ಲಾಕ್ಡೌನ್: ಬಟ್ಟೆ ವ್ಯಾಪಾರಕ್ಕೆ ತಣ್ಣಿರ ಬಟ್ಟೆ
ಗುಳೇದಗುಡ್ಡ 17: ಲಾಕ್ಡೌನ್ ಆದಾಗಿನಿಂದ ಈ ಸಲದ ಎರಡನೆ ಅಲೆ ಬಟ್ಟೆ ವ್ಯಾಪಾರದ ಮೇಲೂ ತಣ್ಣಿರ ಬಟ್ಟೆ ಹಾಕಿದೆ. ಈದ್ ಉಲ್ ಫಿತ್ರ್ ಹಬ್ಬ ಹಾಗೂ ಮದುವೆ ಸೀಜನ್ ಎರಡೂ ಕೈಬಿಟ್ಟ ಕಾರಣ ಬಟ್ಟೆ ವ್ಯಾಪಾರ ನಷ್ಟ ಅನುಭವಿಸುವಂತಾಗಿದೆ.
ಕಳೆದ ವರ್ಷ ಇದೇ ಸಂದರ್ಭದಲ್ಲಿ ಲಾಕ್ಡೌನ್ ಆಗಿದ್ದರಿಂದ ಬಟ್ಟೆ ವ್ಯಾಪಾರಿಗಳ ಬದುಕಿಗೆ ಬರೆ ಬಿದ್ದಿತ್ತು. ಆ ನಷ್ಟವನ್ನು ಈ ಬಾರಿ ಉತ್ತಮ ವ್ಯಾಪಾರ ಮಾಡಿ ಸರಿದೂಗಿಸಿದರಾಯ್ತು ಎಂದು ಹೆಚ್ಚಿನ ಬಟ್ಟೆ ಖರೀದಿಸಿ ಅಂಗಡಿ ತುಂಬಿಕೊಂಡು ವ್ಯಾಪಾರಕ್ಕಿಟ್ಟಿದ್ದ ಬಟ್ಟೆ ವ್ಯಾಪಾರಿಗಳ ಸ್ಥಿತಿ ದೇವರೇ ಬಲ್ಲ. ಕೋವಿಡ್ ಎರಡನೆ ಅಲೆ ಯಾವುದೇ ನೀರೀಕ್ಷೆಯಿಲ್ಲದೇ ಹೆಮ್ಮಾರಿಯಂತೆ ಹೊಕ್ಕು ಮತ್ತೆ ವ್ಯಾಪಾರ ವಹಿವಾಟಿಕೆ ಕೊಕ್ಕೆ ಹಾಕಿದೆ.
ನಷ್ಟದಲ್ಲಿ ಬಟ್ಟೆ ವ್ಯಾಪಾರ : ಪಟ್ಟಣದಲ್ಲಿ ಒಟ್ಟು 26ರಿಂದ 27 ಬಟ್ಟೆ ಅಂಗಡಿಗಳಿವೆ. ಇಲ್ಲಿನ ಪ್ರಸಿದ್ದ ಹುನಗುಂದ ಬ್ರದರ್ಸ ಅವರ ಜನಪ್ರಿಯ ಟೆಕ್ಸಟೈಲ್ಸ್ ಬಟ್ಟೆ ಅಂಗಡಿಗೆ ಬಾಗಲಕೋಟ, ರಾಯಚೂರ, ವಿಜಯಪುರ, ಗದಗ ಮುಂತಾದ ಜಿಲ್ಲೆಯ ವಿವಿಧ ನಗರ ಮತ್ತು ಗ್ರಾಮಗಳಿಂದ ಜನ ಹೊಲ್ಸೇಲ್ ಬಟ್ಟೆ ಖರೀದಿಗೆ ಬರುತ್ತಾರೆ. ತಾಲೂಕಿನ ಸುಮಾರು 35 ಗ್ರಾಮಗಳ ಜನರೂ ಈ ಅಂಗಡಿಯಲ್ಲಿಯೇ ಬಟ್ಟೆ ಖರೀದಿಸುತ್ತಾರೆ. ಇಷ್ಟೊಂದು ಬಟ್ಟೆ ವ್ಯಾಪಾರಕ್ಕೆ ಪ್ರಸಿದ್ದವಾದ ಅಂಗಡಿ ಕಳೆದ ಎರಡು ವರ್ಷಗಳಿಂದ ಮದುವೆ ಹಾಗೂ ರಂಜಾನ್ ಸೀಜನ್ಗಳಲ್ಲಿ ಬಂದ್ ಮಾಡಿ ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ.
ನಾಲ್ಕು ಗಂಟೆ ವ್ಯಾಪಾರಕ್ಕೆ ಒತ್ತಾಯ: ಕಿರಾಣಿ, ಮದ್ಯದಂಗಡಿಗಳಿಗೆ ಬೆಳಿಗ್ಗೆ ವ್ಯಾಪಾರಕ್ಕೆ ನಿರ್ಬಂಧಿತ ನಿಯಮಾನುಸಾರ ಅನುಮತಿ ನೀಡಿದ ಸರ್ಕಾರ ಬಟ್ಟೆ, ಬಂಗಾರ ಮತ್ತು ಪಾತ್ರೆ ಅಂಗಡಿಗಳಿಗೆ ಯಾಕೆ ಅನುಮತಿ ನೀಡಿಲ್ಲವೆಂದು ಈ ಅಂಗಡಿ ಮಾಲೀಕರು ಕೇಳುತ್ತಾರೆ. ಮದುವೆಗೆ ಅನುಮತಿ ನೀಡಿದ ಸರ್ಕಾರ ನಮ್ಮ ಅಂಗಡಿಗಳಿಗೂ ಬೆಳಗಿನ 6 ಗಂಟೆಯಿಂದ 10 ಗಂಟೆವರೆಗೆ ಅನುಮತಿ ನೀಡಬಹುದಾಗಿತ್ತು. ಅದರಿಂದ ಸ್ವಲ್ಪಾದರೂ ಅನುಕೂಲವಾಗುತ್ತದೆ. ಸರ್ಕಾರ ನಮಗೂ ಬೆಳಿಗ್ಗೆ 6 ರಿಂದ 10 ಗಂಟೆವರೆಗೆ ನಿಯಮಾನುಸಾರ ವ್ಯಾಪಾರಕ್ಕೆ ಅನುಕೂಲ ಮಾಡಬೇಕೆಂದು ಇಲ್ಲಿನ ಹುನಗುಂದ ಬಟ್ಟೆ ಅಂಗಡಿಯ ಮಾಲಿಕ ಮಲ್ಲಿಕಾರ್ಜುನ ಹುನಗುಂದ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನಿರಾಶೆ ತಂದ ರಂಜಾನ್ ಹಬ್ಬ : ಪ್ರತಿ ವರ್ಷ ರಂಜಾನ್ ಮಾಸದಲ್ಲಿ ಬಟ್ಟೆ ವ್ಯಾಪಾರ ಚನ್ನಾಗಿ ಆಗುತ್ತಿತ್ತೆಂದು ಇಲ್ಲಿನ ಬಟ್ಟೆ ವ್ಯಾಪಾರಿಗಳು ಹೇಳುತ್ತಾರೆ. ಕಳೆದ ರಂಜಾನ್ ಹಬ್ಬದ ವ್ಯಾಪಾರ ಸಹ ಆಗಿಲ್ಲ. ಈ ವರ್ಷವೂ ಆಗಲಿಲ್ಲ ಎಂಬ ಅಳಲು ಇವರದಾಗಿದೆ. ರಂಜಾನ ಮಾಸದಲ್ಲಿ ಮುಸ್ಲಿಂ ಬಾಂಧವರು ಉಪವಾಸ ವ್ರತ ಮಾಡಿ ಹಬ್ಬದ ದಿನ ಹೊಸ ಬಟ್ಟೆ ಧರಿಸಿ, ಬಡವರಿಗೆ ದಾನ ಮಾಡುವ ಪದ್ದತಿ ಇತ್ತು. ಆದರೆ ಕಳೆದ ಎರಡು ವರ್ಷಗಳಿಂದ ಈ ಹಬ್ಬದ ಸಂಭ್ರಮಕ್ಕೆ ನಿರಶೆಯ ಛಾಯೆ ಎದ್ದು ಕಾಣುತ್ತಿದೆ. ಇದು ಬಟ್ಟೆ ವ್ಯಾಪಾರದ ಮೇಲೂ ನಷ್ಟದ ಕಂದಕ ಸೃಷ್ಠಿಸಿದೆ.
ಎರಡು ವರ್ಷಗಳಿಂದ ಬಟ್ಟೆ ವ್ಯಾಪಾರ ನಷ್ಟದಲ್ಲಿದೆ. ಸರ್ಕಾರ ನಮ್ಮ ವ್ಯಾಪಾರಕ್ಕೂ ನಾಲ್ಕು ಗಂಟೆ ಅನುಕೂಲ ಮಾಡಿಕೊಡಲಿ. ನಾವೂ ನಿಯಮ ಪಾಲಿಸಿ ವ್ಯಾಪಾರ ಮಾಡುತ್ತೇವೆ. ಹಿ ಮಾಲಿಕರು ಜನಪ್ರಿಯ ಟೆಕ್ಸೆಟೈಲ್ಸ್, ಸಂಗಮೇಶ ಸಾಡಿ ಸೆಂಟರ್, ಮಹಾವೀರ ಕ್ಲಾಥ್ ಸ್ಟೋರ್ಸ್ ರಾಂದಡ ಎಂಟರ್ಪ್ರೈಜಸ್, ಅನ್ನಪೂರ್ಣ ಟೆಕ್ಸ್ಟೈಲ್ಸ್ ಗುಳೇದಗುಡ್ಡ.
ಪವಿತ್ರ ರಂಜಾನ್ ಹಬ್ಬಕ್ಕೆ ಹೊಸ ಬಟ್ಟೆ ತೊಡುವುದು ಪದ್ದತಿ. ಸರ್ಕಾರ ಹಬ್ಬದ ಬಟ್ಟೆ ಖರೀದಿಗೆ ದಿನದಲ್ಲಿ ನಾಲ್ಕು ಗಂಟೆಯಾದರೂ ಅವಕಾಶ ಮಾಡಿಕೊಡಬೇಕಿತ್ತು.
-ಮುಬಾರಕ ಮಂಗಳೂರ
ಜಿಲ್ಲಾ ಅಲ್ಪಸಂಖ್ಯಾತ ಕಾಂಗ್ರೆಸ್ ಘಟಕದ ಉಪಾಧ್ಯಕ್ಷ ಗುಳೇದಗುಡ್ಡ.