ದಿ. ತಲ್ಲೂರ ರಾಯನಗೌಡ್ರು ಮಹಾನ್ ದೇಶ ಭಕ್ತರು: ಮಲಕಣ್ಣವರ
ಧಾರವಾಡ 01: ದಿ. ತಲ್ಲೂರ ರಾಯನಗೌಡ್ರು ಪಾಟೀಲ ಭವ್ಯ ಭಾರತದ ಉಜ್ವಲ್ ಕನಸುಗಾರರು ಹಾಗೂ ಮಹಾನ್ ದೇಶ ಭಕ್ತರು. ಸಮಾಜ ಸೇವೆಯೇ ದೇವರ ಸೇವೆ ಎಂದು ಬಾಳಿದ ಸಾರ್ಥಕ ಜೀವಿಗಳು ಎಂದು ಮುರಗೋಡ ಪ.ಪೂ. ಮಹಾವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಎನ್. ಬಿ. ಮಲಕಣ್ಣವರ ಅಭಿಪ್ರಾಯಪಟ್ಟರು.
ಕರ್ನಾಟಕ ವಿದ್ಯಾವರ್ಧಕ ಸಂಘವು ತಲ್ಲೂರ ರಾಯನಗೌಡ ಪಾಟೀಲ ಸ್ಮಾರಕ ಸಂಸ್ಥೆಯ ದತ್ತಿ ಕಾರ್ಯಕ್ರಮದಲ್ಲಿ ತಲ್ಲೂರ ರಾಯನಗೌಡರು ನಡೆದು ಬಂದ ದಾರಿ’ ವಿಷಯ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.
ದಿ. ತಲ್ಲೂರ ರಾಯನಗೌಡ್ರು ಪಾಟೀಲರದು ಬಹುಮುಖ ವ್ಯಕ್ತಿತ್ವ, ವಾಸ್ತವಿಕ ಬದುಕು. ಶ್ರೇಷ್ಠ ಕೃಷಿಕರಾದ ಅವರು ಬ್ರಿಟಿಷ ಸರಕಾರದ ಆ ಅವಧಿಯಲ್ಲಿ ರೈತರಿಗೆ ವೈಜ್ಞಾನಿಕ ಕೃಷಿ ಉಪಕರಣಗಳ ಬಳಕೆಯ ಬಗ್ಗೆ ಉಪಯುಕ್ತ ಮಾಹಿತಿ ನೀಡುತ್ತಿದ್ದರು. ಸಹಕಾರ ತತ್ವದಡಿ ಸಹಕಾರಿ ಸಂಘ ಸ್ಥಾಪಿಸಿ ಜನಸೇವೆ ಮಾಡಿದರು. ಅಪ್ಪಟ ಶರಣ ಸಂಸ್ಕೃತಿಯಂತೆ ಬಾಳಿದ ಅವರು ವಿಚಾರದಲ್ಲಿ ಉದಾರತೆ ಕೃತಿಯಲ್ಲಿ ಮಾನವೀಯತೆ ಬೆಳೆಸಿಕೊಂಡು ಸರ್ವಧರ್ಮದವರ ಏಳ್ಗೆಗಾಗಿ ಶ್ರಮಿಸಿದ ಅವರು ಸಾಹಿತ್ಯಾಸಕ್ತರೂ ಆಗಿದ್ದರು.
ಸ್ವಾತಂತ್ರ್ಯ ಹೋರಾಟದ ಆ ಕಾಲ ಘಟ್ಟದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ಸೆರೆಮನೆವಾಸವನ್ನೂ ಅನುಭವಿಸಿ, ರಾಜಪ್ರಭುತ್ವ ಧಿಕ್ಕರಿಸಿ ಪ್ರಜಾಪ್ರಭುತ್ವ ಪ್ರತಿಪಾದಕರಾಗಿದ್ದರು. ಇಂಗ್ಲಂಡಿನ ರಾಣಿಯನ್ನು ಭೇಟಿಯಾಗಿ ಕಿತ್ತೂರು ಸಂಸ್ಥಾನದ ಬಗ್ಗೆ ಬೆಳಕು ಚೆಲ್ಲುವ ಸಮಗ್ರ ದಾಖಲೆ ಸಂಗ್ರಹಿಸಿ, ರಾಣಿ ಚೆನ್ನಮ್ಮನ ಬಗ್ಗೆ ಚಲನಚಿತ್ರ ನಿರ್ಮಾಣ ಮಾಡಿದರು. ಕುಟುಂಬ ವತ್ಸಲರಾದ ರಾಯನಗೌಡ್ರು ಎಲ್ಲರನ್ನು ಸಮಭಾವದಿಂದ ಕಂಡವರು. ವೈಜ್ಞಾನಿಕ ಚಿಂತನೆಯ ಅವರ ಯಶೋಗಾಥೆ ಇಂದಿನ, ಮುಂದಿನ ಪೀಳಿಗೆಗೆ ಚೇತೋಹಾರಿಯಾಗಬೇಕೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕ.ವಿ.ವ. ಸಂಘದ ಅಧ್ಯಕ್ಷ ಚಂದ್ರಕಾಂತ ಗುರ್ಪ ಬೆಲ್ಲದ ಮಾತನಾಡಿ, ಮಹಾನ್ ಪ್ರತಿಭಾ ಸಂಪನ್ನರಾದ ದಿ. ರಾಯನಗೌಡ್ರು ಪಾಟೀಲರದು ದಿವ್ಯ ವ್ಯಕ್ತಿತ್ವ. ಘನವಾದ ಬದುಕು. ಆ ಪ್ರಾತಃಸ್ಮರಣೀಯರ ಜೀವನ ಸಂದೇಶಗಳು ಭವಿಷ್ಯದ ಪೀಳಿಗೆಗೆ ಪ್ರೇರಕವಾಗಲೆಂದು ಹೇಳಿದರು.
ವೇದಿಕೆಯಲ್ಲಿ ದತ್ತಿದಾನಿ ದೇವಿಕಾರಾಣಿ ಬ. ಪಾಟೀಲ ಉಪಸ್ಥಿತರಿದ್ದರು.
ವೀರಣ್ಣ ಒಡ್ಡೀನ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು.
ಡಾ. ಜಿನದತ್ತ ಹಡಗಲಿ, ಡಾ. ಧನವಂತ ಹಾಜವಗೋಳ, ಬಿ.ಎಲ್. ಪಾಟೀಲ, ಎಸ್.ಜಿ. ಪಾಟೀಲ, ಶಂಕರಲಿಂಗ ಶಿವಳ್ಳಿ, ಮನೋಜ ಪಾಟೀಲ, ಗುರು ತಿಗಡಿ, ಗೌರಮ್ಮ ವಾಲಿ, ಶಂಕರಗೌಡ ಪಾಟೀಲ, ಎಂ.ಎಂ. ಚಿಕ್ಕಮಠ, ಬಿ.ಕೆ.ಹೊಂಗಲ್, ಡಾ. ಬಾಳಪ್ಪ ಚಿನಗುಡಿ, ಸದಾನಂದ ಶಿವಳ್ಳಿ ಸೇರಿದಂತೆ ರಾಯನಗೌಡ್ರ ಪರಿವಾರದವರು ಉಪಸ್ಥಿತರಿದ್ದರು.