ ರಾತ್ರಿ ಹೊತ್ತು ಖಾಸಗಿ ವಾಹನಗಳಲ್ಲಿ ಬರುವವರನ್ನು ಕೋವಿಡ್ ಟೆಸ್ಟ್‌ ಮಾಡಿಸುವ ಪ್ರಕ್ರಿಯೆ ಇನ್ನೂ ನಾಲ್ಕಾರು ದಿನ  ನಿರಂತರವಾಗಿ ನಡೆಯಬೇಕಾಗಿದೆ ಎನ್ನುತ್ತಾರೆ ಸಾರ್ವಜನಿಕರು.  

ಸಾರ್ವಜನಿಕರು ಬೆ.10 ರೊಳಗೆ ಮಾರುಕಟ್ಟೆಗೆ ಬಂದು ಅಗತ್ಯ ವಸ್ತುಗಳನ್ನು ಖರೀದಿ ಮಾಡಿಕೊಳ್ಳಿ. ಮಾಸ್ಕ್‌ ಹಾಕಿಕೊಳ್ಳುವುದನ್ನು ಮರಿಬೇಡಿರಿ. ಮಾಸ್ಕ್‌ ಧರಿಸದೇ ರಸ್ತೆಗೆ ಬಂದರೆ ದಂಡ ತೆರಬೇಕಾಗುತ್ತದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ನಿಮ್ಮ ಆರೋಗ್ಯದ ಜೊತೆ ಸಮಾಜದ ಆರೋಗ್ಯ ನಿಮ್ಮ ಕೈಯಲ್ಲಿದೆ 

ಪುಂಡಲೀಕ ಪಟಾತರ್  

ಪಿಎಸೈ ಗುಳೇದಗುಡ್ಡ. 


ಸುದ್ದಿ ಓದಿ