ವಿದ್ಯಾರ್ಥಿಗಳು ಜಾಗೃತರಾಗಿ ವ್ಯಸನಗಳಿಂದ ದೂರವಿರಲಿ: ಡಾ. ಜೋಗ
ಕಾಗವಾಡ 23: ಚಿಕ್ಕ ವಯಸ್ಸಿನಲ್ಲಿ ಕೆಲ ದುಷ್ಟ ಚಟಗಳು ಅಂಟಿಕೊಳ್ಳುತ್ತಿವೆ. ಇದರಿಂದ ಆರೋಗ್ಯ ಹಾಳಾಗಿ ರೋಗಗ್ರಸ್ತರಾಗಿ ಬದುಕಬೇಕಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಜಾಗೃತರಾಗಿ ವ್ಯಸನಗಳಿಂದ ದೂರ ಉಳಿಯಬೇಕು ಎಂದು ಉಗಾರದ ಖ್ಯಾತ ವೈದ್ಯರಾದ ಡಾ. ಪಿ.ವ್ಹಿ.ಜೋಗ ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಉಗಾರ ಲೈನ್ಸ್ ಕ್ಲಬ್, ದಿ. ಉಗಾರ ಶುಗರ್ ವರ್ಕ್ಸ್, ಉಗಾರ ವೈದ್ಯಕೀಯ ಸಂಘ, ಶ್ರೀಹರಿ ವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ದಿ. 23ರಂದು ಹಮ್ಮಿಕೊಳ್ಳಲಾಗಿದ್ದ ಸಕ್ಕರೆ ಕಾಯಿಲೆ ಮತ್ತು ಕ್ಯಾನ್ಸರ್, ವ್ಯಸನಮುಕ್ತಿ ಬಗ್ಗೆ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಅಲ್ಲದೇ, ಅತಿ ಸಿಹಿ ಪದಾರ್ಥಗಳು ಮತ್ತು ಜಂಕ್ ಫುಡ್ ಸೇವನೆ ಮಾಡಬಾರದು. ಇದರಿಂದಲೇ ರಕ್ತ ಒತ್ತಡ, ಸಕ್ಕರೆ ಕಾಯಿಲೆಗಳು ಅಂಟಿಕೊಳ್ಳುತ್ತಿವೆ. ದಯಮಾಡಿ ವಿದ್ಯಾರ್ಥಿಗಳು ಎಲ್ಲರೊಂದಿಗೆ ವಿನಯದಿಂದ ನಡೆದುಕೊಂಡು ಜನ್ಮ ನೀಡಿದ ತಂದೆ-ತಾಯಿ ಮತ್ತು ನಾಡಿಗೆ ಒಳ್ಳೆ ಹೆಸರು ತರಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಉಗಾರ ಲೈನ್ಸ್ ಕ್ಲಬ್ ಅಧ್ಯಕ್ಷ ಡಾ. ಬಾಬಗೌಡ ಪಾಟೀಲ ಮಾತನಾಡಿ ಸಮಾಜದಲ್ಲಿ ಅತಿವೇಗದಿಂದ ಸಕ್ಕರೆ ಕಾಯಿಲೆ, ಹೃದಯರೋಗ, ಕ್ಯಾನ್ಸರ್, ಮುಂತಾದ ರೋಗಗಳು ಹಬ್ಬುತ್ತಿದ್ದು. ಪ್ರತಿಯೊಬ್ಬರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ. ಇದರಲ್ಲಿ ವಿದ್ಯಾರ್ಥಿಗಳ ಪ್ರಮುಖ ಪಾತ್ರವಿದೆಯೆಂದು ಹೇಳಿದರು.
ರವಿವಾರ ದಿ. 26 ರಂದು ಉಗಾರ ಲೈನ್ಸ್ ಕ್ಲಬ್ ಮತ್ತಿತರ ಸಂಸ್ಥೆಗಳ ಸಹಕಾರದಿಂದ ಮಿರಜದ ಖ್ಯಾತ ತಜ್ಞ ವೈದ್ಯ ಡಾ. ರವಿಕಾಂತ ಪಾಟೀಲ ಇವರ ಪ್ರಮುಖ ನೇತೃತ್ವದಲ್ಲಿ ಉಗಾರ ಆರೋಗ್ಯ ಮಂದಿರದಲ್ಲಿ ಸಕ್ಕರೆ ಕಾಯಿಲೆ, ಕ್ಯಾನ್ಸರ್, ಹೃದಯದ ಬಗ್ಗೆ ಎಲ್ಲ ತಪಾಸಣೆ, ತಲೆನೋವು, ಪ್ಯಾರಾಲೈಸಿಸ್, ಮೂಲವ್ಯಾಧಿ ಇಂಥ ಕಾಯಿಲೆಗಳ ಮೇಲೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2ರ ವರೆಗೆ ಉಚಿತವಾಗಿ ಉಪಚರಿಸುವ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಇದರ ಲಾಭ ಪಡೆದುಕೊಳ್ಳಬೇಕೆಂದು ಅಹ್ವಾನಿಸಿದರು.
ಉಗಾರದ ಶುಭಂ ಗೊಂಧಳಿ ಮತ್ತು ಬಿಬಿಎ ಕಾಲೇಜಿನ ಮಸಿಹಾ ಚಮನ್ ಶೇಖ್, ಸಹ ಇನ್ನೀತರ ವಿದ್ಯಾರ್ಥಿಗಳು ದುಷ್ಟ ಚಟಗಳಿಂದ ಆಗುವ ಪರಿಣಾಮದ ಬಗ್ಗೆ ಬೀದಿ ನಾಟಕ ನಡೆಸಿಕೊಟ್ಟರು.
ಉಗಾರ ಬಸ್ ನಿಲ್ದಾಣದಿಂದ ಬಿಬಿಎ ಮಹಾವಿದ್ಯಾಲಯದ ವರೆಗೆ ಸುಮಾರು 2 ಕಿಮೀ ಅಂತರ ನೂರಾರು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಜನಜಾಗೃತಿ ಜಾಥಾ ಜರುಗಿತು. ಬಿಬಿಎ ಕಾಲೇಜಿನ ಪ್ರಾಚಾರ್ಯರಾದ ರಾಮಚಂದ್ರ ಕಿಲ್ಲೇದಾರ, ಮನೋಜ ಮಾಲಗತ್ತೆ, ಉಗಾರ ಪುರಸಭೆ ಅಧಿಕಾರಿ ಕರ‌್ಯಪ್ಪಾ ಗಾವಡೆ ಮಾರ್ಗದರ್ಶನ ನೀಡಿದರು.
ಜಾಗೃತಿ ಜಾಥಾದಲ್ಲಿ ಎ ಲೈನ್ಸ್ ಕ್ಲಬ್ ಸದಸ್ಯರಾದ ಮನೀಷ ಶಹಾ, ಜಯೇಂದ್ರ ಶೆಟ್ಟಿ, ಡಾ. ಬಿ.ಟಿ.ಮುನ್ನೋಳಿ, ಡಾ. ಎಚ್.ಎನ್.ಸಾಬಡೆ, ಶ್ರೀಕಾಂತ ಭಟ್ಟ, ರಾಜು ಧಡಧಡೆ, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.