ಕನ್ನಡ ಅಸ್ಮಿತೆಗೆ ಕಸಾಪ ಕೊಡುಗೆ ಅನನ್ಯ: ದಯಾನಂದ ಸ್ವಾಮಿ
ಹೂವಿನ ಹಡಗಲಿ: 6. ಕನ್ನಡ ಅಸ್ಮಿತೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಕೊಡುಗೆ ಅನನ್ಯವಾಗಿದೆ. ಕಸಾಪ ಕನ್ನಡ ನೆಲ,ಜಲ,ಭಾಷೆಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುವ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿದೆ ಎಂದು ವಿಶ್ರಾಂತ ಉಪನ್ಯಾಸಕ ಎಂ ಪಿ ಎಂ ದಯಾನಂದ ಸ್ವಾಮಿ ಅಭಿಪ್ರಾಯ ಪಟ್ಟರು
ಅವರು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಜೆಎಸ್ಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 109ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರ ದೃಷ್ಟಿ , ಸರ್ ಎಂ ವಿಶ್ವೇಶ್ವರಯ್ಯ ,ಮಿರ್ಜು ಇಸ್ಮಾಯಿಲ್ ರವರ ಪರಿಶ್ರಮದ ಫಲವಾಗಿ ಕನ್ನಡ ಸಾಹಿತ್ಯ ಪರಿಷತ್ತು 1915 ಮೇ 5 ರಂದು ಸ್ಥಾಪನೆಯಾಗಿದೆ. ವಿದ್ಯಾರ್ಥಿಗಳು, ಯುವಕರು ಸಾಹಿತ್ಯ ಅಭಿರುಚಿಯನ್ನು ಬೆಳೆಸಿಕೊಂಡು ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸುಸಂಸ್ಕೃತ ಸಮಾಜ ನಿರ್ಮಾಣ ಮಾಡಬೇಕಿದೆ ಎಂದರು. ಕನ್ನಡ ಅಸ್ಮಿತೆ: ಕನ್ನಡ ಸಾಹಿತ್ಯ ಪರಿಷತ್ತು ವಿಷಯ ಕುರಿತು ಕಸಾಪ ನಿಕಟಪೂರ್ವ ಅಧ್ಯಕ್ಷ ಡಾ.ಎಂ.ಪಿ.ಎಂ ಮಂಜುನಾಥ ವಿಶೇಷ ಉಪನ್ಯಾಸ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಧ್ಯೇಯ,ಉದ್ದೇಶ ತಿಳಿಸಿ, ರಾಜ್ಯ ಘಟಕದಿಂದ ಹೋಬಳಿ ಘಟಕಗಳವರೆಗಿನ ಮಾಹಿತಿ ನೀಡಿ ಎಲ್ಲಾ ಘಟಕಗಳು ಸರ್ಕಾರ, ದಾನಿಗಳ ನೆರವಿನಿಂದ ವರ್ಷಪೂರ್ತಿ ನಿರಂತರವಾಗಿ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಕನ್ನಡ ನಾಡು- ನುಡಿಯ ಬಗ್ಗೆ ಜಾಗೃತಿ ಉಂಟು ಮಾಡುತ್ತಿವೆ ಎಂದರು. ಆಡಳಿತದಲ್ಲಿ ಕನ್ನಡ ಭಾಷೆ ಸಮರ್ಪಕವಾಗಿ ಅನುಷ್ಠಾನವಾಗಬೇಕಾಗಿದೆ ಎಂದರು.
ವಿದ್ಯಾರ್ಥಿ ಕವಿಗೋಷ್ಠಿ: ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಪ್ರಶಿಕ್ಷಣಾರ್ಥಿಗಳಿಗೆ ಕವಿಗೋಷ್ಠಿಯನ್ನು ಆಯೋಜಿಸಲಾಗಿತ್ತು. ಗೋಷ್ಠಿಯನ್ನು ಕವಿ, ಚಿಂತಕ ಟಿ.ಎಂ.ನಾಗಭೂಷಣ ಬುದ್ಧನ ಕವನ ವಾಚಿಸುವುದರ ಮೂಲಕ ಚಾಲನೆ ನೀಡಿದರು. ಗೋಷ್ಠಿಯಲ್ಲಿ ಕೆ.ಸುಮಿತ್ರಾ ದೇವಿ - ನನ್ನವ್ವ, ಎಂ. ಪ್ರವೀಣ್ ಕುಮಾರ್- ಹನಿಗವನಗಳು, ಕೆ. ರೇಖಾ- ಕನ್ನಡ, ಮನೋಜ್ ದೊಡ್ಡಮನಿ-ನನ್ನ ನೆಚ್ಚಿನ ಗೆಳತಿ ,ಜಿ.ದೇವಿರಮ್ಮ - ನಾ ಬರೆಯಲಾರೆ ಕವಿತೆ, ಬಿ. ಶಂಕರ್ -ತಾಯಿ,ಪಟ್ಟೇದ ಅಂಬಿಕಾ- ಬಿದ್ದು ಹೋದ ಬೇವಿನ ಮರ, ಎಸ್.ಎ. ಶಿವರಾಜ್ - ಎಲ್ಲಿ ಮಾಯವಾದವು, ಬಿ. ಅರುಣ -ಹೆಣ್ಣೆಂದರೆ ಹೀಗಿರಬೇಕು,ಎಮ್. ಎಚ್. ಸುಮಾ -ರಾಧಾ ರಮಣ ಕುರಿತ ಕವನಗಳನ್ನು ವಾಚಿಸಿದರು. ಬಹಳಷ್ಟು ವಿದ್ಯಾರ್ಥಿಗಳು ಪ್ರಥಮ ಪ್ರಯತ್ನದಲ್ಲಿ ಉತ್ತಮ ಕವನ ರಚಿಸಿ ಸಾಹಿತ್ಯ ಪ್ರಿಯರ ಗಮನ ಸೆಳೆದರು. ಕವನ ವಾಚಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಕಸಾಪ ವತಿಯಿಂದ ಲೇಖನಿ ಮತ್ತು ವಚನ ಕಿರು ಪುಸ್ತಕಗಳನ್ನು ನೀಡಲಾಯಿತು. ಗೌರವ ಸನ್ಮಾನ: ಕಸಾಪ ಹಿರಿಯ ಸದಸ್ಯರೂ, ಟಿಸಿಎಚ್ ತರಬೇತಿ ಪಡೆದು ಸರ್ಕಾರಿ ನೌಕರಿಗೆ ಸೇರಿದ ಅಖಂಡ ಬಳ್ಳಾರಿ ಜಿಲ್ಲೆಯ ಪ್ರಥಮ ಎಸ್ ಟಿ (ವಾಲ್ಮೀಕಿ) ಮಹಿಳೆ ಎಂಬ ಶ್ರೇಯಸ್ಸಿಗೆ ಭಾಜನರಾದ ವಿಶ್ರಾಂತ ಉಪನ್ಯಾಸಕಿ ಯು. ಶಾಂತಮ್ಮ , ತನ್ನ ಹಾಡುಗಾರಿಕೆಯಿಂದ ರಾಜ್ಯದ ಅನೇಕ ಜಾತ್ರೆ, ಉತ್ಸವಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಜಾನಪದ ಕಲಾವಿದ ಪ್ರಕಾಶ್, ನಿಕಟ ಪೂರ್ವ ಅಧ್ಯಕ್ಷ ಡಾ.ಎಂ ಪಿ ಎಂ ಮಂಜುನಾಥ್ ಹಾಗೂ ಹರಪನಹಳ್ಳಿಯ ಎಸ್ ಯು ಜೆಎಂ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ಹೆಚ್ಚಿನ ವಿದ್ಯಾರ್ಥಿಗಳ ಗೌರವಕ್ಕೆ ಪಾತ್ರರಾದ ವಿಶ್ರಾಂತ ಉಪನ್ಯಾಸಕ ಎಂ.ಪಿ.ಎಂ ದಯಾನಂದಸ್ವಾಮಿ ಇವರನ್ನು ಸನ್ಮಾನಿಸಲಾಯಿತು.
ಕಲಾವಿದ ಪ್ರಕಾಶ್ ಹಾಗೂ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಕನ್ನಡ ಗೀತೆಗಳ ಗಾಯನವು ಮೆಚ್ಚುಗೆ ಪಡೆಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ. ಎಚ್ ಪಿ ರಮೇಶ್, ಡಾ. ಅಶೋಕ ಈಡಿಗರ, ಕಸಾಪ ಗೌರವ ಕಾರ್ಯದರ್ಶಿ ಎ. ಎಂ. ಚನ್ನವೀರಸ್ವಾಮಿ, ಪಿ.ಪ್ರಸನ್ನ ಗೌಡ ಡಾ ಶೈಲಜಾ ಪವಾಡ ಶೆಟ್ಟರ ಸೇರಿದಂತೆ ಅನೇಕ ಪದಾಧಿಕಾರಿಗಳು ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಕಸಾಪ ಅಧ್ಯಕ್ಷ ವೀರೇಂದ್ರ ಪಾಟೀಲ್ ವಹಿಸಿದ್ದರು. ಪ್ರಾರಂಭದಲ್ಲಿ ಎಂ. ಹರಿಪ್ರಸಾದ್ ಪ್ರಾರ್ಥಿಸಿದರು. ನಾಡಗೀತೆಯನ್ನು ಸಾಮೂಹಿಕವಾಗಿ ಪ್ರಸ್ತುತಪಡಿಸಲಾಯಿತು.ಕೆ ಪ್ರತಿಭಾ ಸ್ವಾಗತಿಸಿದರು. ಹಿರೇಹಡಗಲಿ ಹೋಬಳಿ ಘಟಕದ ಅಧ್ಯಕ್ಷ ಜಿ.ಎಸ್. ಸತೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೆಚ್. ಕುಮಾರ್ ನಾಯ್ಕ್ ವಂದಿಸಿದರು. ಬಿ.ಸಿ. ಅನುಷಾ ಕಾರ್ಯಕ್ರಮ ನಿರ್ವಹಿಸಿದರು