ಛತ್ರಪತಿ ಶಿವಾಜಿ ಮಹಾರಾಜರ ಜೀವನ ಪ್ರವಚನ
ನಿರ್ಯಾಪಕ ಶ್ರಮಣ ವಿದ್ಯಾಸಾಗರ ಮುನಿಗಳಿಂದ
ಶೇಡಬಾಳ 12: ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದ ಭಗವಾನ ಪಾರ್ಶ್ವನಾಥ ದಿಗಂಬರ ಜೈನ ಮಂದಿರದ ಭವ್ಯ ಮಂಟಪದಲ್ಲಿ ನಿನ್ನೆ ಸಂಜೆ ನಿರ್ಯಾಪಕ ಶ್ರಮಣ ವಿದ್ಯಾಸಾಗರ ಮುನಿಗಳು ಸತತ 2 ಗಂಟೆಗಳ ಕಾಲ ಹಿಂದವಿ ಸಾಮಾಟ್ರ ಛತ್ರಪತಿ ಶಿವಾಜಿ ಮಹಾರಾಜರ ಜೀವನ ಚರಿತ್ರೆ ಹೇಳುತ್ತ ಪ್ರೇಕ್ಷರನ್ನು ಶಿವಾಜಿಯ ಕಾಲಕ್ಕೆ ಕೊಂಡೊಯ್ದರು.
ಈ ಭಾಗದ ಮರಾಠಾ ಸಮಾಜದ ಆಶಯದಂತೆ ಶಿವಾಜಿ ಮಹಾರಾಜರ ಜೀವನ ಚರಿತ್ರೆಯ ಪ್ರವಚನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಎಳೆ ಎಳೆಯಾಗಿ ಶಿವಾಜಿಯ ಜೀವನ ಚರಿತ್ರೆಯನ್ನು ವಿವರಿಸಿದ ಮುನಿಗಳು ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು.
ತಮ್ಮ ಪ್ರವಚನದಲ್ಲಿ ದೇಶದಲ್ಲಿ ಯಾವ ಸಮಯದಲ್ಲಿ ಅನ್ಯಾಯ, ಅತ್ಯಾಚಾರ, ಅಶಾಂತಿ, ಹೆಚ್ಚಾದಾಗ ಮಹಾಪುರುಷರ ಜನ್ಮವಾಗುತ್ತದೆ. ಅಂದಿನ ಕಾಲದಲ್ಲಿ ಭಾರತ ದೇಶದಲ್ಲಿ ರಾಜರ ದುರಾಡಳಿತದಿಂದ ಬೇಸತ್ತ ಪ್ರಜೆಗಳ ರಕ್ಷಣೆಗೆ ಶಿವಾಜಿ ಮಹಾರಾಜರ ಜನನವಾಯಿತು. ಹಿಂದವಿ ಸ್ವರಾಜದ ಪರಿಕಲ್ಪನೆಯೊಂದಿಗೆ ಕೇವಲ 15 ನೇ ವರ್ಷದಲ್ಲಿ ಹಿಂದೂ ಸಾಮ್ರಾಜ್ಯದ ಕನಸು ಕಂಡ ಶಿವಾಜಿ ಮಹಾರಾಜರು ರಾಜರ ದುರಾಡಳಿತನ್ನು ಹತ್ತಿಕುವ ಪ್ರಯತ್ನ ಮಾಡುತ್ತ ಯಶಸ್ಸನ್ನು ಕಂಡರು. ಅನ್ಯಾಯದ ವಿರುದ್ಧ ಹೋರಾಡಿ, ಪ್ರಜೆಗಳಿಗೆ ನ್ಯಾಯವದಗಿಸಿ ಕೊಡುವುದೇ ಅವರ ಮುಖ್ಯ ಗುರಿಯಾಗಿತ್ತು. ಹಿಂದವಿ ಸ್ವರಾಜದಲ್ಲಿ ಪ್ರತಿಯೊಂದು ಜೀವರಾಶಿಯೂ ಸುಖ, ಶಾಂತಿ, ನೆಮ್ಮದಿಯಿಂದ ಜೀವನ ಸಾಗಿಸಬೇಕೆಂಬ ಉತ್ಕಟ ಆಶೆ ಅವರದ್ದಾಗಿತ್ತು. ಅವರು ತಮ್ಮ ಯುದ್ಧದ ಸಮಯದಲ್ಲಿ ಶಕ್ತಿಗಿಂತ ಯುಕ್ತಿಯನ್ನು ಹೆಚ್ಚು ಉಪಯೋಗಿಸಿ, ಹಲವಾರು ರಾಜರನ್ನು ಸೋಲಿಸಿ, ಪ್ರರಾಕ್ರಮ ಮೆರೆದರು ಎಂದು ಬನ್ನಿಸಿದರು.
ಕಾಗವಾಡ ಯುವ ಮುಖಂಡ ಶ್ರೀನಿವಾಸ ಪಾಟೀಲ, ಶಿರಗುಪ್ಪಿ ಗ್ರಾ.ಪಂ. ಅಪರ್ಣಾ ಪಾಟೀಲ, ಉಪಾಧ್ಯಕ್ಷ ಶೃತಿ ಕಾಂಬಳೆ, ಹಾಗೂ ಗ್ರಾ.ಪಂ. ಎಲ್ಲ ಸದಸ್ಯರು, ಜೈನ ಸಮಾಜದ ಅಧ್ಯಕ್ಷರಾದ ಮಹಾವೀರ ಕಾತ್ರಾಳೆ, ಅಭಯ ಅಕಿವಾಟೆ, ವಿಜಯ ಅಕಿವಾಟೆ, ಭೀಮು ಭೋಲೆ ಸೇರಿದಂತೆ ಗ್ರಾಮದ ಎಲ್ಲ ಸಮಾಜದ ಮುಖಂಡರು, ಗ್ರಾಮಸ್ಥರು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.