ಧಾರವಾಡ - ಹುಬ್ಬಳ್ಳಿ

ಬಾಂಗ್ಲಾ ಹಿಂದೂಗಳ ಮೇಲಿನ ದೌರ್ಜನ್ಯ ನಿಲ್ಲಲಿ: ಡಾ. ಚಂದ್ರಶೇಖರ ಶಿವಾಚಾರ್ಯ

ಬಾಂಗ್ಲಾ ಹಿಂದೂಗಳ ಮೇಲಿನ ದೌರ್ಜನ್ಯ ನಿಲ್ಲಲಿ: ಡಾ. ಚಂದ್ರಶೇಖರ ಶಿವಾಚಾರ್ಯ

ಹುಬ್ಬಳ್ಳಿ 16: ನೆರೆಯ ಬಾಂಗ್ಲಾದೇಶದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿನಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡನಾರ್ಹವಾಗಿದ್ದು, ಕೂಡಲೇ ಹಿಂದುಗಳ ಮೇಲಿನ ದೌರ್ಜನ್ಯ ನಿಲ್ಲಿಸಬೇಕೆಂದು ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾಗಿರುವ ಕಾಶೀ ಜ್ಞಾನ ಪೀಠದ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಆಗ್ರಹಿಸಿದ್ದಾರೆ. 

ಅವರು ಗುರುವಾರ ಉತ್ತರ ಪ್ರದೇಶದ ವಾರಾಣಾಸಿ ನಗರದಲ್ಲಿರುವ ಕಾಶಿ ಜ್ಞಾನ ಸಿಂಹಾಸನದ ಜಗದ್ಗುರು ಪೀಠದಲ್ಲಿ ಹಮ್ಮಿಕೊಂಡಿದ್ದ 78ನೆಯ ಸ್ವಾತಂತ್ರ್ಯ ದಿನೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು. ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಬೌದ್ಧ, ಜೈನ, ಫಾರ್ಸಿ ಮುಂತಾದ ಎಲ್ಲ ಧರ್ಮಗಳ ಜನರು ವಾಸವಾಗಿದ್ದು, ತಮ್ಮ ಅಭಿವೃದ್ಧಿಯ ಜೊತೆಗೆ ಆಯಾ ರಾಷ್ಟ್ರಗಳ ಅಭಿವೃದ್ಧಿಯಲ್ಲಿ ಕೈಜೋಡಿಸುತ್ತ ಬಂದಿದ್ದಾರೆ. ಹೀಗಿರುವಾಗ ಯಾವ ರಾಷ್ಟ್ರ್ರದಲ್ಲಿ ಯಾವ ಧರ್ಮದವರು ಅಲ್ಪಸಂಖ್ಯಾತರಾಗಿರುತ್ತಾರೆಯೋ ಅವರಿಗೆ ಅಗತ್ಯ ರಕ್ಷಣೆಯನ್ನು ಕೊಟ್ಟು ಅವರನ್ನು ಅಭಿವೃದ್ಧಿಪಡಿಸುವುದು ಆಯಾ ರಾಷ್ಟ್ರ್ರದ ರಾಜಕೀಯ ಕರ್ತವ್ಯವಾಗಿದೆ ಎಂದರು.  

ಪ್ರಸ್ತುತ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಮೇಲೆ ನಡೆಯುತ್ತಿರುವ ಹಿಂಸಾಚಾರವು ಜಗತ್ತಿನ ಎಲ್ಲ ಹಿಂದುಗಳಿಗೆ ಅತ್ಯಂತ ನೋವನ್ನುಂಟು ತುಂಬಿ ತಂದಿದೆ. ಭಾರತದಲ್ಲಿಯ ಅಲ್ಪಸಂಖ್ಯಾತರಿಗೆ ಕೊಡ ಮಾಡಲ್ಪಡುವ ಅನುಕೂಲತೆಗಳು ಬಂಗ್ಲಾದೇಶದಲ್ಲಿಯ ಅಲ್ಪಸಂಖ್ಯಾತ ಹಿಂದುಗಳಿಗೂ ಪ್ರಾಪ್ತವಾಗಬೇಕು. ಈ ನಿಟ್ಟಿನಲ್ಲಿ ಕೂಡಲೇ ಬಾಂಗ್ಲಾ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕಾಶಿ ಜ್ಞಾನ ಪೀಠದ ಶ್ರೀಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯರು ಒತ್ತಾಯಿಸಿದರು.  

ಕಾಶಿ ಪೀಠದ ವ್ಯವಸ್ಥಾಪಕ ಆರ್‌.ಕೆ.ಸ್ವಾಮಿ, ನಳಿನಿ ಚಿರಮೆ, ಕಾರ್ಯದರ್ಶಿ ಶಿವಾನಂದ ಹಿರೇಮಠ ಇತರರು ಪಾಲ್ಗೊಂಡು ರಾಷ್ಟ್ರ ವಂದನೆ ಸಲ್ಲಿಸಿದರು. 


ಸುದ್ದಿ ಓದಿ