ಭಕ್ತಿಭಾವದಿಂದ ಉಗಾರ ಖುರ್ದ ಲಕ್ಷ್ಮೀದೇವಿ ಜಾತ್ರೆ
ಲೋಕದರ್ಶನ ವರದಿ
ಕಾಗವಾಡ 10: ಕೃಷ್ಣಾ ನದಿ ತೀರದಲ್ಲಿರುವ ಉಗಾರ ಖುರ್ದ ಪಟ್ಟಣದ ಗ್ರಾಮದೇವತೆ ಲಕ್ಷ್ಮೀದೇವಿಯ ಜಾತ್ರೆ ಭಕ್ತಿಭಾವದಿಂದ ಜರುಗಿತು.
ಕಳೆದ ಎರಡು ವರ್ಷಗಳಿಂದ ಕೊರೊನಾ ಮಹಾಮಾರಿ ಒಕ್ಕರಿಸಿದ ಪರಿಣಾಮ ಜಾತ್ರೆ ಆಚರಿಸಿರಲಿಲ್ಲಾ. ಅಲ್ಲದೇ, ಸನ್ 2019 ರಂದು ಕೃಷ್ಣಾ ನದಿ ನೀರಿಲ್ಲದೇ ಬತ್ತಿಹೋಗಿತ್ತು. ಆಗ ಭಕ್ತಾದಿಗಳಿಗೆ ನದಿಯಲ್ಲಿ ಸ್ನಾನ ಮಾಡಿ ದೀರ್ಘದಂಡ ನಮಸ್ಕಾರ ಹಾಕಲು ತೊಂದರೆಯಾಗಿತ್ತು.
ಆದರೆ, ಪ್ರಸಕ್ತ ವರ್ಷ ಕೃಷ್ಣಾ ನದಿ ತುಂಬಿ ಹರಿಯುತ್ತಿದೆ ಮತ್ತು ಕೊರೊನಾ ಉಪಟಳ ತಪ್ಪಿದ್ದರಿಂದ ಎಲ್ಲ ಭಕ್ತಾದಿಗಳು ಉತ್ಸಾಹದಿಂದ ಜಾತ್ರೆ ಆಚರಿಸುತ್ತಿದ್ದಾರೆ. ಮಂಗಳವಾರ ರಂದು ದೇವಿಯ ಪಲ್ಲಕ್ಕಿ ಮೆರವಣಿಗೆ ಅದ್ಧೂರಿಯಾಗಿ ನೆರವೇರಿತು.
31 ಕೆಜಿ ಬೆಳ್ಳಿಯ ಚೌಕಟ್ಟು:
ಉಗಾರ ಸಕ್ಕರೆ ಕಾರ್ಖಾನೆಯ ಉದ್ಯಮಿಗಳಾದ ಚಂದನ ಶಿರಗಾಂವಕರ ಮತ್ತು ಬಂಧುಗಳು ಜಾಗೃತ ಲಕ್ಷ್ಮೀ ದೇವಿಯ ಮಂದಿರದ ಪ್ರವೇಶ ದ್ವಾರಕ್ಕೆ ಸುಮಾರು 31 ಕೇಜಿ ತೂಕಿನ ಬೆಳ್ಳಿ ಚೌಕಟ್ಟು ದಾನವಾಗಿ ನೀಡಿದ್ದಾರೆ. ಇವರ ಭಕ್ತಿ ಎಲ್ಲ ಭಕ್ತಾದಿಗಳು ಕೊಂಡಾಡುತ್ತಿದ್ದಾರೆ. ಸುಂದರವಾದ ಚೌಕಟ್ಟು ನಿರ್ಮಿಸಿದ್ದು, ಇದರ ಪೂಜೆ ಆರ್ಚಕರಿಂದ ನೆರವೇರಿತು.
ಜಾತ್ರಾ ಕಮೀಟಿ ಉಪಾಧ್ಯಕ್ಷರು ಹಾಗೂ ಮಾಜಿ ಶಾಸಕ ರಾಜು ಕಾಗೆ, ಅಧ್ಯಕ್ಷ ದಾದೋಬಾ ಥೋರುಶೆ, ಜಾತ್ರಾ ಕಮೀಟಿಯ ಎಲ್ಲ ಸದಸ್ಯರು, ಭಕ್ತರು, ಆರ್ಚಕರು ಸಹವಾದ್ಯದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಿಂದ ಪಲ್ಲಕ್ಕಿ ಮೆರವಣಿಗೆ ಪ್ರಾರಂಭಿಸಿ ಕೃಷ್ಣಾ ನದಿಗೆ ತೆರಳಿ ದೇವಿಯ ಪಲ್ಲಕ್ಕಿಗೆ ಪೂಜೆ, ಆರ್ಚನೆ ಸಲ್ಲಿಸಿ ಮರಳಿ ಮಂದಿರಕ್ಕೆ ಬಂದು ಪಲ್ಲಕ್ಕಿ ಮೆರವಣಿಗೆ ಕೊನೆಗೊಳಿಸಿದರು. ಮಾರ್ಗದ ಮಧ್ಯದಲ್ಲಿ ಸದ್ಭಕ್ತರು ಪಲ್ಲಕ್ಕಿಗೆ ಪೂಜೆ ಸಲ್ಲಿಸುತ್ತಿದ್ದರು.
ಪಲ್ಲಕ್ಕಿ ಮೆರವಣಿಗೆ ಯಶಸ್ವಿಗೊಳಿಸಲು ಮಾಜಿ ಶಾಸಕ ರಾಜು ಕಾಗೆ, ದಾದೋಬಾ ಥೋರುಶೆ, ದೀಪಕ ಪಾಟೀಲ, ರಾಕೇಶ ಪಾಟೀಲ, ಪ್ರಫೂಲ ಥೋರುಶೆ, ಸುರೇಶ ವಾಘಮೋಡೆ, ಮುಖ್ಯಾಧಿಕಾರಿಗಳಾದ ಸುನೀಲ ಬಬಲಾದಿ, ಕರ್ಯಪ್ಪಾ ಗಾವಡೆ, ಮದನ ದೇಶಿಂಗೆ, ಯೊಗೇಶ ಕುಂಬಾರ, ಸತೀಶ ಜಗತಾಪ, ರೋಹನ ನಾಯಿಕ, ರಾಜೇಂದ್ರ ಕಾಂಬಳೆ, ರಾಧಿಕಾ ಗುರವ, ಅಶ್ವೀನಿ ಪೋತದಾರ, ಮಹಾದೇವಿ ಗುರವ, ಏಕನಾಥ ಗುರವ, ರಾಜು ಗುರವ, ಸೇರಿದಂತೆ ಸಾವಿರಾರು ಸದ್ಭಕ್ತರು ಸಹಕರಿಸಿದರು.
ಜಾತ್ರೆಯ ಮುಖ್ಯ ದಿನವಾದ ಬುಧವಾರ ರಂದು ಬೆಳಿಗ್ಗೆ ಮಹಾಪೂಜೆ, ಅಭಿಷೇಕ, ನೈವದ್ಯ ಕಾರ್ಯಕ್ರಮ ನೆರವೇರಲಿದ್ದು, ಜಾನುವಾರಗಳ ಪ್ರದರ್ಶನ, ಕಬ್ಬಡ್ಡಿ ಸ್ಪರ್ಧೆ, ಕುದುರೆಗಾಡಿ ಶರ್ಯತ್ತು, ಓಟದ ಸ್ಪರ್ಧೆ ಹಮ್ಮಿಕೊಂಡಿದ್ದಾರೆ.