“ಲಕ್ಷ್ಮೀ ಬಾಂಬ್” ಶೀರ್ಷಿಕೆಗೆ ಹಿಂದೂ ಸೇನಾ ವಿರೋಧ, ಬದಲಾವಣೆಗೆ ಆಗ್ರಹ
ಮುಂಬೈ, ಅ 21: ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಬಹುನಿರೀಕ್ಷೆಯ “ಲಕ್ಷ್ಮೀ ಬಾಂಬ್” ಸಿನಿಮಾ ವಿವಾದಲ್ಲಿ ಸಿಲುಕಿದೆ. ಶೀರ್ಷಿಕೆ ಬದಲಿಸುವಂತೆ ಆಗ್ರಹಿಸಿರುವ ಹಿಂದೂ ಸೇನಾ ಸಂಘಟನೆ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ದೂರು ಸಲ್ಲಿಸಿದ್ದಾರೆ. ಸಿನಿಮಾದ ಪ್ರಚಾರಕರು, ಪಾತ್ರವರ್ಗ ಮತ್ತು ತಂಡದ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಪತ್ರ ಬರೆದಿದ್ದಾರೆ ಸಿನಿಮಾಗೆ ಟೈಟಲ್ ಹಿಂದೂ ದೇವತೆ ಲಕ್ಷ್ಮೀ ಹೆಸರನ್ನು ಇಟ್ಟು ಅಪಹಾಸ್ಯ ಮಾಡಲಾಗುತ್ತಿದೆ ಮತ್ತು ಹಿಂದೂ ಸಮುದಾಯದ ಧಾರ್ಮಿಕ ಭಾವನೆಗಳನ್ನು ನೋಯಿಸಲಾಗಿದೆ' ಎಂದು ಹಿಂದೂ ಸೇನಾ ಅಭಿಪ್ರಾಯ ಪಟ್ಟಿದೆ. ಜೊತೆಗೆ ಚಿತ್ರದ ಟೈಟಲ್ ಅನ್ನು ಬದಲಾಯಿಸಬೇಕೆಂದು ಒತ್ತಾಯಿಸಿದೆ.
ಚಲನಚಿತ್ರದ ಹೆಸರು ಅತ್ಯಂತ ಅವಹೇಳನಕಾರಿಯಾಗಿದೆ. ಹಿಂದೂ ದೇವತೆ ಲಕ್ಷ್ಮೀ ಅದೃಷ್ಟ ಮತ್ತು ಸಂಪತ್ತಿನ ದೇವತೆ. ಆದರೆ ಚಿತ್ರದಲ್ಲಿ ಲಕ್ಷ್ಮೀ ಜೊತೆಗೆ ಬಾಂಬ್ ಎಂಬ ಪದವನ್ನು ಬಳಸಲಾಗಿದೆ. ಇದು ಹಿಂದೂ ಸಮುದಾಯಕ್ಕೆ ಸ್ವೀಕರಾರ್ಹವಲ್ಲ' ಎಂದು ಬರೆದಿದ್ದಾರೆ.
ಹಿಂದೂ ಸೇನಾ ಮಾತ್ರವಲ್ಲ, ಟ್ರೈಲರ್ ರಿಲೀಸ್ ಆದಾಗಿನಿಂದಲೂ ಸಿನಿಮಾದ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರದ ವಿರುದ್ಧ ಲವ್ ಜಿಹಾದ್ ಆರೋಪ ಕೇಳಿಬಂದ ಬಳಿಕ ಶೀರ್ಷಿಕೆ ಬದಲಾಯಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. ಈ ಟ್ರೈಲರ್ ಲವ್ ಜಿಹಾದ್ ಗೆ ಉತ್ತೇಜನ ನೀಡುತ್ತಿದೆ ಎಂದು ನೆಟ್ಟಿಗರು ಅಕ್ಷಯ್ ಕುಮಾರ್ ವಿರುದ್ಧ ಕಿಡಿಕಾರುತ್ತಿದ್ದಾರೆ. ಅಲ್ಲದೆ ShameonuAkshayKumar ಎಂದು ಹ್ಯಾಷ್ ಟ್ಯಾಗ್ ಹಾಕಿ ಟ್ವಿಟ್ಟರ್ ನಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ. ಪ್ರೇಕ್ಷಕರನ್ನು ಆಕರ್ಷಿಸಲು ಹಾಗೂ ಚಿತ್ರದೊಂದಿಗೆ ಹೆಚ್ಚು ಹೊಂದಿಕೆಯಾಗುವ ಕಾರಣಕ್ಕೆ ತಮಿಳು ಚಿತ್ರ “ಕಾಂಚನಾ”ದ ಹಿಂದಿ ರೀಮೇಕ್ಗೆ “ಲಕ್ಷ್ಮೀ ಬಾಂಬ್” ಎಂದು ಹೆಸರಿಸಲು ನಿರ್ಧರಿಸಲಾಯಿತು ಎಂದು ನಿರ್ದೇಶಕ ರಾಘವ ಲಾರೆನ್ಸ್ ಹೇಳಿದ್ದಾರೆ. ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರು ಮಂಗಳಮುಖಿಯಾಗಿ ಕಾಣಿಸಿಕೊಂಡಿದ್ದಾರೆ. ನಟ ಕಿಯಾರಾ ಅಡ್ವಾಣಿ ಪ್ರಮುಖ ಪಾತ್ರದಲ್ಲಿದ್ದಾರೆ.