ಕನ್ನಡ ಸಾಹಿತ್ಯ ಭವನ ನಿರ್ಮಾಣಕ್ಕೆ ನಿವೇಶನ ನೀಡಲು ಕಸಾಪ ಮನವಿ
ಯರಗಟ್ಟಿ 24: ಕನ್ನಡ ನಾಡು, ನುಡಿ, ಕಲೆ, ಸಾಹಿತ್ಯ ಹಾಗೂ ಪರಂಪರೆಯ ಮುಂದುವರಿಕೆಗಾಗಿ ಕನ್ನಡ ಸಾಹಿತ್ಯ ಪರಿಷತ್ತು ಕಳೆದ 108 ವರ್ಷಗಳಿಂದ ಅವಿರತವಾಗಿ ಶ್ರಮಿಸುತ್ತಿರುವುದು ತಮಗೆ ಗೊತ್ತಿರುವ ಸಂಗತಿಯಾಗಿದೆ. ರಾಜ್ಯ ಮಟ್ಟದಲ್ಲಿ ಕೇಂದ್ರ ಪರಿಷತ್ತು ಮಾತ್ರವಲ್ಲದೆ ಜಿಲ್ಲೆ ಹಾಗೂ ತಾಲೂಕು ಘಟಕಗಳು ಕೂಡ ಕನ್ನಡ ಕಟ್ಟುವ ಕೆಲಸದಲ್ಲಿ ನಿರತವಾಗಿದೆ. ಅದೇ ರೀತಿ ಯರಗಟ್ಟಿ ನೂತನ ತಾಲೂಕು ರಚನೆಯಾದ ತಕ್ಷಣವೇ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕ ರಚನೆಯಾಗಿದ್ದು, ಕಳೆದ ಮೂರು ವರ್ಷಗಳಿಂದ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಬೆಳಗಾವಿ’ ಜಿಲ್ಲೆಯ ತಾಲೂಕು ಘಟಕಗಳಲ್ಲಿಯೇ ಅತ್ಯಂತ ಕ್ರಿಯಾಶೀಲ ತಾಲೂಕು ಘಟಕವೆಂಬ ಖ್ಯಾತಿಯನ್ನು ಪಡೆದಿದೆ. ಬೆಳಗಾವಿ ಜಿಲ್ಲೆಯು ಪ್ರಾಚೀನ ಕಾಲದಿಂದಲೂ ಸಾಹಿತ್ಯ, ಸಂಗೀತ ಹಾಗೂ ಬಯಲಾಟ, ಕೃಷ್ಣ ಪಾರಿಜಾತಗಳಂತಹ ವಿವಿಧ ಕಲೆಗಳ ಆಗರವಾಗಿದೆ. ಆಧುನಿಕತೆಯ ಭರಾಟೆಯಲ್ಲಿ ಈ ಕಲೆಗಳು ಅಳಿವಿನಂಚಿಗೆ ಸರಿಯುತ್ತಿವೆ. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜವಾಬ್ದಾರಿ ಹೆಚ್ಚಾಗಿದ್ದು, ಜನಪದ ಸಾಹಿತ್ಯ, ಕಲೆಯ ಉಳಿವಿಗಾಗಿ ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕಾದ ಅನಿವಾರ್ಯತೆಯಿದೆ. ಆದ್ದರಿಂದ ತಾಲೂಕು ಘಟಕವು ಸ್ವಂತ ಕಚೇರಿ, ಸಭಾಂಗಣ, ವಾಚನಾಲಯ ಸೇರಿದಂತೆ ತಾಲೂಕು, ಜಿಲ್ಲಾ ಹಾಗೂ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲು ಅನುಕೂಲವಾಗುವಂತೆ ಯರಗಟ್ಟಿ ತಾಲೂಕಿನ ಯರಗಣವಿ ವ್ಯಾಪ್ತಿಯ ಸರ್ವೆ ನಂ. 303/ಅ ದಲ್ಲಿ ಇರುವ ಸರಕಾರಿ ಜಮೀನಿನಲ್ಲಿ ಎರಡು ಎಕರೆ ಜಮೀನು ನೀಡಬೇಕೆಂದು ಕನ್ನಡ ಸಾಹಿತ್ಯ ಪರಿಷತ್ ಯರಗಟ್ಟಿ ತಾಲೂಕಾ ಘಟಕದಿಂದ ತಹಶೀಲ್ದಾರ ಮುಖಾಂತರ ಕಂದಾಯ ಸಚಿವರಿಗೆ ಮನವಿ ಸಲ್ಲಿಸಿದರು.
ಪ.ಪಂ.ಸದಸ್ಯರಾದ ಅಜೀತಕುಮಾರ ದೇಸಾಯಿ, ಕಸಾಪ ಅಧ್ಯಕ್ಷರಾದ ತಮ್ಮಣ್ಣಾ ಕಾಮಣ್ಣವರ, ನಿವೃತ ಶಿಕ್ಷಕರಾದ ಎಸ್. ಎಸ್. ಕುರುಬಗಟ್ಟಿಮಠ, ಭಾಸ್ಕರ ಹಿರೇಮೇತ್ರಿ, ಮಲಿಕ ಬಾಗವಾನ, ಡಾ. ರಾಜಶೇಖರ ಬಿರಾದಾರ, ದೇವೆಂದ್ರ ಕಮ್ಮಾರ, ಕೆ.ಎಫ್. ನದಾಫ, ಶಿವಾನಂದ ಬಳಿಗಾರ, ಈರಣ್ಣಾ ಹುಲ್ಲೂರ ಉಪಸ್ಥಿತರಿದ್ದರು.