ಜಮಖಂಡಿ

ರಾಜ್ಯಾದ್ಯಂತ ಎಮ್‌.ಟಿ.ಸಿ ಕಂಪನಿ ಮಳಿಗೆಗಳನ್ನು ತೆರೆಯಲಿ: ಚಲುವರಾಯಸ್ವಾಮಿ

ರಾಜ್ಯಾದ್ಯಂತ ಎಮ್‌.ಟಿ.ಸಿ ಕಂಪನಿ ಮಳಿಗೆಗಳನ್ನು ತೆರೆಯಲಿ: ಚಲುವರಾಯಸ್ವಾಮಿ

ಜಮಖಂಡಿ 15: ಒಂದೇ ಸೂರಿನಲ್ಲಿ ರೈತರಿಗೆ ದೊರೆಯಬೇಕಾಗುವ ಬೀಜ, ರಸಗೊಬ್ಬರ, ಓಷಧಿಗಳು, ವಿವಿಧ ಯಂತ್ರೋಪಕರಣಗಳು ಸಿಗುವಂತೆ ಮಾಡಿರುವದು (ಎಮ್‌.ಟಿ.ಸಿ) ಕಂಪನಿ  ಶ್ಲಾಘನೀಯ, ರಾಜ್ಯಾದ್ಯಂತ ಇಂತಹ ಮಳಿಗೆಗಳನ್ನು ತೆರೆಯುವ ಕೆಲಸ ಮಾಡಬೇಕು ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದರು. 

ನಗರದ ಕುಡಚಿ ರಸ್ತೆಯ ಮಹಾಲಕ್ಷ್ಮೀ ಟ್ರೇಡಿಂಗ್ ಕಂಪನಿ (ಎಮ್‌.ಟಿ.ಸಿ)ಯ ಮಲ್ಟಿಬ್ರ್ಯಾಂಡ್ ಕೃಷಿ ಮಳಿಗೆ ಮತ್ತು ಕಾರ​‍್ೋರೇಟ್ ನೂತನ ಕಚೇರಿ ಹಾಗೂ ರಸಗೊಬ್ಬರ ಹರಡಿಸುವ ಯಂತ್ರಕ್ಕೆ ಚಾಲನೆ ನೀಡಿ ಮಾತನಾಡಿದರು. 

ರೈತರಿಗೆ ಸರಿಯಾದ ಮಾರ್ಗದರ್ಶನ ಇಲ್ಲದೇ ತೊಂದರೆಯಾಗುತ್ತಿದೆ, ವಿವಿಧ ಕಂಪನಿಯ ಬೀಜ, ಓಷಧ ಒಂದೇ ಕಡೆ ಸಿಗುವದರಿಂದ ರೈತರಿಗೆ ಅನುಕೂಲವಾಗುತ್ತದೆ, ಸರ್ಕಾರದ ವಿವಿಧ ಯೋಜನೆಗಳನ್ನು ರೈತರು ಪಡೆದುಕೊಳ್ಳಬೇಕು, ಯಂತ್ರಗಳಿಗೆ ನೀಡುವ ಸಹಾಯಧನವನ್ನು ಪಡೆದುಕೊಂಡು ಆರ್ಥಿಕವಾಗಿ ಮುಂದೆ ಬರಬೇಕು ಎಂದರು. 

ರಾಜ್ಯಕ್ಕೆ ಬರಗಾಲ ಆವರಿಸಿರುವದರಿಂದ ರೈತರು ತುಂಬಾ ಸಂಕಷ್ಟದಲ್ಲಿದ್ದಾರೆ, ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಹಲವಾರು ಬಾರಿ ಮುಖ್ಯಮಂತ್ರಿಗಳು ಪತ್ರವನ್ನು ಬರೆದಿದ್ದಾರೆ, ನಮ್ಮ ಅಧಿಕಾರಿಗಳು ಸತತ ಸಂಪರ್ಕದಲ್ಲಿದ್ದಾರೆ, ಆದರೆ ಕೇಂದ್ರ ಸರ್ಕಾರ ಯಾವುದೇ ಉತ್ತರವನ್ನು ನೀಡುತ್ತಿಲ್ಲ, ಇನ್ನೇರಡು ದಿನದಲ್ಲಿ ಚರ್ಚೆಮಾಡಿ ರೈತರಿಗೆ ಸೂಕ್ತ ಪರಿಹಾರ ನೀಡಲಾಗುವದು ಎಂದರು. 

ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಪೂರ್ಣ ಮಾಡಲು ಸರ್ಕಾರ ಬದ್ಧವಿದೆ, ಜನರು ನಾವು ನೀಡಿರುವ ಭರವಸೆಗಳನ್ನು ನಂಬಿ ನಮ್ಮನ್ನು ಆಯ್ಕೆಮಾಡಿದ್ದಾರೆ, ಬಿಜೆಪಿ ಮತ್ತು ಜೆಡಿಎಸ್ ನೀಡಿರುವ ಸುಳ್ಳು ಭರವಸೆಗಳನ್ನು ತಿರಸ್ಕರಿಸಿದ್ದಾರೆ ಎಂದರು. 

ಉತ್ತರಕರ್ನಾಟಕದ ಬಗ್ಗೆ ಚರ್ಚೆಮಾಡಲು ಬಿಜೆಪಿಯವರಿಗೆ ಆಸಕ್ತಿಯಿಲ್ಲ, ಯಾವುದಾದರು ಒಂದು ವಿವಾಧವನ್ನು ಎಬ್ಬಿಸುವದೇ ಅವರ ಕೆಲಸವಾಗಿದೆ, ಅವರ ಜೊತೆ ಜೆಡಿಎಸ್ ಕುಮಾರಸ್ವಾಮಿ ಸೇರಿ ಜೈ ಶ್ರೀರಾಮ ಎನ್ನುತ್ತಿದ್ದಾರೆ ಎಂದರು. 

ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶ್ರೀಗಳು ಮಾತನಾಡಿ, 2005ರಲ್ಲಿ ಪ್ರಾರಂಭವಾದ ಮಹಾಲಕ್ಷ್ಮೀ ಕಂಪನಿ ರೈತರಿಗಾಗಿ ಹಗಲಿರುಳು ಶ್ರಮಿಸಿ ಉತ್ತುಂಗಕ್ಕೆರಿದೆ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿಯೂ ಕೆಲಸ ಮಾಡುತ್ತಿರುವದು ಶ್ಲಾಘನಿಯ ಎಂದರು. 

ಇದೇ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ ಸದಸ್ಯ ಮೋಹನ ಲಿಂಬಿಕಾಯಿ, ಧಾರವಾಡ ಕೃಷಿ ವಿಶ್ವವಿದ್ಯಾಲಯ ಉಪಕುಲಪತಿ ಪಿ.ಎಲ್‌.ಪಾಟೀಲ್, ಉದ್ಯಮಿ ಸಂಗಮೇಶ ನಿರಾಣಿ, ಸಂಸ್ಥಾಪಕ ಚಂದ್ರಶೇಖರ ಬಾಗೇವಾಡಿ, ಸಹಸಂಸ್ಥಾಪಕ ಸುರೇಶ ಬಾಗೇವಾಡಿ ಸೇರಿದಂತೆ ಅನೇಕರು ಇದ್ದರು. 


ಸುದ್ದಿ ಓದಿ