ಗುಳೇಗುಡ್ಡ

ಬಾರದ ಲೋಕಕೆ ಭಾವಕವಿ ಲಕ್ಷ್ಮೀನಾರಾಯಣ ಭಟ್

ಬಾರದ ಲೋಕಕೆ ಭಾವಕವಿ ಲಕ್ಷ್ಮೀನಾರಾಯಣ ಭಟ್
ಡಾ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್

ಗುಳೇದಗುಡ್ಡ06: ಕನ್ನಡ ಸಾಹಿತ್ಯ ಲೋಕದಲ್ಲಿ ಎನ್ನೆಸ್ಸೆಲ್ ಎಂದೇ ಪ್ರಖ್ಯಾತರಾಗಿದ್ದ ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್‍ರು ಶನಿವಾರ ವಯೋಸಹಜ ಕಾಯಿಲೆಯಿಂದ ತಮ್ಮ 84 ನೇ ವಯಸ್ಸಿನಲ್ಲಿ ಬಾರದ ಲೋಕಕೆ ಹೋಗಿದ್ದು ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ.ಎಂ.ಜೋಶಿ ಹೇಳಿದ್ದಾರೆ.

ಶನಿವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಭಾವಗೀತೆ, ಸಾಹಿತ್ಯ ವಿಮರ್ಶೆ, ಅನುವಾದ, ನವ್ಯ ಕವಿತೆ, ಮಕ್ಕಳಗೀತೆ ರಚನೆ ಸೇರಿದಂತೆ ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ಕೃಷಿ ಮಾಡಿದ್ದ ಭಟ್‍ರು ಶೇಕ್ಸ್‍ಪೀಯರ್‍ನ ಹದಿನಾಲ್ಕು ಸಾಲುಗಳ ಪದ್ಯ (ಸಾನೆಟ್ಸ್) ಗಳನ್ನು ಹಾಗೂ ಯೇಟ್ಸ್‍ನ ಐವತ್ತು ಕವಿತೆಗಳ ಚಿನ್ನದಹಕ್ಕಿ ಕೃತಿಯನ್ನೂ  ಅನುವಾದಿಸಿ ಹೆಸರು ಮಾಡಿದ್ದರು. ಭಾವಗೀತೆಗಳ ರಚನೆಗೆ ತಮ್ಮದೇ ಆದ ಛಾಪು ಮೂಡಿಸಿದ್ದ ಇವರ ನೀ ಸಿಗದೇ ಬಾಳೊಂದು ಬಾಳೇ ಕೃಷ್ಣಾ ಎಂದು ಕೇಳುವ ಭಾವಗೀತೆ ಜನ ಮಾನಸದಲ್ಲಿ ಎಂದಿಗೂ ಅಜರಾಮರ  ಎಂದಿದ್ದಾರೆ. 

ಸಂತಾಪ : ಲಕ್ಷ್ಮೀ ನಾರಾಯಣ ಭಟ್ ಅವರ ನಿಧನಕ್ಕೆ ಪಟ್ಟಣದ ಹಿರಿಯ ಸಾಹಿತಿಗಳು ಹಾಗೂ ವಿವಿಧ ಸಾಹಿತ್ಯ ಸಂಘಟನೆಗಳು ತಮ್ಮ ಸಂತಾಪ ವ್ಯಕ್ತಪಡಿಸಿವೆ. ಹಿರಿಯ ಸಾಹಿತಿ ಎಂ.ವಿ.ಬನ್ನಿ, ಡಾ. ಭೀಮನಗೌಡ ಪಾಟೀಲ, ಡಾ. ಎಚ್.ಎಸ್. ಘಂಟಿ, ಮಹಾದೇವ ಜಗತಾಪ, ಡಾ. ಸಣ್ಣವೀರಣ್ಣ ದೊಡಮನಿ,ಡಾ. ಮಂಜಣ್ಣ, ಸಿದ್ದಲಿಂಗಪ್ಪ ಬರಗುಂಡಿ, ಎಸ್.ಎಸ್.ಹೂಗಾರ, ಬಸವರಾಜ ಯಂಡಿಗೇರಿ, ಮಲ್ಲಿಕಾರ್ಜುನ ರಾಜನಾಳ, ಸುರೇಶ ಸಾರಂಗಿ, ತಾಲೂಕಾ ಕನ್ನಡ ಸಾಹಿಯ್ಯ ಪರಿಷತ್ತು ಹಾಗೂ ತಾಲೂಕಾ ಕರ್ನಾಟಕ ಜಾನಪದ ಪರಿಷತ್ತು ಘಟಕದ ಪದಾಧಿಕಾರಿಗಳು ಭಟ್‍ರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.  

ಸುದ್ದಿ ಓದಿ