ಸಮುದಾಯ ಭವನಕ್ಕೆ ಕುಮಠಳ್ಳಿ ಭೂಮಿ ಪೂಜೆ
ಅಥಣಿ 24: ಪಟ್ಟಣದ ರಾಘವೇಂದ್ರ ಸ್ವಾಮಿ ಮಠದ ಆವರಣದಲ್ಲಿ 50 ಲಕ್ಷ ರೂ.ವೆಚ್ಚದ ಸಮುದಾಯ ಭವನಕ್ಕೆ ಕೊಳಗೇರಿ ನಿಗಮದ ಅಧ್ಯಕ್ಷ, ಶಾಸಕ ಮಹೇಶ ಕುಮಠಳ್ಳಿ ಭೂಮಿ ಪೂಜೆ ನೆರವೇರಿಸಿದರು. ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಮಹೇಶ ಕುಮಠಳ್ಳಿ, ರಾಜ್ಯ ಸರಕಾರದ ವಿಶೇಷ ಯೋಜನೆಯಡಿ ಈಗಾಗಲೇ ಅಥಣಿ ಮತಕ್ಷೇತ್ರದಲ್ಲಿ 10 ಸಮುದಾಯ ಭವನಗಳಿಗೆ ಚಾಲನೆ ನೀಡಲಾಗಿದೆ ಎಂದರು.
ಎಲ್ಲ ಧರ್ಮಗಳ ಜಾತಿ, ಒಳ ಪಂಗಡಗಳ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರ್ಪನವರು ಸಮುದಾಯ ಭವನಗಳ ನಿರ್ಮಾಣಕ್ಕೆ ಆದ್ಯತೆ ನೀಡಿದ್ದಾರೆ ಎಂದ ಅವರು ಕರೋನಾ ಸಂಕಷ್ಟದ ಸಮಯದಲ್ಲಿ ಆರ್ಥಿಕ ವ್ಯವಸ್ಥೆ ಕುಸಿದಿದ್ದರೂ ಕೂಡ ರಾಜ್ಯದಲ್ಲಿ ಅಭಿವೃದ್ಧಿ ಮತ್ತು ಜನಪರ ಕಾರ್ಯಕ್ರಮಗಳಿಗೆ ಸಾಕಷ್ಟು ಅನುದಾನ ಬಿಡುಗಡೆಗೊಳಿಸಿದ್ದಾರೆ. ಸ್ಥಳೀಯ ರಾಘವೇಂದ್ರ ಸ್ವಾಮಿ ಮಠದಲ್ಲೂ ಕೂಡ 50 ಲಕ್ಷ ರೂ.ಗಳ ವೆಚ್ಚದಲ್ಲಿ ಸುಸಜ್ಜಿತವಾದ ಸಮುದಾಯ ಭವನ ನಿರ್ಮಿಸಲು ಇಂದು ಭೂಮಿ ಪೂಜೆ ನೆರವೇರಿದೆ ಎಂದರು.
ಇದಕ್ಕೂ ಮೊದಲು ಶಾಸಕ ಮಹೇಶ ಕುಮಠಳ್ಳಿ ಇವರನ್ನು ಶ್ರೀ ರಾಘವೇಂದ್ರ ಸ್ವಾಮಿ ಮಠದ ಭಕ್ತರು ಬರಮಾಡಿಕೊಂಡರು ನಂತರ ಶ್ರೀಮಠದಲ್ಲಿ ಮಂಗಳಾರತಿ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಇಂಜನೀಯರ್ ಅರುಣ ಯಲಗುದ್ರಿ, ನೀರಾವರಿ ಇಲಾಖೆಯ ಬಿ.ಆರ್.ರಾಠೋಡ, ಕೆ.ಕೆ.ಜಾಲಿಬೇರಿ ಸೇರಿದಂತೆ ಬ್ರಾಹ್ಮಣ ಸಮುದಾಯದ ಬಂಧುಗಳು ಉಪಸ್ಥಿತರಿದ್ದರು.