ಚೆನ್ನವೀರ ಕಣವಿಯವರ ಕಾವ್ಯಚಿತ್ರಗಳಲ್ಲಿ ತಾತ್ವಿಕ ನೆಲೆಗಳು ವಿಷಯ ಕುರಿತು ಉಪನ್ಯಾಸ
ಧಾರವಾಡ 30: ಕನ್ನಡದ ಸಮನ್ವಯ ಕವಿ ಎಂದು ಖ್ಯಾತಿ ಪಡೆದ ನಾಡೋಜ ಡಾ. ಚೆನ್ನವೀರ ಕಣವಿ ಹೊಸಗನ್ನಡ ಕಾವ್ಯದ ಪ್ರಮುಖ ಕವಿಗಳೊಲ್ಲಬ್ಬರು. ಅವರು ಕಾವ್ಯವೇ ಜೀವನ ಎಂದು ಬದುಕಿದ ಅಗ್ರಗಣ್ಯರು ಎಂದು ಬೆಂಗಳೂರಿನ ವಿಮರ್ಶಕ ಎಸ್.ಆರ್. ವಿಜಯಶಂಕರ್ ಹೇಳಿದರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ನಾಡೋಜ ಡಾ. ಚೆನ್ನವೀರ ಕಣವಿ ಮತ್ತು ಶಾಂತಾದೇವಿ ಕಣವಿ ದತ್ತಿ ಅಂಗವಾಗಿ ಆಯೋಜಿಸಿದ್ದ ಕನ್ನಡದ ಯುವ ಲೇಖಕರಿಗೆ ಚೆನ್ನವೀರ ಕಣವಿ ಕಾವ್ಯ ಸ್ಪರ್ಧೆ ಮತ್ತು ಶಾಂತಾದೇವಿ ಕಣವಿ ಕಥಾ ಸ್ಪರ್ಧೆಯ ಬಹುಮಾನ ವಿತರಣೆ ಹಾಗೂ ವಿಶೇಷ ಉಪನ್ಯಾಸದಲ್ಲಿ ‘ಚೆನ್ನವೀರ ಕಣವಿಯವರ ಕಾವ್ಯಚಿತ್ರಗಳಲ್ಲಿ ತಾತ್ವಿಕ ನೆಲೆಗಳು’ ವಿಷಯ ಕುರಿತು ಮಾತನಾಡುತ್ತಿದ್ದರು. ಮುಂದುವರೆದು ಮಾತನಾಡಿದ ಅವರು, ಡಾ. ಚೆನ್ನವೀರ ಕಣವಿ ಅವರ ಕಾವ್ಯದ ಶಕ್ತಿ ಭಾವನಾ ಪ್ರಧಾನವಾದುದು. ಅವರ ಕಾವ್ಯಗಳಲ್ಲಿ ವ್ಯಕ್ತಿತ್ವ ನಿರ್ಮಾಣ ನಿಸರ್ಗದ ರಮ್ಯತೆಯೇ ಪ್ರಧಾನ ಹಂಬಲಗಳಾಗಿವೆ. ಮಾನವೀಯತೆ, ಆದರ್ಶ ಹಾಗೂ ಸೌಜನ್ಯದ ತಾತ್ವಿಕ ಸಿದ್ಧಾಂತಗಳಿವೆ. ಪ್ರಕೃತಿಯ ವರ್ಣನೆ ಜೊತೆ ನವ್ಯ ವಿಷಯಗಳು ಅವರ ಕಾವ್ಯದಲ್ಲಿವೆ. ಬೆಳಕು ಅವರ ಕಾವ್ಯದ ಮೂಲವಾಗಿದೆ. ಅವರ ಕವನ ಸಂಕಲನ ‘ಕಾವ್ಯಾಕ್ಷಿ’ ಹಾಗೂ ‘ಭಾವಜೀವಿ’ಗಳು ತಾತ್ವಿಕ ನೆಲೆಗಟ್ಟಿನ ಮೇಲೆ ರಚನೆಯಾಗಿವೆ ಎಂದು ಹೇಳಿದರು.
ಖ್ಯಾತ ಚಿಂತಕರಾದ ಡಾ. ಲೋಹಿತ ನಾಯ್ಕರ ಬಹುಮಾನ ಪ್ರದಾನ ಮಾಡಿ ಮಾತನಾಡಿ, ಕನ್ನಡದ ಯುವ ಲೇಖಕರಿಂದ ಆಹ್ವಾನಿತ ಎಲ್ಲಾ ಕಥೆಗಳನ್ನು ಸಂಗ್ರಹಿಸಿ ಪುಸ್ತಕದ ರೂಪದಲ್ಲಿ ಪ್ರಕಟಿಸಿ ಯುವ ಸಾಹಿತಿಗಳನ್ನು ಪ್ರೋತ್ಸಾಹಿಸುವುದು ಅಗತ್ಯವಿದೆ ಎಂದು ಹೇಳಿದರು.
ಕಥಾ ವಿಭಾಗದ ನಿರ್ಣಾಯಕರಾದ ಶ್ರೀಧರ ಗಸ್ತಿ ಮಾತನಾಡಿ, ಕಥೆಗಳಲ್ಲಿ ಹುಟ್ಟುವಿಕೆ ಹಾಗೂ ಕಟ್ಟುವಿಕೆ ಮುಖ್ಯ. ಇಲ್ಲಿ ಕಥೆಗಾರ ಕೆಲವೊಮ್ಮೆ ಪಾತ್ರಧಾರಿಯಾಗಿ ಭಾವನೆ ಅಭಿವ್ಯಕ್ತಗೊಳಿಸಬೇಕಾಗುತ್ತದೆ. 32 ಕಥೆಗಳಲ್ಲಿ ಸಂಸ ಕಥೆ ಮನೋಜ್ಞವಾಗಿದ್ದು ಎಲ್ಲರೂ ಓದಲೇಬೇಕಾದುದಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕ.ವಿ.ವ. ಸಂಘದ ಉಪಾಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ಚೆನ್ನವೀರ ಕಣವಿಯವರು ತಮ್ಮ ಮೇರು ಕಾವ್ಯಗಳ ಮೂಲಕ ಇಂದಿಗೂ ಜೀವಂತವಾಗಿದ್ದಾರೆ. ಕಾವ್ಯದ ಓದು ಮುಖ್ಯ. ಕಣವಿಯವರ ಕಾವ್ಯ ಓದಿದವರು ತತ್ವಜ್ಞಾನಿಗಳಾಗಲು ಸಾಧ್ಯ. ಕವಿಗೆ ಸಂವೇದನೆ ಮುಖ್ಯ ಎಂದರು.
ವೇದಿಕೆ ಮೇಲೆ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ದತ್ತಿದಾನಿ ಶಿವಾನಂದ ಕಣವಿ ಇದ್ದರು.
ದತ್ತಿ ಅಂಗವಾಗಿ ಕನ್ನಡದ ಯುವ ಲೇಖಕರಿಗೆ ಆಯೋಜಿಸಿದ್ದ ಚೆನ್ನವೀರ ಕಣವಿ ಕಾವ್ಯ ಸ್ಪರ್ಧೆಯಲ್ಲಿ ಚಾಮರಾಜ ನಗರದ ಆರ್. ದೀಲೀಪ್ ಕುಮಾರ ಅವರ ‘ಅಮೃತವರ್ಷಿಣಿ’ ಕಾವ್ಯ ಪ್ರಥಮ ಬಹುಮಾನ, ಯಾದಗೀರನ ಕು. ಮಹೇಶ್ವರಿ, ಅಲ್ಕೂರ ಅವರ ‘ಮೌನ ಅಳು’ ಕಾವ್ಯ ದ್ವೀತೀಯ ಬಹುಮಾನ ಹಾಗೂ ಧಾರವಾಡದ ಕು. ಕವಿತಾ ವೀರನಗೌಡ ಪಾಟೀಲ ಅವರ ‘ಉರ್ಮಿಳೆ’ ಕಾವ್ಯ ತೃತೀಯ ಬಹುಮಾನ ಪಡೆದವು ಮತ್ತು ಶಾಂತಾದೇವಿ ಕಣವಿ ಕಥಾ ಸ್ಪರ್ಧೆಯಲ್ಲಿ ರೋಣದ ಡಾ. ಅಂದಯ್ಯ ಅರವಟಗಿಮಠ ಅವರ ‘ದೈವ ದೈವಗಳಾಚೆ’ ಕಥೆ ಪ್ರಥಮ ಬಹುಮಾನ, ಅನಂತ ಕುಣಿಗಲ್ ಅವರ ‘ಸಂಸ’ ಕಥೆ ದ್ವಿತೀಯ ಬಹುಮಾನ ಹಾಗೂ ಸಂಜೀವ ಜಗ್ಲಿ, ಮಾನವಿ ಅವರ ‘ಸಾಲಿ’ ಕಥೆ ತೃತೀಯ ಬಹುಮಾನ ಪಡೆದವು. ಕಾವ್ಯ ಮತ್ತು ಕಥಾ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಯುವ ಲೇಖಕರನ್ನು ಗೌರವಿಸಿ ಸನ್ಮಾನಿಸಲಾಯಿತು. ಚಾಮರಾಜ ನಗರದ ಆರ್. ದೀಲೀಪ್ ಕುಮಾರ ಬಹುಮಾನಿತರ ಪರವಾಗಿ ಮಾತನಾಡಿದರು.
ವೀರಣ್ಣ ಒಡ್ಡೀನ ಸ್ವಾಗತಿಸಿದರು. ಗುರು ಹಿರೇಮಠ ಪರಿಚಯಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ಸತೀಶ ತುರಮರಿ ವಂದಿಸಿದರು.
ಕಾರ್ಯಕ್ರಮದಲ್ಲಿ ಡಾ. ಶೈಲಜಾ ಅಮರಶೆಟ್ಟಿ, ಶಿವಾನಂದ ಭಾವಿಕಟ್ಟಿ, ಕರುಣಪ್ರಸಾದ ಕಣವಿ, ರಂಜನಾ ಗೋದಿ, ಡಾ. ಅಶೋಕ ಗೋದಿ, ಎಸ್.ಎಂ. ಶಿವಪ್ರಸಾದ, ಡಾ. ಆನಂದ ಪಾಟೀಲ, ನಿಂಗಣ್ಣ ಕುಂಟಿ, ಸಿ.ಯು. ಬೆಳ್ಳಕ್ಕಿ, ನಿಂಗಪ್ಪ ಮಾಯಕೊಂಡ, ಮಹಾಂತೇಶ ನರೇಗಲ್, ಬಿ.ಎಸ್. ಶಿರೋಳ, ಕೆ.ಎಂ. ಅಂಗಡಿ, ಸಿ.ಎಸ್. ಮಾಳವಾಡ ಸೇರಿದಂತೆ ಕಣವಿ ಪರಿವಾರದವರು ಉಪಸ್ಥಿತರಿದ್ದರು.