ಕನ್ನಡ ಭಾಷೆ ಕೇವಲ ಮಾತಿನಲ್ಲಿರದೇ ಉಸಿರಿನಲ್ಲಿ ಬೆರೆತಿರಬೇಕು: ಶಾಂತವೀರ
ಜಮಖಂಡಿ 27: ಕನ್ನಡ ಭಾಷೆ ಕೇವಲ ನಮ್ಮ ಮಾತುಗಳಲ್ಲಿರದೆ ನಮ್ಮ ಉಸಿರಿನಲ್ಲಿ ಬೆರೆತಿರಬೇಕು. ಕನಡ ಭಾಷೆಯನ್ನು ನಂಬಿದವರಿಗೆ ತಾಯಿ ಭುವನೇಶ್ವರಿ ಎಂದಿಗೂ ಕೈ ಬಿಡುವುದಿಲ್ಲ. ಕನ್ನಡ ಸಂಸ್ಕೃತಿ ಪರಂಪರೆಗೆ ಇದ್ದಷ್ಟು ಗೌರವ ಇನ್ನಾವುದೇ ಭಾಷೆಗೆ ಇಲ್ಲ. ಈ ಭಾಷೆ ಪಡೆದ ನಾವೇ ಧನ್ಯರು ಎಂದು ಜಮಖಂಡಿ ಡಿವಾಯ್ಎಸ್ಪಿ. ಶಾಂತವೀರ ಈ. ಹೇಳಿದರು.
ನಗರದ ಹೊರವಲಯದ ಆಲಗೂರ ಪುರ್ನವಸತಿ ಕೇಂದ್ರದ ಆದರ್ಶ ವಿದ್ಯಾಲಯದಲ್ಲಿ ನಡೆದ ಕನ್ನಡ ಹಬ್ಬ, ಕನ್ನಡದ ಕಣ್ಮಣಿ ಪ್ರಶಸ್ತಿ ಪ್ರಧಾನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ಭಾಷೆಗೆ ಒಂದು ಇತಿಹಾಸವಿದೆ. ಕನ್ನಡ ಭಾಷೆಯಿಂದ ಆಂಗ್ಲ ಪದಗಳಾಗಿವೆ. ಅನ್ಯ ಭಾಷೆಯನ್ನು ಗೌರವಿಸುವವರು ಕನ್ನಡಿಗರು. ಬೇರೆ ರಾಜ್ಯದ ಸಂಸ್ಕೃತಿಗೆ ದಾಸರಾಗದೆ ಕನ್ನಡ ಭಾಷೆ ಉಳಿಸಿ ಬೆಳೆಸಬೇಕು. ಹೆಚ್ಚೆಚ್ಚು ಕನ್ನಡವನ್ನು ಮಾತನಾಡುವದರ ಜೊತೆಗೆ ಪ್ರತಿ ದಿನ, ಪ್ರತಿ ಘಳಿಗೆ ಕನ್ನಡದ ಹಬ್ಬ ಆಚರಿಸಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಬಸನ್ನವರ ಮಾತನಾಡಿ, ಕನ್ನಡ ಭಾಷೆ ಸುಭದ್ರವಾದದ್ದು, ಆಂಗ್ಲ ಭಾಷೆಗೆ ಆರ್ಥಿಕ ಸ್ಪರ್ಷವಿದೆ ಅದರಿಂದ ಹಣ ಗಳಿಸಬಹುದು ಪ್ರೀತಿ ವಿಶ್ವಾಸ ಮಮತೆ, ಕರುಣೆ ಭಾವನೆಗಳನ್ನು ವ್ಯಕ್ತಪಡಿಸುವ ಭಾಷೆ ಕನ್ನಡವಾಗಿದೆ ಎಂದರು.
ಆಂಗ್ಲ ಭಾಷೆಯ ಕಾಲಘಟ್ಟದಲ್ಲಿರುವ ನಾವು ಕನ್ನಡವನ್ನು ಹೇಗೆ ಉಳಿಸಿ ಬೆಳೆಸಬೇಕು ಎನ್ನುವುದರ ಬಗ್ಗೆ ಚಿಂತನ ಮಂಥನ ಮಾಡಬೇಕಾಗಿದೆ. ಕನ್ನಡ ಭಾಷೆಯನ್ನು ಅರ್ಥೈಸಿಕೊಂಡರೆ ಜಗತ್ತಿನ ಮೂಲೆ ಮೂಲೆಯನ್ನು ನೋಡಲು ಸಾಧ್ಯ. ಕನ್ನಡ ಭಾಷೆಯಲ್ಲಿ ವಿಜ್ಞಾನ, ತಂತ್ರಜ್ಞಾನ ಆಧುನಿಕ ಓದ್ಯೋಗಿಕರಣವಿದೆ. ಉತ್ತಮವಾದ ಭಾವನೆಗಳನ್ನು ಬಿತ್ತಿದರೆ ಉತ್ತಮವಾದ ವ್ಯಕ್ತಿ ಹೊರಬರಲು ಸಾಧ್ಯ. ಶಿಕ್ಷಕರು ನೀಡುವ ಗುಣಮಟ್ಟದ ಶಿಕ್ಷಣ ಜೊತೆಗೆ ಮಕ್ಕಳು ಪರಿಶ್ರಮಪಟ್ಟರೆ ಮಕ್ಕಳು ತಮಗೆ ತಾವೆ ದಾರೀದೀಪವಾಗಬೇಕು ಎಂದರು.
ಜಾನಪದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ಅಸ್ಕಿ, ಡಾ. ಈಶ್ವರ ಕಣಬೂರ ಮಾತನಾಡಿದರು.ಮುಖ್ಯ ಶಿಕ್ಷಕ ಭೂಷನ ಪತ್ತಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದೆ ಸಂದರ್ಭದಲ್ಲಿ ಮಕ್ಕಳಿಗೆ ಕನ್ನಡದ ಕಣ್ಮಣಿ ಪ್ರಶಸ್ತಿ ನೀಡಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಬಿ.ಆರ್.ಸಿ.ಒ ರಮೇಶ ಅವಟಿ, ಮುಖ್ಯ ಶಿಕ್ಷಕ ಎಚ್.ಎಂ. ಅರಕೇರಿ, ಕಸಾಪ ಅಧ್ಯಕ್ಷ ಸಂತೋಷ ತಳಕೇರಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಜಿ.ಕಡಕೋಳ, ಶಿಕ್ಷಣ ಸಂಯೋಜಕ ಎಸ್.ಬಿ. ಬುರ್ಲಿ, ವಸತಿ ನಿಲಯ ಮೇಲ್ವಿಚಾರಕ ವಿನಯಕುಮಾರ ಜಾಧವ, ಪತ್ರಕರ್ತ ಲಕ್ಷ್ಮೀಕಾಂತ ದುದಗಿ ಇತರರು ಇದ್ದರು. ಪ್ರೀತಿ ಮಠಪತಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು, ಸ್ಪಂದನಾ ಸವಣೂರ ಮತ್ತು ಸಾಕ್ಷಿ ನ್ಯಾಮಗೌಡ ನಿರೂಪಿಸಿದರು, ಕನ್ನಡ ಶಿಕ್ಷಕ ನರಸಿಂಹ ಕಲ್ಲೋಳ್ಳಿ ಪ್ರಸ್ಥಾವಿಕವಾಗಿ ಮಾತನಾಡಿದರು, ಕನ್ನಡ ಶಿಕ್ಷಕಿ ಮಹಾನಂದಾ ಬರಗಾಲ ಸ್ವಾಗತಿಸಿದರು, ಶಿಕ್ಷಕ ರಾಜಕುಮಾರ ರಾಠೋಡ ವಂದಿಸಿದರು.