ಜನಸಾಮಾನ್ಯರಿಗೆ ಕಾನೂನು ಅರಿವು ನೆರವು ಕಾರ್ಯಕ್ರಮ
ಲೋಕದರ್ಶನ ವರದಿ
ಕಾಗವಾಡ 28: ಬೆಳಗಾವಿ ಜಿಲ್ಲಾ ಪಂಚಾಯಿತಿ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಹಾಗೂ ತಾಲೂಕು ಆಡಳಿತ ಮತ್ತು ಶಿಶು ಅಭಿವೃದ್ಧಿ ಯೋಜನೆ ಇವರ ಸಂಯುಕ್ತಾಶ್ರಯದಲ್ಲಿ ಕಾಗವಾಡ ತಾಲೂಕಿನಲ್ಲಿ “ಬಾಲ್ಯವಿವಾಹ ನಿಷೇಧ” ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ, ಮಕ್ಕಳ ಹಕ್ಕುಗಳು ಕುರಿತು ಜನಸಾಮಾನ್ಯರಿಗೆ ಅರಿವು ಹಾಗೂ ನೆರವು ಮೂಡಿಸುವ ಕಾರ್ಯಕ್ರಮ ಕಾಗವಾಡ-ಉಗಾರದಲ್ಲಿ ನೆರವೇರಿತು.
ರವಿವಾರ ಬೆಳಗ್ಗೆಯಿಂದ ಕಾಗವಾಡ ತಾಲೂಕು ಶಿಶು ಅಭಿವೃದ್ಧಿ ಯೋಜನೆ ಇಲಾಖೆ ಅಧಿಕಾರಿಗಳಾದ ಸಂಜುಕುಮಾರ ಸದಲಗೆ ಇವರ ನೇತೃತ್ವದಲ್ಲಿ ತೆಲ್ಸಂಗ್, ಮದಬಾವಿ, ಉಗಾರ್ ಖುರ್ದ, ಮಂಗಸುಳಿ, ಬಳಿಕ ಕಾಗವಾಡದಲ್ಲಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು, ಅಂಗನವಾಡಿ, ಕಾರ್ಯಕರ್ತರು ಸಮ್ಮುಖದಲ್ಲಿ ಮಾನವ ಸರಪಳಿ ನಿರ್ಮಿಸಿ ಅವರಿಗೆ ಬಾಲ್ಯವಿವಾಹ ನಿಷೇಧ ಕಾಯ್ದೆಗಳ ಬಗ್ಗೆ ಪ್ರಮಾಣವಚನ ನೀಡಲಾಯಿತು.
ರಾಜ್ಯ ಸರ್ಕಾರ ನೀಡಿರುವ ವಾಹನಗಳ ಮುಖಾಂತರ ಎಲ್ಲ ವಿದ್ಯಾರ್ಥಿಗಳಿಗೆ ಬಾಲ್ಯವಿವಾಹ, ಬಾಲಕಾರ್ಮಿಕ, ಬಗ್ಗೆ ಅರಿವು ಮೂಡಿಸುವ ಚಿತ್ರ ಪ್ರದರ್ಶಿಸಲಾಯಿತು.
ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿ ಸಂಜೀವ್‌ಕುಮಾರ ಸದಲಗೆ ಮಾತನಾಡಿ ರಾಜ್ಯ ಸರ್ಕಾರ ಬಾಲ್ಯ ಕಾಯ್ದೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಿರುವ ಸಹಾಯವಾಣಿ 1098 ಗೆ ಸಂಪರ್ಕಿಸಲು ಆಹ್ವಾನಿಸಿದರು. ಈ ಸಹಾಯವಾಣಿಯ ಸದ್ಬಳಕೆ ಮಾಡಿಕೊಂಡು ಗ್ರಾಮೀಣ ಭಾಗದಲ್ಲಿ ಬಾಲಕಾರ್ಮಿಕ, ಭಿಕ್ಷುಕರ ಬೇಡುವ ಪದ್ಧತಿ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕೂಡಲೇ ಅವರಿಗೆ ಸಂಪರ್ಕಿಸಿರಿ, ನೀವು ನೀಡಿರುವ ಮಾಹಿತಿ ಗುಪ್ತವಾಗಿಡಲಾಗುವುದು ಎಂದು ಹೇಳಿದರು.
ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ರಾಜಶ್ರೀ ಕಂತೆ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು, ಅವರೊಂದಿಗೆ ಸುರೇಖಾ ಪಾಟೀಲ್ ಸರ್ಕಾರಿ ಕನ್ನಡ ಶಾಲೆ ಮುಖ್ಯಾಧ್ಯಾಪಕ ಆರ್.ಬಿ ಹೊಸಮನಿ, ಎಸ್.ಜಿ ದೇವರಾಜ್, ಡಿ.ಆರ್. ಜಾದವ, ಕಾಗವಾಡ ಪೋಲಿಸ ಠಾಣೆಯ ಎ.ಎಸ್.ಐ ಎಸ್.ಆರ್. ಕುಂಬಾರ್ ಸೇರಿದಂತೆ ವಿದ್ಯಾರ್ಥಿಗಳು ಶಿಕ್ಷಕರು ಪಾಲ್ಗೊಂಡಿದ್ದರು.
ಸಂಜೆ ಕಾಗವಾಡದಲ್ಲಿ ತಾಲೂಕ ಮಟ್ಟದ ಎಲ್ಲ ಇಲಾಖೆ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ತಹಶೀಲದಾರ ರಾಜೇಶ ಬುರ್ಲಿ ಇವರ ನೇತೃತ್ವದಲ್ಲಿ ನ್ಯಾಯವಾದಿಗಳ ಸಂಘದ ಸದಸ್ಯರು ಸೇರಿದಂತೆ ಇಲಾಖೆ ಅಧಿಕಾರಿಗಳು ಇದ್ದರು.