ಕೇಂದ್ರ, ರಾಜ್ಯ ಸರಕಾರಗಳು ರೈತರ ಬೆನ್ನೆಲುಬಾಗಿ ನಿಲ್ಲಲಿ
ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಕರೆ: ಬೃಹತ್ ಕೃಷಿ ಮೇಳ, ಜಾನುವಾರು ಪ್ರದರ್ಶನ
ಬೈಲಹೊಂಗಲ : ಭಾರತ ಕೃಷಿ ಪ್ರಧಾನ ದೇಶವಾಗಿದೆ ಇವತ್ತಿಗೂ ನಮ್ಮ ದೇಶದ ಆರ್ಥಿಕ ವ್ಯವಸ್ಥೆಯ ಮುಖ್ಯ ಆಧಾರ ಕೃಷಿ ಆಗಿದೆ. ಕೇಂದ್ರ, ರಾಜ್ಯ ಸರಕಾರಗಳು ರೈತರ ಬೆನ್ನೆಲುಬಾಗಿ ನಿಲ್ಲುವ ಕೆಲಸ ಮಾಡಬೇಕೆಂದು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಹೇಳಿದರು.
ಪಟ್ಟಣದ ಎಪಿಎಂಸಿ ಮಾರುಕಟ್ಟೆಯ ಆವರಣದಲ್ಲಿ ಮರಡಿ ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ನಿಮಿತ್ತ ಈಶಪ್ರಭು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಬೈಲಹೊಂಗಲ, ಕೃಷಿ ವಿಶ್ವ ವಿದ್ಯಾಲಯ ಧಾರವಾಡ, ಕೃಷಿ ಇಲಾಖೆ, ಪಶು ಸಂಗೋಪನೆ ಇಲಾಖೆ, ಕರ್ನಾಟಕ ಪ್ರದೇಶ ಕೃಷಿಕ ಸಮಾಜ, ತೋಟಗಾರಿಕೆ ಇಲಾಖೆ, ಕೃಷಿ ಪರಿಕರ ಮಾರಾಟಗಾರರ ಸಂಘ, ಗ್ರಾಮೀಣ ಜಾಗೃತ ನಾಗರಿಕ ವೇದಿಕೆ ಬೈಲಹೊಂಗಲ, ಕೃಷಿ ವಿಜ್ಞಾನ ಕೇಂದ್ರ ಮತ್ತಿಕೊಪ್ಪ ಇವರುಗಳ ಸಹಯೋಗದಲ್ಲಿ ಬೃಹತ್ ಕೃಷಿ ಮೇಳ ಹಾಗೂ ಬಾರೀ ಜಾನುವಾರು ಪ್ರದರ್ಶನ-2023 ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿ ಭೂಮಿಯಲ್ಲಿ ಸಾಕಷ್ಟು ಉತ್ಪಾದನೆ ಮಾಡಿ ದೊಡ್ಡ ಮಟ್ಟಕ್ಕೆ ಬೆಳೆಯಲು ಸಾಧ್ಯವಿದೆ. ಅದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕೃಷಿಗೆ ಸಂಬಂಧಿಸಿದ ಮಾಹಿತಿ ಒದಗಿಸಲಾಗುತ್ತಿದೆ. ನಮ್ಮ ಮುಂದಿನ ಪೀಳಿಗೆ ಕೃಷಿಗೆ ಹೆಚ್ಚು ಒತ್ತು ನೀಡುವ ಕೆಲಸ ಮಾಡಿದಾಗ ಮಾತ್ರ ಜೀವನದ ಬದುಕು ಬೆಳಕು ಕಾಣಲು ಸಾಧ್ಯವಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಮೂಲಭೂತ ಸೌಕರ್ಯ ಒದಗಿಸಬೇಕಾಗಿದೆ. ಅಲ್ಲದೆ ನೀರಾವರಿ, ವಿದ್ಯುತ್, ಜಮೀನು ರಸ್ತೆ ಬೆಳೆಗೆ ನಿಗದಿತ ಬೆಲೆ ನೀಡುವ ಮೂಲಕ ರೈತರನ್ನು ಸಬಲರನ್ನಾಗಿಸುವ ಅವಶ್ಯಕತೆ ಎಂದರು. ಕೃಷಿ ಮತ್ತು ಜಾನುವಾರುಗಳಿಗೆ ಉತ್ತೇಜನ ನೀಡಲು ಬೈಲಹೊಂಗಲದಲ್ಲಿ ಕೃಷಿಮೇಳ ಹಾಗೂ ಭಾರೀ ಜಾನುವಾರ ಜಾತ್ರೆ ಪ್ರದರ್ಶನ ಆಯೋಜಿಸಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ನಶಿಸುತ್ತಿರುವ ಪಟ್ಟಣದ ಜಾನುವಾರು ಮಾರುಕಟ್ಟೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆಗೆ ಕಾಯಕಲ್ಪ ನೀಡಲು ಸರ್ಕಾರಕ್ಕೆ ಒತ್ತಡ ಹೇರಲಾಗುವದು. ರಾಜ್ಯದಲ್ಲಿಯೇ ಬೈಲಹೊಂಗಲ ಮಾರುಕಟ್ಟೆ ಹೆಸರುವಾಸಿಯಾಗಿತ್ತು. ಅದನ್ನು ಮತ್ತೆ ಅಭಿವೃದ್ದಿ ಪಡಿಸಲು ಮೇಳ ಆಯೋಜಿಸಲಾಗಿದೆ ಎಂದರು.
ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ, ಧಾರ್ಮಿಕ ದತ್ತಿ ಇಲಾಖೆ ನಿರ್ದೇಶಕ ಡಾ.ಮಹಾಂತಯ್ಯಶಾಸ್ತ್ರೀ ಆರಾದ್ರಿಮಠ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದ ಪ್ರಭಾಅಕ್ಕ ಸಾನಿಧ್ಯವಹಿಸಿದ್ದರು.
ನ್ಯಾಯವಾದಿ ಎಫ್.ಎಸ್. ಸಿದ್ದನಗೌಡರ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯ ಮೇಲೆ ಶಾಸಕ ಬಾಬಾಸಾಹೇಬ ಪಾಟೀಲ, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಕೃಷಿಮೇಳ ಅಧ್ಯಕ್ಷ ಶಿವರಂಜನ ಬೋಳನ್ನವರ, ಜಾನುವಾರ ಮೇಳ ಅಧ್ಯಕ್ಷ ಮಡಿವಾಳಪ್ಪ ಹೋಟಿ, ಮುಖಂಡರಾದ ಮಹಾಂತೇಶ ತುರಮರಿ, ಮಹೇಶ ಬೆಲ್ಲದ, ಎಪಿಎಂಸಿ ಮಾಜಿ ಅಧ್ಯಕ್ಷ ಸಿ.ಆರ್.ಪಾಟೀಲ, ಕೃಷಿಕ ಸಮಾಜ ಅಧ್ಯಕ್ಷ ಗುರು ಮೆಟಗುಡ್ಡ, ನಿವೃತ್ತ ವಿಶ್ರಾಂತ ಕುಲಪತಿ ಡಾ. ಶಿವಾನಂದ ಹೊಸಮನಿ, ಮಹಾಂತೇಶ ಮತ್ತಿಕೊಪ್ಪ, ಸಿ.ಕೆ.ಮೆಕ್ಕೇದ, ಸೋಮನಾಥ ಸೊಪ್ಪಿಮಠ, ಶ್ರೀಶೈಲ ಯಡಳ್ಳಿ, ಮುರಗೇಶ ಗುಂಡ್ಲೂರ, ಬಿ.ಬಿ.ಗಣಾಚಾರಿ, ಡಾ.ಸಿ.ಬಿ.ಗಣಾಚಾರಿ, ಬಾಬುಸಾಬ ಸುತಗಟ್ಟಿ, ಸುಭಾಸ ತುರಮರಿ, ಎಪಿಎಂಸಿ ಕಾರ್ಯದರ್ಶಿ ಎಸ್.ಎಸ್. ಅರಳಿಕಟ್ಟಿ, ಪಶು ಸಂಗೋಪನಾ ಅಧಿಕಾರಿ ಶ್ರೀಕಾಂತ ಗಾಂವಿ, ಹಾಗೂ ನೂರಾರು ರೈತರು ಇದ್ದರು. ಕುಂದಗೋಳ ತಾಲೂಕು ಹರ್ಲಾಪುರ ಗ್ರಾಮದ ಶಂಬಯ್ಯ ಹಿರೇಮಠ ಹಾಗೂ ಸಂಗಡಿಗರು ತಂದೆ, ತಾಯಿ ಅವರ ಕುರಿತಾದಹಾಡಿಗೆ ಎಲ್ಲರ ಕಣ್ಣು ಒದ್ದೆಯಾದವು. ಎಲ್ಲಾ ಮಾಯವೋ ಸೇರಿ ವಿವಿಧ ಜಾನಪದ ಗೀತೆ ಹಾಡಿ ಗಮನ ಸೆಳೆದರು. ಆನಂದ ಬಡಿಗೇರ ಪ್ರಾರ್ಥಿಸಿದರು. ಪುರಸಭೆ ಸದಸ್ಯ ಬಸವರಾಜ (ರಾಜು) ಜನ್ಮಟ್ಟಿ ಸ್ವಾಗತಿಸಿದರು. ಬಸವರಾಜ ಭರಮ್ಮನ್ನವರ ನಿರೂಪಿಸಿ, ವಂದಿಸಿದರು.