ಜಮಖಂಡಿ

ಕನ್ನಡದಲ್ಲಿ ನಾಮಫಲಕಗಳನ್ನು ಅಳವಡಿಸಲು ಕರವೇ ಪ್ರತಿಭಟನೆ

ಕನ್ನಡದಲ್ಲಿ ನಾಮಫಲಕಗಳನ್ನು ಅಳವಡಿಸಲು ಕರವೇ ಪ್ರತಿಭಟನೆ

ಜಮಖಂಡಿ 17: ಕನ್ನಡದಲ್ಲಿ ನಾಮಫಲಕಗಳನ್ನು ಅಂಗಡಿ, ಮುಂಗಟ್ಟುಗಳಿಗೆ ಕಡ್ಡಾಯವಾಗಿ ಅಳವಡಿಸಬೇಕು ಇಲ್ಲದಿದ್ದರೆ ಅಂತಹ ಅಂಗಡಿಗಳ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ. ಯಾವುದೇ ಅನಾಹುತ ಘಟನೆ ಸಂಭವಿಸಿದರೆ. ತಾಲೂಕಾಡಳಿತ ಮತ್ತು ನಗರಸಭೆ ನೇರ ಹೊಣೆಯಾಗುತ್ತವೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಅರುಣ ಲಗಳಿ ಎಚ್ಚರಿಕೆಯನ್ನು ನೀಡಿದರು. 

ನಗರದ ಮಿನಿವಿಧಾನ ಸೌಧದಲ್ಲಿ ಕೆಲಕಾಲ ಪ್ರತಿಭಟನೆಯನ್ನು ನಡೆಸಿ. ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, 2023ರ ಡಿಸೆಂಬರ್ 27ರಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದ ಐತಿಹಾಸಿಕ ಹೋರಾಟದ ಫಲಶೃತಿಯಾಗಿ ರಾಜ್ಯ ಸರ್ಕಾರ 28-12-2023 ರಂದು ಶೇಕಡಾ 60ರಷ್ಟು ಕನ್ನಡ ಬಳಸುವಂತೆ ಸುಗ್ರೀವಾಜ್ಞೆ ಹೊರಡಿಸಿತ್ತು. ಸುಗ್ರೀವಾಜ್ಞೆಗೆ ರಾಜ್ಯಪಾಲರ ಸಹಿ ಹಾಕದೇ ಅಧಿವೇಶನದಲ್ಲಿ ಅಂಗೀಕಾರಗೊಳಿಸಿ ಎಂದು ಪ್ರತಿಕ್ರಿಯಿಸಿದ ನಂತರ ರಾಜ್ಯ ಸರಕಾರ ಇತ್ತೀಚಿಗೆ ನಡೆದ ಬಜೆಟ್ ಅಧಿವೇಶನದಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ಅಧಿನಿಯಮ ಅಂಗೀಕರಿಸಿ ಜಾರಿಗೆ ತಂದು 28-2-2024 ರೊಳಗೆ ರಾಜ್ಯದ ಎಲ್ಲ ನಾಮಫಲಕಗಳಲ್ಲಿ ಶೇಕಡಾ 60ರಷ್ಟು ಕನ್ನಡ ಬಳಸಬೇಕು ಇಲ್ಲದಿದ್ದರೆ ದಂಡದ ಜೊತೆಗೆ ಪರವಾನಗಿ ರದ್ದುಗೊಳಿಸಬೇಕೆಂದು ಆದೇಶವನ್ನು ನೀಡಿದೆ ಎಂದರು. 

ರಾಜ್ಯ ಸರ್ಕಾರದ ಆದೇಶದಂತೆ ಜಮಖಂಡಿ ನಗರದಲ್ಲಿ ತಾಲೂಕಾಡಳಿತ, ನಗರಸಭೆ ಮತ್ತು ಪೋಲಿಸ್ ಇಲಾಖೆ ಯಾವುದೇ ಅನ್ಯ ಭಾಷೆಯ ನಾಮಫಲಕಗಳನ್ನು ತೆರವುಗೊಳಿಸದೇ ಇರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ಖಂಡಿಸುತ್ತೇವೆ. ನವೆಂಬರ 1ರ ಒಳಗಾಗಿ ಎಲ್ಲಾ ನಾಮ ಫಲಕಗಳನ್ನು ಶೇಕಡಾ 60 ರಷ್ಟು ಬದಲಾವಣೆ ಹೊಂದಬೇಕು. ಇಲ್ಲದೆ ಹೋದರೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು. 

ತಾಲೂಕು ಗೌರವ ಅಧ್ಯಕ್ಷ ರವಿಕುಮಾರ ಸಿಂಗೆ, ಸಂಜೀವ ಕಾಂಬಳೆ, ಬಸವರಾಜ ಹಿರೇಮಠ, ಮಹದೇವ ಮಾಂಗ, ರಮೇಶ ಪೂಜಾರಿ, ಮಲ್ಲಯ್ಯ ಗಣಾಚಾರಿ, ಲಿಂಗರಾಜ ಮೇಳನ್ನವರ, ಸಲಿಂ ಕಲಿಫಾ ಸೇರಿದಂತೆ ಅನೇಕ ಕರವೇ ಕಾರ್ಯಕರ್ತರು ಇದ್ದರು. 


ಸುದ್ದಿ ಓದಿ