ಕೆರೆಗಳು ಊರಿನ ಸಮೃದ್ಧಿಯ ಪ್ರತೀಕ: ದುಗ್ಗೆಗೌಡರು
ಕಾಗವಾಡ 16: ಗ್ರಾಮೀಣ ಪ್ರದೇಶದ ಕೆರೆಗಳು ಪ್ರತಿಯೊಂದು ಊರಿನ ಸಮೃದ್ಧಿಯ ಪ್ರತೀಕವಾಗಿದೆ. ಗ್ರಾಮೀಣ ಜನ ಜೀವನವು ಸಂಪೂರ್ಣವಾಗಿ ಕೆರೆಗಳ ಮೇಲೆಯೆ ಅವಲಂಬಿತವಾಗಿದೆ. ಅಚ್ಚು ಕಟ್ಟಿನ ಪ್ರದೇಶ ಗುರುತಿಸಿ ಅಲ್ಲಿ ವ್ಯವಸ್ಥಿತವಾಗಿ ಕೆರೆಗಳನ್ನು ನಿರ್ಮಿಸಿರುವ ನಮ್ಮ ಪೂರ್ವಜರ ಸಾಧನೆಯೇ ಅದ್ಭುತ ಎಂದು ಧಾರವಾಡ ಪ್ರಾದೇಶಿಕ ನಿರ್ದೆಶಕ ದುಗ್ಗೆಗೌಡರು ಹೇಳಿದರು.
ಬುಧವಾರ ದಿ. 15ರಂದು ಕಾಗವಾಡ ಪಟ್ಟಣದ ವಿದ್ಯಾ ಸಾಗರ ಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಗವಾಡ ಘಟಕ ಆಯೋಜಿಸಿದ ಪತ್ರಿಕಾಗೋಷ್ಠಿ ಹಾಗು ಪತ್ರಕರ್ತರ ಸತ್ಕಾರ ಸಮಾರಂಭವನ್ನು ದೀಪ ಪ್ರಜ್ವಲಿಸುವದರ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ಅಂತರ್ಜಲದ ಮುಖ್ಯ ಸೆಲೆಯಾಗಿದ್ದ ಈ ಕೆರೆಗಳು ಮಳೆಗಾಲದಲ್ಲಿಯೇ ನೀರು ತುಂಬದ ಮಟ್ಟಕ್ಕೆ ಬಂದಿದೆ. ಕೆರೆಗಳ ಇಂದಿನ ದುಃಸ್ಥಿತಿಗೆ ನೇರವಾಗಿ ಮಾನವನೇ ಹೊಣೆ ಹೊರತು ಬೇರೆ ಯಾರೂ ಅಲ್ಲ. ಹಾಗಾಗಿ ಇಂದು ಹೆಚ್ಚುತ್ತಿರುವ ನೀರಿನ ಬೇಡಿಕೆಗೆ ಕೆರೆಗಳನ್ನು ಪುನಃಶ್ಚೇತನಗೊಳಿಸದ ಹೊರತು ಬೇರೆ ಯಾವುದೇ ಮಾರ್ಗೋಪಾಯಗಳು ಇಲ್ಲವಾಗಿದೆ. ಇಂದಿನ ಬರಗಾಲದ ಪರಿಸ್ಥಿತಿಗೆ ಪ್ರತಿಯೊಂದು ಕೆರೆಗಳ ಹೂಳೆತ್ತಿ ಅವುಗಳ ಜೀರ್ಣೋದ್ಧಾರಗೊಳಿಸುವ ಅವಶ್ಯಕತೆ ಇದೆ. ಆದರೆ ಪುನಃಶ್ಚೇತನದ ಕೆಲಸವು ಸ್ಥಳೀಯರ ಮೂಲಕವೇ ನಡೆಯಬೇಕೆಂಬ ನಿಟ್ಟಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ, ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆಯವರ ನೇತೃತ್ವದಲ್ಲಿ ಮಾನ್ಯ ಕಾರ್ಯನಿರ್ವಾಹಕ ನಿರ್ದೇಶಕರ ಮಾರ್ಗದರ್ಶನದಲ್ಲಿ “ನಮ್ಮೂರು ನಮ್ಮ ಕೆರೆ’ ಯೋಜನೆಯನ್ನು ರೂಪಿಸಿದೆ.
ಈಗಾಗಲೇ ರಾಜ್ಯದಲ್ಲಿ ಅತ್ಯಂತ ಯಶಸ್ವಿಯಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇದೀಗ ಹೊರ ರಾಜ್ಯಗಳಿಗೂ ಮುನ್ನಡಿಯಿಡಲಿದೆ. ಈ ಬಗ್ಗೆ ಮಾಹಿತಿ ನೀಡಿದ ಅವರು ಯೋಜನೆಯ ಈಗಾಗಲೇ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಬೇರೂರಿದ್ದು, ಸ್ವಸಹಾಯ ಸಂಘಗಳು ಕೆಲಸ ಮಾಡುತ್ತಿವೆ. ಭವಿಷ್ಯದಲ್ಲಿಇತರ ರಾಜ್ಯಗಳಿಗೆ ವಿಸ್ತರಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಮಹಾರಾಷ್ಟ್ರ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಅಲ್ಲಿನ ಸಂಘಟನೆಗಳ ಜತೆ ಸೇರಿಕೊಂಡು ಗ್ರಾಮಾಭಿವೃದ್ಧಿ ಯೋಜನೆಯನ್ನು ವಿಸ್ತರಿಸುವ ಬಗ್ಗೆ ಯೋಚಿಸಲಾಗುತ್ತಿದೆ ಎಂದು ತಿಳಿಸಿದರು.
ಪತ್ರಕರ್ತ ಲಕ್ಷ್ಮಣ ಸೂರ್ಯವಂಶಿ, ಕುಮಾರ ಪಾಟೀಲ, ಬಸವರಾಜ ತಾರದಾಳ,ಪ್ರಭಾಕರ ಗೊಂಧಳಿ,ಮುರಗೇಶ ಗಸ್ತಿ,,ರಾಜು ಇಂಗಳಗಾಂವಿ,ಪ್ರತಾಪ ಕಾಂಬಳೆ,ಸುಕುಮಾರ ಮಾದರ, ಮನೋಜ ಪಾಟನಕರ, ರಮೇಶ ಕೊಳಿ, ಅಮರ ಕಾಂಬಳೆ, ಮಾನೆ ಅವರನ್ನು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಸತ್ಕರಿಸಿದರು.
ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕಿ ನಾಗರತ್ನ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಧರ್ಮಸ್ಥಳ ಸಂಸ್ಥೆಯು ಮಹಿಳೆಯರ ಸ್ವಾವಲಂಬಿ ಜೀವನಕ್ಕಾಗಿ ಹಲವಾರು ಯೋಜನೆಗಳ ಮೂಲಕ ಸಾಲ ರೂಪದಲ್ಲಿ ಆರ್ಥಿಕ ನೆರವು ನೀಡಲಾಗುತ್ತಿದೆ ಎಂದರು.
ವಿದ್ಯಾಸಾಗರ ಶಾಲೆಯ ಮುಖ್ಯೋಪಾಧ್ಯಾಯ ಪದ್ಮಾಕರ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಕೇವಲ ಧಾರ್ಮಿಕ ಕೇಂದ್ರವಾಗಿರದೇ ಸಮಾಜ ಸುಧಾರಣೆ, ಗ್ರಾಮೀಣಾಭಿವೃದ್ಧಿಗೆ ಆದ್ಯತೆ ನೀಡಿದೆ. ಮಹಾತ್ಮ ಗಾಂಧಿ ಅವರ ಗ್ರಾಮ ಸ್ವರಾಜ್ಯದ ಕನಸು ಹೆಗ್ಗಡೆ ಅವರಿಂದ ನನಸಾಗುತ್ತಿದೆ. ಸರ್ಕಾರ ಮಾಡಲು ಸಾಧ್ಯವಾಗದ ಕೆಲಸವನ್ನು ಗ್ರಾಮೀಣಾಭಿವೃದ್ಧಿ ಸಂಸ್ಥೆ ಮಾಡುತ್ತಿದೆ ಎಂದರು.
ತಾಲೂಕಾ ಯೋಜನಾಧಿಕಾರಿ ಸಂಜು ಮರಾಠಿ, ಚಿದಾನಂದ ಮಾಳಿ, ಎಸ್ ಎಸ್ ಜಮಖಂಡಿ, ನಾಥಗೌಡಾ ಪಾಟೀಲ ಸಪ್ನಿಲ್, ಕಾಗವಾಡ ವಲಯದ ಮೇಲ್ವಿಚಾರಕರಾದ ದೀಪಾ ಯಲ್ಲಾಪೂರ, ಕಾಗವಾಡ ವಲಯದ ಸೇವಾ ಪ್ರತಿನಿಧಿಗಳಾದ ಸುರೇಖಾ, ಶೈಲಜಾ, ಸಲ್ಮಾಂ, ಸಂಧ್ಯಾ, ಅಶ್ವಿನಿ, ಸುಧಾ ಇತರರು ಇದ್ದರು.