ವಕ್ಕುಂದದಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮ
ಲೋಕದರ್ಶನ ವರದಿ
ಬೈಲಹೊಂಗಲ 16: ತಾಲೂಕಿನ ವಕ್ಕುಂದ ಗ್ರಾಮದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಕಾನೂನು ಅರಿವಿನ ದೃಢವಾದ ಕೈಂಕರ್ಯ ಅದಕ್ಕಾಗಿ ಈಗ ಗ್ರಾಮ ವಾಸ್ತವ್ಯ ಎಂಬ ವಿನೂತನ ಕಾರ್ಯಕ್ರಮದ ಅಡಿಯಲ್ಲಿ ಮೋರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಗ್ರಾಮವಾಸ್ತವ್ಯದ ಮೂಲಕ ನ್ಯಾಯಾಧೀಶರು ಹಾಗೂ ವಕೀಲರು ಕಾನೂನು ಅರಿವು ನೆರವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಹಿರಿಯ ಸಿವಿಲ್ ನ್ಯಾಯಾಧೀಶೆ ಆರ್. ಉಷಾರಾಣಿ ಮಾತನಾಡಿ, ಸ್ವಚ್ಛ ಸಮಾಜ ಸ್ಥಾಪನೆಗೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕಿದೆ. ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣದ ಕೊರತೆ ಎದ್ದು ಕಾಣುತ್ತಿದೆ. ಸರಕಾರ ವಸತಿ ಶಾಲೆಗಳು ಸ್ಥಾಪಿಸಿವೆ, ಜೊತೆಗೆ ಉಚಿತ ಶಿಕ್ಷಣ ಸಹ ನೀಡಿದೆ. ಯಾವುದೇ ಕಾರಣಕ್ಕೂ ಬಾಲ್ಯವಿವಾಹಕ್ಕೆ ಪ್ರೋತ್ಸಾಹ ನೀಡಬಾರದು ಎಂದರು.
ಪ್ರಧಾನ ದಿವಾಣಿ ನ್ಯಾಯಾಧೀಶ ಮನುಶರ್ಮಾ ಮಾತನಾಡಿ, ಪ್ರತಿಯೊಬ್ಬರಿಗೂ ಕಾನೂನಿನ ತಿಳುವಳಿಕೆ ಅತೀ ಅವಶ್ಯವಾಗಿದೆ ಎಂದರು.
ಅಪರ ಸರಕಾರಿ ವಕೀಲ ರಮೇಶ ಕೋಲಕಾರ ಪಂಚಾಯತ್ ಕಾನೂನಿನ ಬಗ್ಗೆ ಉಪನ್ಯಾಸ ನೀಡಿದರು.
ವಸತಿಶಾಲೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಬಾಲ್ಯವಿವಾಹ ನಿಷೇಧದ ಬಗ್ಗೆ ಅರಿವು ಮೂಡಿಸುವ ಕಿರುಚಿತ್ರ 'ಕಮಲಿ', ಮಕ್ಕಳ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ 'ಹಳ್ಳಿಹುಡುಗಿ' ಕಿರುಚಿತ್ರವನ್ನು ತೋರಿಸಿ ಜಾಗೃತಿ ಮೂಡಿಸಲಾಯಿತು.
ಗ್ರಾಮದ ಪ್ರತಿಮನೆಗಳಿಗೆ ತೆರಳಿ ಕಾನೂನಿನ ಅರಿವಿನ ಕರಪತ್ರ ಹಂಚಿ ಗ್ರಾಮಸ್ಥರಲ್ಲಿ ಕಾನೂನಿನ ತಿಳುವಳಿಕೆ ಮೂಡಿಸಲಾಯಿತು.
ನ್ಯಾಯವಾದಿಗಳು, ಗ್ರಾಮಸ್ಥರು, ವಿದ್ಯಾರ್ಥಿಗಳು ಇದ್ದರು.