ನಿಮ್ಮ ಸಾಧನೆಯ ಕಥೆಗಳನ್ನು ಜಗತ್ತಿನ ಸಾಧಕರು ಓದುವಂತಾಗಲಿ : ಸಂಗಮೇಶ ಬಬಲೇಶ್ವರ
ಧಾರವಾಡ 21: ನಿಮ್ಮ ಸಾಧನೆ ಕಥೆಗಳನ್ನು ಜಗತ್ತಿನ ಸಾಧಕರು ಓದುವಂತಾಗಬೇಕು ಹಾಗಾದಾಗ ಮಾತ್ರ ಕರ್ನಾಟಕ ಬಾಲವಿಕಾಸ ಅಕಾಡೆಮಿ ಆಯೋಜಿಸಿರುವ ರಾಜ್ಯಮಟ್ಟದ ಈ ಕಥಾ ಕಮ್ಮಟ ಸಾರ್ಥಕವಾಗುತ್ತದೆ. ಈ ಜಗತ್ತಿನಲ್ಲಿ ನಾವು ಯಾರೂ ಅನಾಥರಲ್ಲ, ಎಂದು ನಾವು ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತೇವೆಯೋ ಅಂದೆ ಅನಾಥರಾಗುತ್ತೇವೆ. ನಾನು ತಂದೆ ತಾಯಿ ಕಳೆದುಕೊಂಡೆ ಬದುಕು ಕಟ್ಟಿಕೊಂಡಿದ್ದೇನೆ, ನೀವು ಬಾನೆತರಕ್ಕೆ ಸಾಧನೆ ಮಾಡಿ ಬರೆದು ದೊಡ್ಡ ಸಾಧಕರಾಗಿ ಹೊರಹೊಮ್ಮಿದಾಗ ನಿಮ್ಮೊಂದಿಗೆ ನಿಂತು ಒಂದು ಭಾವಚಿತ್ರ ತೆಗೆಸಿಕೊಂಡಾಗ ನನ್ನ ಜನ್ಮ ಸಾರ್ಥಕವಾಗುತ್ತದೆ ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.
ಅವರು ಕಳೆದ ಐದು ದಿನಗಳಿಂದ ಧಾರವಾಡದ ಹೊರವಲಯದಲ್ಲಿರುವ ನೇಚರ್ ಫಸ್ಟ್ ಇಕೋ ವಿಲೇಜ್ ನಲ್ಲಿ ನಡೆದ ರಾಜ್ಯಮಟ್ಟದ ಕಥಾ ಕಮ್ಮಟದ ಮೊದಲ ಹಂತದ 9 ಜಿಲ್ಲೆಗಳ ಬಾಲಮಂದಿರದ ಮಕ್ಕಳಿಗಾಗಿ ನಡೆದ ಕಥಾ ಕಮ್ಮಟದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಕ್ಕಳ ಅನುಭವಗಳನ್ನು ಕೇಳಿ ಅವರ ಹೃದಯಸ್ಪರ್ಸಿ ಮಾತುಗಳನ್ನು ಆಲಿಸುತ್ತಾ, ಕಣ್ಣೀರಾದ ಬಬಲೇಶ್ವರ ಮಕ್ಕಳನ್ನು ಅತ್ಯಂತ ಹೃದಯಪೂರ್ವಕವಾಗಿ ಬಿಳ್ಕೊಟ್ಟರು. ಮುಖ್ಯ ಅತಿಥಿಯಾಗಿದ್ದ ಯೋಜನಾಧಿಕಾರಿ ಭಾರತಿ ಶೆಟ್ಟರ ಮಾತನಾಡಿ ನಮ್ಮ ಅಧ್ಯಕ್ಷರ ವಿಶೇಷ ಪ್ರಯತ್ನದಿಂದ ಬಾಲಮಂದಿರದ ಮಕ್ಕಳು ಇಂಥ ಸುಸಜ್ಜಿತವಾದ ಪರಿಸರ ಸ್ನೇಹಿ ರೆಸಾರ್ಟ್ ನಲ್ಲಿ ಐದು ದಿನ ಕಳೆಯಲು ಸಾಧ್ಯವಾಯಿತು. ಮಕ್ಕಳು ಐದು ದಿನ ವಿಶೇಷ ಪರಿಣಿತರಿಂದ ತಮ್ಮ ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳಲು ಸಹಕಾರಿಯಾಯಿತು. ನೀವು ಎತ್ತರಕ್ಕೆ ಬೆಳೆದು ನಮ್ಮ ಅಕಾಡೆಮಿಯ ಹಾಗೂ ಅಧ್ಯಕ್ಷರ ಕನಸನ್ನು ನನಸಾಗಿಸಬೇಕೆಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಸಂಗಮೇಶ ಬಬಲೇಶ್ವರವರು ಮಕ್ಕಳಿಗೆ ವಿಶೇಷ ಉಡುಗೊರೆ ಮತ್ತು ಪುಸ್ತಕಗಳನ್ನು ನೀಡಿದರು. ಅತಿಥಿಗಳಾಗಿ ಉಪನಿರ್ದೇಶಕರಾದ ರತ್ನಾಕರ್, ಅಧ್ಯಕ್ಷರ ಆಪ್ತಕಾರ್ಯದರ್ಶಿ ದೀಪಾ ಜಾವೂರ, ಕಚೇರಿ ಅಧೀಕ್ಷಕರು ಪುಷ್ಪಾ ಹಂಜಗಿ, ಲೆಕ್ಕಾಧೀಕ್ಷಕರು ಅಮೃತ ಸಾಣಿಕೊಪ್ಪ, ಪ್ರ.ದ.ಸ ಸುವರ್ಣಲತಾ ಮಠದ, ಯೋಜನಾಧಿಕಾರಿಗಳ ಆಪ್ತಸಹಾಯಕರು ಪದ್ಮಶ್ರೀ ಮೇಟಿ, ಕಂಪ್ಯೂಟರ್ ಆಪರೇಟರ್ ಅರ್ಿತಾ ಹೆಗಡಿ, ದ್ವಿ.ದ.ಸ ಶಿವಕುಮಾರ ದಿಂಡೂರ, ಅಧ್ಯಕ್ಷರ ವಾಹನ ಚಾಲಕ ರವಿ ಕೆಂಗನಾಳ, ಯೋಜನಾಧಿಕಾರಿಗಳ ವಾಹನ ಚಾಲಕ ಸ್ಟ್ಯಾನ್ಲಿಲೂಥರ್, ಗ್ರೂಪ ಡಿ ಅಶೋಕ ಬಸ್ತಿ ಹಾಗೂ ಕಮ್ಮಟದ ನಿರ್ದೇಶಕರಾದ ಫಕೀರೇಶ ಮುಡಿಯಣ್ಣವರ ಸಂಪನ್ಮೂಲ ವ್ಯಕ್ತಿಗಳಾಗಿ ನಾಗಪ್ಪ ಬೆಂತೂರ, ನೀಲಕಂಠಗೌಡ ಹಾಲಪ್ಪಗೌಡ್ರ ಹಾಗೂ ಅಕಾಡೆಮಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ರಾಜ್ಯಮಟ್ಟದ ಮಕ್ಕಳ ಕಥಾ ಕಮ್ಮಟಕ್ಕೆ 09 ಜಿಲ್ಲೆಗಳಿಂದ ಆಗಮಿಸಿದಂತಹ ಮಕ್ಕಳು ತುಂಬ ಭಾರವಾದ ಹೃದಯದಿಂದ ತಮ್ಮ ತಮ್ಮ ಜಿಲ್ಲೆಗಳ ಬಾಲಮಂದಿರಗಳಿಗೆ ಮರು ಪ್ರಯಾಣ ಬೆಳೆಸಿದರು.