ಭಾಷೆಗೆ ಕುತ್ತು ಬಂದರೆ ಬೀದಿಗಿಳಿದು ಹೋರಾಡಿ: ಶಾಸಕ ಗಾಲಿ ಜನಾರ್ಧನರೆಡ್ಡಿ
ಗಂಗಾವತಿ 01: ಕನ್ನಡ ನೆಲ, ಜಲ ಮತ್ತು ಭಾಷೆಗಾಗಿ ಕುತ್ತು ಬಂದ ಸಂದರ್ಭದಲ್ಲಿ ಪ್ರತಿಯೊಬ್ಬ ಕನ್ನಡಿಗ ಬೀದಿಗಿಳಿದು ಹೋರಾಟ ಮಾಡಬೇಕು ಎಂದು ಶಾಸಕ ಗಾಲಿ ಜನಾರ್ಧನರೆಡ್ಡಿ ತಿಳಿಸಿದರು. ಬುಧವಾರ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಧ್ವಜಾರೋಹಣ ಸಂದರ್ಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕನ್ನಡಿಗರು ಶಾಂತಿಪ್ರೀಯರು ಅನ್ಯಭಾಷಿಕರಿಗೆ ನೆಲೆ ಕೊಟ್ಟವರು, ಕನ್ನಡದ ಸಾಹಿತ್ಯ ವಿಶ್ವ ಮೆಚ್ಚಿದೆ ಎಂದು ತಿಳಿಸಿದರು, ಕುವೆಂಪು, ದ.ರಾ.ಬೇಂದ್ರೆ, ಜಿ.ಎಸ್.ಶಿವರುದ್ರ್ಪ, ಪಿ.ಲಂಕೇಶ, ಪೂರ್ಣಚಂದ್ರ ತೇಜಸ್ವಿ, ಬಸವರಾಜ ಕಟ್ಟಿಮನಿ ಇನ್ನಿತರ ಧೀಮಂತ ಸಾಹಿತಿಗಳ ಜನ್ಮ ಭೂಮಿ ನಮ್ಮ ಕರ್ನಾಟಕ ಆಗಿದೆ ಎಂದು ಹೇಳಿದರು.
ಇತೀಚಿನ ದಿನಗಳಲ್ಲಿ ಅನ್ಯ ಭಾಷಿಕರ ಹಾವಳಿ ಹೆಚ್ಚಾಗಿದೆ. ಸ್ಥಳೀಯ ಕಾರ್ಖಾನೆಗಳಲ್ಲಿ ಅನ್ಯ ಭಾಷಿಕರು ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗದಲ್ಲಿ ಇದ್ದಾರೆ. ಕಾರ್ಖಾನೆ ಆಡಳಿತ ಮಂಡಳಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಬೇಕು ಎಂದು ರೆಡ್ಡಿ ತಿಳಿಸಿದರು. ಕನ್ನಡಿಗರ ಸಹನೆಯನ್ನು ಅನ್ಯಭಾಷಿಕರು ದೌರ್ಬಲ್ಯ ಎಂದು ಭಾವಿಸಬಾರದು ಎಂದು ಹೇಳಿದರು.
ತಹಶೀಲ್ದಾರ ಮಂಜುನಾಥ ಭೋಗಾವತಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ್, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಲಕ್ಷ್ಮಿದೇವಿ, ನಗರಸಭೆ ಪೌರಾಯುಕ್ತ ವಿರುಪಾಕ್ಷ ಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಪಾಲ್ಗೊಂಡಿದ್ದರು. ಇದಕ್ಕು ಮುಂಚೆ ಭುವನೇಶ್ವರಿ ವೃತ್ತದಲ್ಲಿ ಶಾಸಕ ಗಾಲಿ ಜನಾರ್ಧನರೆಡ್ಡಿ ಪುಷ್ಪಾರ್ಚನೆ ಮಾಡಿದರು. ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ಕೆ.ಪಂಪಣ್ಣನಾಯಕ, ಕನ್ನಡಪರ ಸಂಘಟನೆ ಮುಖಂಡರಾದ ಪತ್ತಾರ ಮಂಜುನಾಥ, ಚನ್ನಬಸವಜೇಕೀನ್ ಇತರರು ಪಾಲ್ಗೊಂಡಿದ್ದರು.