ಕಾಗವಾಡ

ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಲಿ: ಸಚಿವ ಪಾಟೀಲ

ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಲಿ: ಸಚಿವ ಪಾಟೀಲ
ಕಾಗವಾಡ ಪ್ರವಾಸಿ ಮಂದಿರದಲ್ಲಿ ಜರುಗಿದ ಸಾರ್ವಜನಿಕರ ಕುಂದು ಕೊರತೆಗಳ ಸಭೆಯಲ್ಲಿ ಸಚಿವರು ಅಧಿಕಾರಿಗಳೊಂದಿಗೆ ಚರ್ಚಿಸುತ್ತ

ಶೇಡಬಾಳ 27: ತಮ್ಮ ಜ್ವಲಂತ ಸಮಸ್ಯೆಗಳನ್ನು ಹೇಳಿಕೊಂಡು ನಿಮ್ಮ ಬಳಿಗೆ ಬರುವ ರೈತರು, ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿರಿ ಒಂದು ವೇಳೆ ಅಸಭ್ಯವಾಗಿ ವರ್ತಿಸಿದಲ್ಲಿ ಹಾಗೂ ಲಂಚಕ್ಕಾಗಿ ಬೇಡಿಕೆ ಇಟ್ಟಿದಲ್ಲಿ ಅಂತಹ ಅಧಿಕಾರಿಗಳ ಮೇಲೆ ನಿರ್ಧಾಕ್ಷಣ್ಯ ಕ್ರಮ ಕೈಗೊಳ್ಳಲಾಗುವುದೆಂದು ಕೈಮಗ್ಗ, ಜವಳಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಶ್ರೀಮಂತ ಪಾಟೀಲರು ಹೇಳಿದರು.

ಕಾಗವಾಡ ಪ್ರವಾಸಿ ಮಂದಿರದಲ್ಲಿ ಮಾ.27ರಂದು ಆಯೋಜಿಸಲಾಗಿದ್ದ ತಾಲೂಕಿನ ಎಲ್ಲ ಇಲಾಖೆಗಳ ಆಡಳಿತಾಧಿಕಾರಿಗಳ ಹಾಗೂ ಕ್ಷೇತ್ರದ ಸಾರ್ವಜನಿಕರ ಕುಂದು ಕೊರತೆಗಳ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಕ್ಷೇತ್ರದ ಜನರ ಸಮಸ್ಯೆಗಳಿಗೆ ಪರಿಹಾರ ದೊರಕಿಸಿ ಕೊಡುವುದೇ ನನ್ನ ಆದ್ಯ ಕರ್ತವ್ಯವಾಗಿದ್ದು, ಆ ಜನರಿಗೆ ನೀವು ವಿನಾಕಾರಣ ಕಿರುಕುಳ ನೀಡಿದಲ್ಲಿ, ದೂರು ದಾಖಲಿಸಿಕೊಳ್ಳಲು ಮೀನಾಮೇಷ ಎಸಗಿದ್ದಲ್ಲಿ, ಬಡ ರೈತರಿಗೆ ಅನ್ಯಾಯ ಮಾಡಿದ್ದಲ್ಲಿ ಅಂತಹ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪಕ್ಷಾತೀತವಾಗಿ ನನ್ನ ಬಳಿ ಬರುವ ಎಲ್ಲ ಜನರ ಸಮಸ್ಯೆಗಳಿಗೆ ಪರಿಹಾರ ದೊರಕಿಸಿ ಕೊಡುವುದೇ ನನ್ನ ಆದ್ಯ ಕರ್ತವ್ಯವಾಗಿದೆ ಎಂದು ಸಚಿವ ಶ್ರೀಮಂತ ಪಾಟೀಲ ಹೇಳಿದರು.

ಹಲವಾರು ದೂರುಗಳನ್ನು ಹೊತ್ತು ಕೊಂಡು ಬಂದ ಕ್ಷೇತ್ರದ ಜನರಿಗೆ ಸ್ಥಳದಲ್ಲಿಯೇ ಅಧಿಕಾರಿಗಳ ಸಮ್ಮುಖದಲ್ಲಿ ಸಚಿವರು ಪರಿಹಾರ ದೊರಕಿಸಿ ಕೊಡುವವರ ಜತೆಗೆ ಪರಿಹಾರ ನೀಡಲು  ವಿಳಂಬಕ್ಕೆ ಕಾರಣವಾಗಿರುವ ಅಧಿಕಾರಿಗಳನ್ನು ಸಾರ್ವಜನಿಕರ ಸಮ್ಮುಖದಲ್ಲಿಯೇ ತರಾಟೆಗೆ ತೆಗೆದುಕೊಂಡ ಘಟನೆ ಜರುಗಿತು.

ಕೆಲವೊಂದು ಅಧಿಕಾರಿಗಳು ತಮ್ಮ ತಪ್ಪುಗಳನ್ನು ಒಪ್ಪಿಕೊಂಡು ಕ್ಷಮೆಯಾಚಿಸಿ ಇನ್ನು ಮುಂದೆ ಆ ರೀತಿ ಆಗದಂತೆ ಎಚ್ಚರಿಕೆ ವಹಿಸುವುದಾಗಿ ಭರವಸೆ ನೀಡಿದರು. ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳನ್ನು ಸಾರ್ವಜನಿಕರ ಮುಂದೆಯೇ ಪ್ರಶಂಸಿಸಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಘಟನೆಯೂ ಜರುಗಿತು. 

ಕೃಷಿ ಇಲಾಖೆ, ಕಂದಾಯ ಇಲಾಖೆ, ತೋಟಗಾರಿಕೆ ಇಲಾಖೆ, ಪೊಲೀಸ್ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆಯ ಎಲ್ಲ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಗಳ ಕುರಿತು ವಿವರವಾಗಿ ಮಾತನಾಡಿದರು. 

ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಪುಷ್ಪಲತಾ ಸುಣ್ಣದಕಲ್ಲ ಕೊರೋನಾ ಪ್ರಕರಣಗಳ ಅಂಕಿ-ಅಂಶಗಳ ಕುರಿತು ಸಚಿವರಿಗೆ ಮಾಹಿತಿ ನೀಡಿದರು. ಈಗಾಗಲೇ ಕರೋನಾ ಅಲೆ ಹೆಚ್ಚಾಗುತ್ತಿರುವುದರಿಂದ ಸಮುದಾಯದ ಆರೋಗ್ಯದ ಹಿತದೃಷ್ಟಿಯಿಂದ ಮಹಾರಾಷ್ಟ್ರದ ಗಡಿಯಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಎಲ್ಲ ಸಾರ್ವಜನಿಕರು ಸಹಕರಿಸಬೇಕಾಗಿ ವಿನಂತಿಸಿಕೊಂಡರು. 

ಈ ಸಮಯದಲ್ಲಿ ತಾಲೂಕಾ ದಂಡಾಧಿಕಾರಿ ಪರಿಮಳಾ ದೇಶಪಾಂಡೆ, ತಾಲೂಕ್ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಈರನಗೌಡ ಎಗನಗೌಡರ, ತಾಲೂಕ್ ವೈಧ್ಯಾಧಿಕಾರಿಗಳು ಡಾ. ಪುಷ್ಪಲತಾ ಸುಣ್ಣದಕಲ್ಲ, ಪಿಎಸ್‍ಐ ಹಣಮಂತ ಧರ್ಮಟ್ಟಿ, ಸಣ್ಣ ನೀರಾವರಿ ಇಲಾಖೆ ಅಧಿಕಾರಿ ಮಕಾಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಮ್.ಆರ್. ಮುಂಜೆ, ಸಿಡಿಪಿಓ ಸಂಜೀವ ಸದಲಗಿ, ಕೃಷಿ ಇಲಾಖೆ ಅಧಿಕಾರಿ  ಹಿರೇಮಠ, ಹಾಗೂ ಹಲವಾರು ಇಲಾಖೆಯ ಅಧಿಕಾರಿಗಳು, ಮುಖಂಡÀ ಸುಭಾಷ ಕಟಾರೆ, ಸುಧಾಕರ ಭಗತ, ಅಮೀತ ಪಾಟೀಲ, ರವಿ ಪಾಟೀಲ, ಬಾಳಗೌಡ ಪಾಟೀಲ, ಉತ್ಕರ್ಷ ಪಾಟೀಲ, ಅರುಣ ಗಣೇಶವಾಡಿ, ಪ್ರಕಾಶ ಚೌಗಲಾ, ಕಾಕಾಸಾಬ ಚೌಗಲಾ, ಅರುಣ ಜೋಷಿ, ಚಂದು ಜಾಧವ ಸೇರಿದಂತೆ ಕ್ಷೇತ್ರದ ಅನೇಕ ಮುಖಂಡರು ಇದ್ದರು.


ಸುದ್ದಿ ಓದಿ