ರಾಣೆಬೆನ್ನೂರ

ಕುಮಾರಪಟ್ಟಣಂ ಗ್ರಾಮೀಣ ಸಿ.ಪಿ.ಐ. ಕಛೇರಿಯನ್ನು ಮೂಲಸ್ಥಳಕ್ಕೆ ಸ್ಥಳಾಂತರಿಸಲು ಒತ್ತಾಯ

ಕುಮಾರಪಟ್ಟಣಂ ಗ್ರಾಮೀಣ ಸಿ.ಪಿ.ಐ. ಕಛೇರಿಯನ್ನು ಮೂಲಸ್ಥಳಕ್ಕೆ ಸ್ಥಳಾಂತರಿಸಲು ಒತ್ತಾಯ

ರಸ್ತೆ ತಡೆದು ಉಗ್ರ ಹೋರಾಟದ ರೈತ ಪಾಟೀಲ ಎಚ್ಚರಿಕೆ  

ರಾಣೇಬೆನ್ನುರು 14: ಕಳೆದ ಬಾರಿ ರಾಜ್ಯದಲ್ಲಿ ಬಿ.ಜೆ.ಪಿ. ಸರ್ಕಾರ ಅಧಿಕಾರದಲ್ಲಿದ್ದಾಗ ಬಸವರಾಜ ಬೊಮ್ಮಾಯಿ ಗೃಹಮಂತ್ರಿಯಾಗಿದ್ದಾಗ ಆಡಳಿತದ ಹಿತದೃಷ್ಟಿ ಎಂಬ ಸೋಗಿನಲ್ಲಿ ಹೆಚ್ಚುವರಿ ಪೊಲೀಸ್ ಇನ್ಸ್‌ಪೆಕ್ಟರ್‌ಗಳ ಸಿ.ಪಿ.ಐ. ನೇಮಕದ ನೆಪದಲ್ಲಿ ನಮ್ಮ ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಇನ್ಸ್‌ಪೆಕ್ಟರ್ ಕಛೇರಿಯನ್ನು ಗ್ರಾಮೀಣ ಪೊಲೀಸ್ ಠಾಣೆಯ ಪಕ್ಕದಲ್ಲಿದ್ದುದ್ದನ್ನು (ಹಳೇ ತಹಶೀಲದ್ದಾರ್ ಕಛೇರಿ ಕಟ್ಟಡ) ಕುಮಾರಪಟ್ಟಣಂ ವೃತ್ತವನ್ನಾಗಿ ಬದಲಾಯಿಸಿ ಕುಮಾರಪಟ್ಟಣಂಗೆ ಸ್ಥಳಾಂತರ ಮಾಡಿದ್ದು ಸಾರ್ವಜನಿಕರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಜಾಸ್ತಿಯಾಗಿದೆ, ಮೂಲ ರಾಣೇಬೆನ್ನೂರಿನ ಕೇಂದ್ರಸ್ಥಾನದಲ್ಲಿದ್ದ ಗ್ರಾಮೀಣ ವೃತ್ತ ಕಛೇರಿಗೆ ತಮ್ಮ ಕೆಲಸ ಕಾರ್ಯಗಳಿಗೆ ಬರುತ್ತಿದ್ದ ಸಾರ್ವಜನಿಕರು ತಾಲೂಕಾ ಕೇಂದ್ರ ಸ್ಥಾನಕ್ಕೆ ಬಂದು ಅಲ್ಲಿಯೆ ಮಿನಿ ವಿಧಾನಸೌಧದಲ್ಲಿರುವ ಎಲ್ಲಾ ಇಲಾಖೆಗಳ ಕೆಲಸ ಕಾರ್ಯ ಮುಗಿಸಿಕೊಂಡು ಸಿ.ಪಿ.ಐ. ಕಛೇರಿಯ ಕೆಲಸವಿದ್ದರೆ ಅಲ್ಲಿಯೂ ಸರಳವಾಗಿ ಭೇಟಿ ನೀಡಿ ತಮ್ಮ ಕೆಲಸಕಾರ್ಯ ಮುಗಿಸಿಕೊಳ್ಳುತ್ತಿದ್ದರು. ಸಾರ್ವಜನಿಕರಿಗೆ ತಾಲೂಕಾ ಕೇಂದ್ರಸ್ಥಾನದಲ್ಲಿ ಈ ಸಿ.ಪಿ.ಐ. ಗ್ರಾಮೀಣ ಕಛೇರಿ ಇದ್ದದ್ದು ಸಾಕಷ್ಟು ಅನುಕೂಲವಾಗುತ್ತಿತ್ತು. ಆದರೆ ಬಿ.ಜೆ.ಪಿ. ಸರ್ಕಾರ ಈ ಕಛೇರಿಯನ್ನು ರಾಣೇಬೆನ್ನೂರು ತಾಲೂಕಿನ ಕಟ್ಟಕಡೆಯ ಕುಮಾರಪಟ್ಟಣಂ ಅಂಚಿನಲ್ಲಿ ಮೊದಲಿಗಿದ್ದ ಕುಮಾರಪಟ್ಟಣಂ ಪೊಲೀಸ್ ಠಾಣೆಯ ಮಹಡಿಯ ಮೇಲೆ ಸ್ಥಳಾಂತರ ಮಾಡಿರುವುದು ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗಿದೆ.  

ದಿನನಿತ್ಯ ಸಿ.ಪಿ.ಐ. ಗ್ರಾಮೀಣ ಠಾಣೆಗೆ ಕೆಲಸ ಕಾರ್ಯಗಳಿಗೆ ಬರುವವರಿಗೆ ಸಾಕಷ್ಟು ಹಿಂಸೆಯಾಗಿದೆ ಇದರಿಂದ ಸಾರ್ವಜನಿಕರಿಗೆ ಆರ್ಥಿಕ ಹೊರೆಯ ಜೊತೆಗೆ ಇಡೀ ಒಂದು ದಿವಸ ಸಮಯ ವ್ಯರ್ಥವಾಗುತ್ತದೆ. ಇದು ಸರ್ಕಾರದ ಅವೈಜ್ಞಾನಿಕ ನೀತಿಯಾಗಿದೆ. ಕೂಡಲೇ ಈ ಸಿ.ಪಿ.ಐ. ಗ್ರಾಮೀಣ ಠಾಣೆಯನ್ನು ಕುಮಾರಪಟ್ಟಣಂನಿಂದ ರಾಣೇಬೆನ್ನೂರಿನ ಮೂಲಸ್ಥಳಕ್ಕೆ ಹಿಂದಿರುಗಿಸಬೇಕು, ಇಲ್ಲವೆ ತಾಲೂಕಿನ ಮಧ್ಯಭಾಗದಲ್ಲಿರುವ ‘ಹಲಗೇರಿ’ ಠಾಣೆಯ ಮಹಡಿಗೆ ಸ್ಥಳಾಂತರಿಸಬೇಕು. ಇಲ್ಲದಿದ್ದರೆ ರಸ್ತೆಗಿಳಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ರೈತ ಮುಖಂಡ, ಪ್ರಗತಿಪರ ಚಿಂತಕ ರವೀಂದ್ರಗೌಡ ಎಫ್‌. ಪಾಟೀಲ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.  

ಅವರು ಇತ್ತೀಚೆಗೆ ಕುಮಾರಪಟ್ಟಣಂ ಠಾಣೆಯ ಮಹಡಿಯ ಮೇಲೆ ಇರುವ ಗ್ರಾಮೀಣ ಸಿ.ಪಿ.ಐ. ಕಛೇರಿಯ ಹತ್ತಿರ ಸಾರ್ವಜನಿಕರು ಮತ್ತು ವಿವಿಧ ಸಂಘ ಸಂಸ್ಥೆಗಳ ಮುಖಂಡರೊಂದಿಗೆ ತೆರಳಿ ಈ ಬಗ್ಗೆ ಸರ್ಕಾರ ಮತ್ತು ಗೃಹಮಂತ್ರಿಗಳಿಗೆ ಇ-ಮೇಲ್ ಸಂದೇಶ ಕಳುಹಿಸಿ ಎಚ್ಚರಿಸಿ ಮಾತನಾಡಿದ ಅವರು ರಾಣೇಬೆನ್ನೂರು ತಾಲೂಕು ಬಹುದೊಡ್ಡ ತಾಲೂಕಾಗಿದ್ದು ಉತ್ತರ ಕರ್ನಾಟಕದ ಹೆಬ್ಬಾಗಿಲು ಆದ ಕುಮಾರಪಟ್ಟಣಂನಿಂದ ಗುಡ್ಡದಹೊಸಳ್ಳಿ ಮತ್ತು ಮಾದವರಾಯಪುರದಿಂದ ಕೂಸಗಟ್ಟಿಗೆ ಹೀಗೆ ಒಂದು ಅಂಚಿನಿಂದ ಇನ್ನೊಂದು ಅಂಚಿಗೆ 75 ಕಿ.ಮೀ. ದೂರ ಹೊಂದಿದೆ, ಈಗಿರುವ ಕುಮಾರಪಟ್ಟಣಂ ಗ್ರಾಮೀಣ ಸಿ.ಪಿ.ಐ. ಕಛೇರಿಗೆ ಗುಡ್ಡದ ಹೊಸಳ್ಳಿ ಭಾಗಗಳಿಂದ ಬರಬೇಕಾದರೆ 75 ಕಿ.ಮೀ. ಮತ್ತು ಮಾದವರಾಯಪುರ ಮತ್ತು ಕೂಸಗಟ್ಟಿಹಿಂದ ಕುಮಾರಪಟ್ಟಣಂಗೆ ಬರಬೇಕಾದರೆ 75 ಕಿ.ಮೀ. ದೂರ ಕ್ರಮಿಸಬೇಕಾಗುತ್ತದೆ. ಅಂದರೆ ಎರಡೂ ಭಾಗದಿಂದ 200 ರೂ. ಬಸ್‌ಚಾರ್ಜ, ಸ್ವಂತ ವಾಹನದಲ್ಲಿ ಬರುವವರಿಗೆ 4 ಲೀ. ಪೆಟ್ರೋಲ್ ಹಾಗೂ ಇಡೀ ಒಂದು ದಿವಸ ಸಮಯ ಇದು ಯಾವ ಸಾರ್ವಜನಿಕರ ಆಡಳಿತ ಹಿತದೃಷ್ಟಿ ? ಎಂದು ಪ್ರಶ್ನೆ ಮಾಡಿರುವ ಅವರು ಈ ಕೂಡಲೇ ಈ ಗ್ರಾಮೀಣ ಸಿ.ಪಿ.ಐ. ಕಛೇರಿಯನ್ನು ರಾಣೇಬೆನ್ನೂರಿನ ಮೂಲಸ್ಥಾನಕ್ಕೆ ಹಿಂದಿರುಗಿಸಬೇಕು ಇಲ್ಲವೆ ಮಧ್ಯಭಾಗದ ಹಲಗೇರಿ ಪೊಲೀಸ್ ಠಾಣೆಯ ಮಹಡಿಗೆ ಸ್ಥಳಾಂತರಿಸಬೇಕು ಇಲ್ಲದಿದ್ದರೆ ರೊಚ್ಚಿಗೆದ್ದ ದೂರದ ಗ್ರಾಮಗಳ ನಾಗರಿಕರಿಂದ ರಸ್ತೆ ತಡೆದು ಪ್ರತಿಭಟಿಸಲಾಗುವುದೆಂದು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.  

ಈರಣ್ಣ ಹಲಗೇರಿ, ಚಂದ್ರಣ್ಣ ಬೇಡರ, ಅಪ್ಪಣ್ಣ ಕೆ, ವಿರೇಶ ಅಂಗಡಿ, ರಾಮನಗೌಡ ಪಾಟೀಲ, ನಾಗಪ್ಪ ಸಣ್ಣಮನಿ, ರವಿ ಮಳ್ಳಳ್ಳಿ ಇಕಬಾಲ್‌ಸಾಬ್ ಸೇತಸನದಿ, ತಿಪ್ಪೇಶ ನಾಯಕ, ಬಸವನಗೌಡ ಹಿಂಡೇರ, ಪರ್ವತಗೌಡ ಕೂಸಗೂರು, ಶಿವಾನಂದ ಲಿಂಗದಹಳ್ಳಿ, ಬಸವರಾಜ ಓಲೇಕಾರ, ರಂಗಪ್ಪ ಪೂಜಾರ ಮುಂತಾದವರು ಭಾಗವಹಿಸಿದ್ದರು. 


ಸುದ್ದಿ ಓದಿ