ಕಾಗವಾಡ

ಕುಂಬಾರ ಗುಂಡಯ್ಯನವರು ಮಹಾನ್ ಶಿವಶರಣ: ಬಸವೇಶ್ವರ ಸ್ವಾಮಿಗಳು

ಕುಂಬಾರ ಗುಂಡಯ್ಯನವರು ಮಹಾನ್ ಶಿವಶರಣ: ಬಸವೇಶ್ವರ ಸ್ವಾಮಿಗಳು

ಶೇಡಬಾಳ 13: ಕುಂಬಾರ ಗುಂಡಯ್ಯನವರು ಕಾಯಕ ಮಾಡುತ್ತಲೇ ಪರಮಾರ್ಥ ಸಾಧನೆ ಮಾಡಿದ ಮಹಾನ್ ಶಿವಶರಣರಾಗಿದ್ದರು. ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಬದುಕಿನಲ್ಲಿ ಅಳವಡಿಸಿಕೊಂಡಾಗ ಜೀವನ ಪಾವನವಾಗುವುದೆಂದು ಐನಾಪೂರದ ಬಸವೇಶ್ವರ ಮಹಾಸ್ವಾಮಿಗಳು ಹೇಳಿದರು. 

ಅವರು ಉಗಾರ ಖುರ್ದ ಪಟ್ಟಣದ ಮಹಾದೇವ ಮಂದಿರದಲ್ಲಿ ಸೋಮವಾರ ದಿ. 12 ರಂದು ಕಾಗವಾಡ ತಾಲೂಕಿನ ಕುಂಬಾರ ಸಮಾಜದ ವತಿಯಿಂದ ಆಯೋಜಿಸಲಾಗಿದ್ದ ಕಾಯಕಯೋಗಿ ಶಿವಶರಣ ಕುಂಬಾರ ಗುಂಡಯ್ಯನವರ 9ನೇ ಸ್ಮರಣೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು.  

ಕುಂಬಾರ ಗುಂಡಯ್ಯನವರು ಕಾಯಕ ಜೀವನ ಮಾಡುತ್ತಲೆ ಶಿವನನ್ನು ಒಲಿಸಿಕೊಂಡ ಮಹಾನ್ ಶರಣರು. ಅವರು ಸಾರಿ ಹೋದ ವಚನಗಳು ಬದುಕಿಗೆ ಆಧಾರವಾಗಿವೆ ಎಂದು ಹೇಳಿದರು.  

ತೆಲಸಂಗದ ಕುಂಬಾರ ಗುರುಪೀಠದ ಬಸವ ಕುಂಬಾರ ಗುಂಡಯ್ಯ ಮಹಾಸ್ವಾಮಿಗಳು ಮಾತನಾಡಿ 900 ವರ್ಷಗಳ ಹಿಂದೆ ಶಿವಶರಣ ಗುಂಡಯ್ಯನವರ ಕಾಯಕ ನಿಷ್ಠೆ ಪ್ರತಿಯೊಬ್ಬರು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.  

ಉಗಾರ ಖುರ್ದದ ಗುರುದೇವಾಶ್ರಮದ ಬಸವಲಿಂಗ ಮಹಾಸ್ವಾಮಿಗಳು ಮಾತನಾಡಿ ಕುಂಬಾರ ಗುಂಡಯ್ಯನವರ 9ನೇ ಸ್ಮರಣೋತ್ಸವದಲ್ಲಿ ಮೂಲ ಕಸಬು ಕಂಬಾರಿಕೆಯನ್ನು ಕಾಯ್ದುಗೊಂಡು ಬರುತ್ತಿರುವ ಹಿರಿಯರನ್ನು ಸತ್ಕರಿಸಿ ಸನ್ಮಾನಿಸುತ್ತಿರುವುದು ಹಾಗೂ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು. 

ಕಾರ್ಯಕ್ರಮದ ಅಂಗವಾಗಿ ಮುಂಜಾನೆ 9 ಗಂಟೆಗೆ ಕೃಷ್ಣಾ ನದಿಯ ಪೂಜೆ ಮಾಡಲಾಯಿತು. ಅಲ್ಲಿಂದ ಜಲಕುಂಭ ಮೆರವಣಿಗೆ ಮಾಡಲಾಯಿತು. ನೂರಾರು ಸಂಖ್ಯೆಯಲ್ಲಿ ಸುಮಂಗಲೆಯವರು ತಲೆಯ ಮೇಲೆ ಕುಂಭಗಳನ್ನು ಹೊತ್ತು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ವಾದ್ಯ ವೈಭವ, ಕರಡಿ ಮಜಲುದೊಂದಿಗೆ ಪ್ರಾರಂಭವಾದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಹಾದೇವ ಮಂದಿರಕ್ಕೆ ಬಂದು ಶಿವಲಿಂಗಕ್ಕೆ ಜಲಾಭೀಷೇಕ ಮಾಡಲಾಯಿತು.  

ಇದೇ ವೇಳೆ ವಿದ್ಯಾರ್ಥಿಗಳಿಗೆ ಭಕ್ತ ಕುಂಬಾರ ವಿದ್ಯಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮಾಜದ ಹಿರಿಯ ಜೀವಿಗಳನ್ನು ಸತ್ಕರಿಸಿ ಸನ್ಮಾನಿಸಲಾಯಿತು. ನಂತರ ಮಹಾಪ್ರಸಾದ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.  

ಸಮಾರಂಭದಲ್ಲಿ ಯೋಗೇಶ ಕುಂಬಾರ, ಸುಭಾಷ ಕುಂಬಾರ, ಸದಾಶಿವ ಕುಂಬಾರ, ದತ್ತಾ ಕುಂಬಾರ, ಆನಂದ ಕುಂಬಾರ,ರಾವಸಾಬ ಕುಂಬಾರ, ಆನಂದ ಕುಂಬಾರ, ಸದಾಶಿವ ಕುಂಬಾರ, ಕಿರಣ ಕುಂಬಾರ, ಪ್ರಕಾಶ ಕುಂಬಾರ, ನಿಂಗಪ್ಪ ಕುಂಬಾರ ಸೇರಿದಂತೆ ಕಾಗವಾಡ, ತಾಲೂಕಿನ ಪ್ರತಿ ಗ್ರಾಮಗಳಿಂದ ಸಮಾಜದ ಗಣ್ಯ, ಮಾನ್ಯರು, ಮಹಿಳೆಯರು ಅಪಾರ ಸಂಖ್ಯೆಯಲ್ಲಿ ಇದ್ದರು. ಯೊಗೇಶ  ಕುಂಬಾರ ಸ್ವಾಗತಿಸಿ ವಂದಿಸಿದರು. 

 


ಸುದ್ದಿ ಓದಿ