ಸುಭಾಷರ ಧೈರ್ಯ ಮಕ್ಕಳಿಗೆ ಪ್ರೇರಣೆಯಾಗಲಿ: ಸಂತೋಷ
ಇಂಡಿ24: ಸ್ವಾಮಿ ವಿವೇಕಾನಂದರ ಆದರ್ಶ, ವಿಚಾರಗಳಿಂದ ಪ್ರಭಾವಿತರಾದ ಸುಭಾಷರು ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣದ ಹಂಗು ತೊರೆದು ಹೋರಾಡಿದ ಸ್ವಾತಂತ್ರ್ಯ ಅಮರ ಪ್ರೇಮಿ ಹಾಗೂ ಭಾರತದ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದ ವೀರ ಮೇಧಾವಿಯಾಗಿದ್ದರು ಎಂದು ಇಂಗ್ಲೀಷ ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಅವರು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ಪರಾಕ್ರಮ ದಿವಸ ಮತ್ತು ರಾಷ್ಟ್ರೀಯ ಹೆಣ್ಣು ಮಗುವಿನ ದಿನ ಹಾಗೂ 2ನೇ ಜೊತೆ ಉಚಿತ ಸಮವಸ್ತ್ರ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಹೆಣ್ಣುಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಜೀವನಶೈಲಿಯ ಸುಧಾರಣೆಯನ್ನು ಪರಿಣಾಮಕಾರಿಯಾಗುವಂತೆ ಮಾಡಬೇಕು. ಸಮಾಜದಲ್ಲಿ ಹೆಣ್ಣು ಮಗುವಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವುದು ಮತ್ತು ಹೆಣ್ಣು ಮಗುವಿನತ್ತ ಸಮಾಜದ ದೃಷ್ಟಿಕೋನ ಬದಲಿಸುವುದು ಅವಶ್ಯಕವಾಗಿದೆ ಎಂದು ಹೇಳಿದರು. ಟಿಜಿಟಿ ಶಿಕ್ಷಕ ಎಸ್ ಎಸ್ ಅರಬ ಮಾತನಾಡುತ್ತಾ ಹೆಣ್ಣಿನ ಸುರಕ್ಷತೆ, ಶಿಕ್ಷಣದ ಅರಿವು ಮೂಡಿಸುವ ಹಾಗೂ ಅವರ ಭದ್ರತೆಗೆ ಸಂಕಲ್ಪ ತೊಡುವ ದಿನ ಇದಾಗಿದ್ದು, ಹೆಣ್ಣು ಮಕ್ಕಳಿಗೆ ರಕ್ಷಣೆ ಮತ್ತು ಅವಕಾಶಗಳನ್ನು ನೀಡಿ, ಅವರ ತೊಂದರೆಗಳ ಬಗ್ಗೆ ಅರಿವು ಮೂಡಿಸುವ ಉದ್ಧೇಶದಿಂದ ಭಾರತದಲ್ಲಿ ಇಂದು ಹೆಣ್ಣು ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕ ಎ ಎಂ ಬೆದ್ರೇಕರ,ಸುಭಾಷರ ದೇಶ ಪ್ರೇಮದ ಪ್ರಜ್ವಲ ಜ್ಯೋತಿ ಸರ್ವರಲ್ಲಿಯೂ ಬೆಳಗಿಸೋಣ.ರಾಷ್ಟ್ರಕ್ಕೆ ನೇತಾಜಿಯವರು ನೀಡಿರುವ ಅದಮ್ಯ ಮನೋಭಾವ ಮತ್ತು ನಿಸ್ವಾರ್ಥ ಸೇವೆಯನ್ನು ಗೌರವಿಸುವ ಪ್ರತಿಯೊಬ್ಬ ದೇಶಾಭಿಮಾನಿಗಳು ರಾಷ್ಟ್ರಕ್ಕೆ ಸಂಕಷ್ಟ ಎದುರಾದಾಗ ಒಗ್ಗಟ್ಟಾಗಿ ವಿರೋಧಿಗಳ ವಿರುದ್ಧ ಹೋರಾಡಲು ಮುಂದಾಗುವ ಗುಣ ಬೆಳೆಸಿಕೊಳ್ಳೋಣ ಎಂದು ಹೇಳಿದರು. ಮಕ್ಕಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.ಎಸ್ ಎಚ್ ಮೈದರಗಿ,ಎಸ್ ಬಿ ಹೆಬ್ಬಾಳ, ಎಸ್ ಪಿ ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದರು.