ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ : ಸ್ವಾಸ್ಥ ಸಂಕಲ್ಪ ಕಾರ್ಯಕ್ರಮ
ರಾಣೇಬೆನ್ನೂರ 11: ಸಮಾಜದಲ್ಲಿ ಸಮಾನತೆ ಸಾಧಿಸಬೇಕಾದರೆ, ಮಾಡುವ ಕಾಯಕದಲ್ಲಿ ನಂಬಿಕೆ ಇಟ್ಟು, ಯಾವುದೇ ದುಶ್ಚಟಗಳಿಗೆ ದಾಸರಾಗದೆ, ಕುಟುಂಬದೊಂದಿಗೆ ಸೌಹಾರ್ದಯುತ ಬದುಕನ್ನು ಸಾಗಿಸಿದಾಗ ಮಾತ್ರ ಭಾವೈಕ್ಯತೆಯಿಂದ ಬದುಕಿ ಬಾಳಲು ಸಾಧ್ಯವಾಗುವುದು ಎಂದು ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕಾ ಯೋಜನಾಧಿಕಾರಿ ಮಂಜುನಾಥಗೌಡ ಎಂ. ಕರೆ ನೀಡಿದರು.
ಮಾರುತಿ ನಗರ ವಲಯದ ಗೌಳೇರ ಓಣಿ ಕಾರ್ಯಕ್ಷೇತ್ರದಲ್ಲಿ, ಹೊಸಮನಿ ಸಿದ್ದಪ್ಪ ಪದವಿ ಪೂರ್ವ ಕಾಲೇಜು ಭವನದಲ್ಲಿ ಆಯೋಜಿಸಲಾಗಿದ್ದ, ""ಸ್ವಾಸ್ತ ಸಂಕಲ್ಪ "" ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದಿನ ದುಬಾರಿ ಬೆಲೆಗಳ ಕಾಲಮಾನದಲ್ಲಿ ಕುಟುಂಬದ ನಿರ್ವಹಣೆ ಮಾಡುವುದೇ ಬಹಳಷ್ಟು ಕಷ್ಟದ ಕೆಲಸ. ಕಾಯಕ ಮಾಡಿ ಬಂದ ಹಣದಲ್ಲಿ, ಅರ್ಧ ಹಣವನ್ನು ಮಧ್ಯಪಾನ ಸೇವನೆಗೆ ಮೀಸಲಿಟ್ಟರೆ ಕುಟುಂಬದ ಆರ್ಥಿಕ ಅಭಿವೃದ್ಧಿ ಹೇಗೆ ಸಾಧ್ಯ?. ಎಂದು ಪ್ರಶ್ನಿಸಿದರು. ಮಹಿಳೆಯ ಕುಟುಂಬದ ಕಣ್ಣು ಕುಟುಂಬ ನಿರ್ವಹಣೆ ಹೊಣೆ ಹೊತ್ತು ಹಗಲು ರಾತ್ರಿ ಎನ್ನದೆ, ತಾನು ತನ್ನ ಮಕ್ಕಳು, ಗಂಡ ಮನೆ, ಇದರಲ್ಲಿಯೇ ಜೀವನ ಸಾಗಿಸುತ್ತಾಳೆ. ಮನೆಯ ಯಜಮಾನ, ಮಧ್ಯ ಸೇವನೆ ಚಟದಿಂದ ಹೊರ ಬಂದು ಸ್ವಲ್ಪ ಆಲೋಚಿಸಿದರೆ, ಕುಟುಂಬದ ವಾಸ್ತವಿಕ ಬದುಕಿನ ಅರ್ಥವನ್ನು ತಿಳಿದುಕೊಳ್ಳಲು ಸಾಧ್ಯವಾಗುವುದು ಎಂದರು.
ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ, ಪಾಸ್ತ ಬದುಕಿಗಾಗಿ ಮಧ್ಯವರ್ಜನ ಶಿಬಿರಗಳನ್ನು ಆಯೋಜಿಸುವುದರ ಮೂಲಕ, ತಿಳುವಳಿಕೆ ನೀಡುವ ಮಹತ್ವವಾದ ಕಾರ್ಯವನ್ನು ಮಾಡಲಾಗುತ್ತಿದೆ ದಕ್ಷಿಣ ಕನ್ನಡದಲ್ಲಿ, ಯೋಜನೆ ಸಂಪೂರ್ಣ ಯಶಸ್ವಿಯಾಗಿ, ಮಧ್ಯವನ್ನು ತ್ಯಜಿಸಿ, ಆರೋಗ್ಯವಂತ ಜೀವನವನ್ನು ಸಾಗಿಸುವುದರ ಮೂಲಕ ಮತ್ತೊಬ್ಬರಿಗೆ ಪ್ರೇರಣೆಯಾಗುವ ಕಾರ್ಯವು ಯಶಸ್ವಿಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ಮಾರ್ತಾಂಡಪ್ಪ ನೇಕಾರ, ಡಾ: ಜಗದೀಶ್ ಎಸ್. ಪಾಟೀಲ್, ಅವರುಗಳು, ದುಶ್ಚಟಗಳಿಂದ ಸಮಾಜದಲ್ಲಿ ಆಗುವ ಪರಿಣಾಮಗಳು ಕುರಿತಂತೆ ಸಾದ್ಯಂತವಾಗಿ ಮಾತನಾಡಿದರು