ಕರ್ನಾಟಕ ಮಹಾರಾಷ್ಟ್ರ ಬಸ್ ಸಂಚಾರ ಸ್ಥಗಿತ: ಪರದಾಡಿದ ಪ್ರಯಾಣಿಕರು
ಕಾಗವಾಡ 16: ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದ ಗಡಿ ವಿವಾದ ಬೆನ್ನಲ್ಲೆ ಕೋವಿಡ್ ತಪಾಸಣೆ ಹಿನ್ನೆಲೆಯಲ್ಲಿ ಕಾಗವಾಡ ಆರ್‍ಟಿಒ ಚೆಕ್‍ಪೋಸ್ಟ್ ಹತ್ತಿರ ಕೋವಿಡ್ ತಪಾಸಣೆ ಕೇಂದ್ರ ಪ್ರಾರಂಭಿಸಿದ್ದಾರೆ. ಇದರಿಂದ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಸಂಚರಿಸುವ 500 ಬಸ್‍ಗಳ ಸಂಚಾರ ಸೇವೆ ಸ್ಥಗಿತಗೊಂಡಿದ್ದರಿಂದ ಊರಿ-ಬಿಸಿಲಿನಲ್ಲಿ ಪ್ರಯಾಣಿಕರು ಮತ್ತು ರೋಗಿಗಳು ತೊಂದರೆ ಅನುಭವಿಸುವಂತಾಯಿತು. ರೋಗಿಗಳು ಬಸ್ ನಿಲ್ದಾಣದಲ್ಲಿ ನೆರಳುತ್ತಾ ಇಡೀ ದಿನ ಕಾಲ ಕಳೆದ ಸನ್ನಿವೇಶ ನಡೆಯಿತು.
ಮಂಗಳವಾರ ಮಧ್ಯಾಹ್ನದಿಂದ ಜಿಲ್ಲಾಧಿಕಾರಿಗಳ ಆದೇಶ ಮೇರೆಗೆ ಚೆಕ್‍ಪೋಸ್ಟ್ ಪ್ರಾರಂಭಿಸಿದ್ದಾರೆ. ಆಕಸ್ಮಿಕವಾಗಿ ಮಹಾರಾಷ್ಟ್ರದ ಮಿರಜ ಹಾಗೂ ಸಾಂಗಲಿ ಪಟ್ಟಣದಲ್ಲಿ ಕರ್ನಾಟಕ ಬಸ್‍ಗ¼ನ್ನು ತಡೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾದ ಬಳಿಕ ಎಲ್ಲ ಬಸ್ ಸಂಚಾರ ಸೇವೆ ಸ್ಥಗಿತಗೊಂಡಿತು. ಇದರಿಂದ ಪ್ರಯಾಣಿಕರನ್ನು ಕಾಗವಾಡ ಬಸ್ ನಿಲ್ದಾಣದಲ್ಲಿ ಬಿಟ್ಟು ಬಸ್‍ಗಳು ಮರಳಿ ಡಿಪೊಗಳಿಗೆ ಹೋಗಲು ಪ್ರಾರಂಭಿಸಿದವು. ಇದರಿಂದ ಪ್ರಯಾಣಿಕರಿಗೆ ಏನೂ ತಿಳಿಯಂದತಾಯಿತು.
ಖಾಸಗಿ ವಾಹನಗಳ ಮೊರೆ ಹೋಗಿ ಕೆಲವರು ಸುಮಾರು 2 ಕಿಮೀ ಅಂತರ ಕಾಲುನಡುಗೆಯಿಂದ ಹೋಗಿ ಮುಂದಿನ ಪ್ರಯಾಣ ಪ್ರಾರಂಭಿಸಿದರು. ಚಿಕ್ಕ ಮಕ್ಕಳು, ವೃದ್ಧರು ಇದರ ಕಹಿ ಅನುಭವ ಕಂಡರು. ಕೆಲ ವೃದ್ಧರನ್ನು ಮತ್ತು ರೋಗಿಗಳನ್ನು ಇದೇ ಬಸ್ ನಿಲ್ದಾಣದಲ್ಲಿ ಇಟ್ಟುಕೊಂಡು ಅವರ ಮನೆಯವರು ಬಸ್‍ಗಳ ದಾರಿ ಕಾಯುತ್ತಿದ್ದರು.
ನೊಂದ ಪ್ರಯಾಣಿಕ ಸುರಪುರದ ಕುಮಾರ ಇವರು ಕೆಎಸ್‍ಆರ್‍ಟಿಸಿ ಇಲಾಖೆ ಮತ್ತು ರಾಜ್ಯದ ಸರಕಾರದ ಮೇಲೆ ಹರಿ ಹಾಯ್ದರು. ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದ ಭಾಷೆ ಬಗ್ಗೆ ವಿವಾದವಿದೆ, ಇದು ಸತ್ಯ. ಆದರೆ, ಯಾವ ರೋಗಿಗೆ ಭಾಷೆ, ಜಾತಿ ಬಂಧನವಿದೆ? ಕರ್ನಾಟಕದಲ್ಲಿ ಉಪಚಾರ ದೊರೆಯದೆಯಿದಿದ್ದರಿಂದ ಮಹಾರಾಷ್ಟ್ರಕ್ಕೆ ಹೋಗುತ್ತಿದ್ದೇವೆ. ಇದರಲ್ಲಿ ನಮ್ಮದೇನು ತಪ್ಪು? ಈಗ ಆಕಸ್ಮಿಕವಾಗಿ ಬಸ್ಸ್‍ಗಳನ್ನು ತಡೆ ಹಿಡಿದು ನಮಗೆ ತೊಂದರೆ ನೀಡುತ್ತಿದ್ದೀರಿ. ರಾಜ್ಯ ಸರಕಾರ ಈ ಬಗ್ಗೆ ನೀವೆ ನಿರ್ಣಯ ಕೈಗೊಳ್ಳಬೇಕಾಗಿತ್ತು. ಈಗ ನಾವು ರೋಗಿಗಳನ್ನು ತೆಗೆದುಕೊಂಡು ಎಲ್ಲಿಗೆ ಹೋಗಬೇಕು? ಇವರ ಜೀವಕ್ಕೆ ಅಪಾಯವಾದರೆ, ಹೊಣೆಗಾರರು ಯಾರೂ? ಎಂದು ಪ್ರಶ್ನಿಸಿ ತಮ್ಮ ಆಕ್ರೋಶ ಹೊರ ಹಾಕಿದರು.
ಕೆಎಸ್‍ಆರ್‍ಟಿಸಿ ಕಾಗವಾಡ ವಿಭಾಗದ ನಿಯಂತ್ರಕ ಚಂದ್ರಶೇಖರ ಬೇನಾಳ ಮಾಹಿತಿ ನೀಡುತ್ತ ಮಧ್ಯಾಹ್ನ ನಮ್ಮ ಕೆಎಸ್‍ಆರ್‍ಟಿಸಿ ಇಲಾಖೆ ಅಧಿಕಾರಿಗಳ ಸೂಚನೆ ಮೇರೆಗೆ ಮಹಾರಾಷ್ಟ್ರಕ್ಕೆ ಸಂಚರಿಸುವ ಎಲ್ಲ ಬಸ್ಸ್‍ಗಳನ್ನು ಸ್ಥಗಿತಗೊಳಿಸಿದ್ದೇವೆ. ಕೆಲವರು ಗಡಿ ವಿವಾದ ಎಂದರು. ಆದರೆ, ಕೆಲ ಅಧಿಕಾರಿಗಳು ಕೋವಿಡ್ ತಪಾಸಣೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರಕ್ಕೆ ಬಸ್ ಸಂಚರಿಸಲು ನಿರ್ಬಂಧ ಹೇರಿದ್ದಾರೆ ಎಂದು ಹೇಳಿದರು. ದಿನನಿತ್ಯ 550 ಬಸ್‍ಗಳು ಸಂಚರಿಸುತ್ತವೆ. ಈ ಎಲ್ಲ ಬಸ್‍ಗಳು ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಎಂದರು.
ಆಕಸ್ಮಿಕವಾಗಿ ಬಸ್ ಸಂಚಾರ ಸ್ಥಗಿತಗೊಳಿಸಿದ್ದರಿಂದ ಎಲ್ಲ ಖಾಸಗಿ ವಾಹನಧಾರಕರು ಪ್ರಯಾಣಿಕರಿಂದ ಮನ ಬಂದಂತೆ ಹಣ ವಸೂಲಿ ಮಾಡುತ್ತಿದ್ದು ಕಂಡುಬಂತು.