ಕನ್ನಡ ಉಸಿರಾಗಲಿ, ಹಸಿರಾಗಲಿ: ಡಾ. ಅಜಿತ ಪ್ರಸಾದ
ಧಾರವಾಡ 01:ಕವಿಯೊಬ್ಬನ ವರ್ಣನೆಯಂತೆ ಚಿನ್ನದ ಮೇಲಿನ ಮೋಹ, ರನ್ನನ ಮೇಲಿದ್ದರೇ! ಆಸ್ತಿಯ ಮೇಲಿನ ಮೋಹ, ಮಾಸ್ತಿಯ ಮೇಲಿದ್ದರೆ! ಕೇಶದ ಮೇಲಿನ ಮೋಹ, ಕೇಶಿರಾಜನ ಮೇಲಿದ್ದರೇ! ಕನ್ನಡಿಯ ಮೇಲಿನ ಮೋಹ, ಕನ್ನಡದ ಮೇಲೆ ಇದ್ದಿದ್ದರೆ! ಇಂದು ನಮ್ಮ ಕನ್ನಡ ಬಡವಾಗುವ ಬದಲು, ಶ್ರೀಮಂತ ಹಾಗೂ ಪ್ರಭಲವಾಗಿರುತ್ತಿತ್ತು. ನಮ್ಮ ಕರ್ನಾಟಕ ರಾಜ್ಯಕ್ಕೆ ಅದರದೇ ಆದ ಅಮೋಘ ಇತಿಹಾಸವಿದೆ. ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ-ಮಾತನಾಡುವ ಪ್ರದೇಶಗಳನ್ನು ವೀಲೀನಗೊಳಿಸಿ ಕರ್ನಾಟಕ ರಾಜ್ಯವನ್ನು ಘೋಷಣೆ ಮಾಡಿದ ಈ ದಿನವನ್ನು ಕನ್ನಡಿಗರು ನಾಡಹಬ್ಬವನ್ನಾಗಿ ಪ್ರತಿವರ್ಷ ನವೆಂಬರ 1 ರಂದು ನಾವು ಕನ್ನಡ ರಾಜ್ಯೋತ್ಸವ ದಿನವನ್ನು ಆಚರಿಸುತ್ತೇವೆ.
ನಮ್ಮ ರಾಜ್ಯವನ್ನು ಹೊರತು ಪಡಿಸಿ ವಿಶ್ವದಾದ್ಯಂತ ಕನ್ನಡಿಗರು ಇದನ್ನು ಆಚರಿಸುತ್ತಾರೆ. ಇದು ನಮ್ಮ ಕನ್ನಡ ಭಾಷೆ, ನೆಲ, ಜಲಕ್ಕೆ ಇರುವ ಅಭಿಮಾನ ಹಾಗೂ ಶ್ರೇಷ್ಠತೆ. ನಮ್ಮ ಕನ್ನಡ ಭಾಷೆ ಪ್ರತಿಯೊಬ್ಬ ಕನ್ನಡಿಗನ ಉಸಿರಾಗಬೇಕು, ಬೆಳೆಯಬೇಕು ಎಂದು ಧಾರವಾಡದ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ, ಜೆ.ಎಸ್.ಎಸ್ ಐ.ಟಿ.ಐ ಕಾಲೇಜು, ಜೆ.ಎಸ್.ಎಸ್ ಎಂ.ಸಿ.ಎ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದರವರು ಮಾತನಾಡುತ್ತಿದ್ದರು.
1947 ರಲ್ಲಿ ಕರ್ನಾಟಕ 20 ರಾಜ್ಯಗಳಾಗಿ ಹರಿದು ಹಂಚಿ ಹೋಗಿತ್ತು, ಆಂಧ್ರದಲ್ಲಿ ಪೊಟ್ಟ ಶ್ರೀನಿವಾಸಲು ಅವರು ಭಾಷಾವಾರು ರಾಜ್ಯಕ್ಕಾಗಿ ಮಾಡಿದ 52 ದಿನಗಳ ಉಪವಾಸ ಸತ್ಯಾಗ್ರಹದ ಮೂಲಕ ಆಂಧ್ರ್ರದೇಶ ರಚನೆಗೆ ಕಾರಣಿಭೂತರಾದ ಸ್ಪೂರ್ತಿಯಿಂದ ಕರ್ನಾಟಕದಲ್ಲಿ ಅಂದಾನೆಪ್ಪ ದೊಡ್ಡಮೇಟಿಯವರು 1953 ರಲ್ಲಿ ಉಪವಾಸ ಸತ್ಯಾಗ್ರಹವನ್ನು ಕೈಗೊಂಡರು ಅಂತಿಮವಾಗಿ ಪಜರಾಲಿ ಕಮೀಟಿ ರಚನೆಯಾಗಿ, ಭಾಷಾವಾರು ಪ್ರಾಂತ್ಯಗಳಿಗೆ ನಿರ್ದೇಶನ ನೀಡಿದರು. ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಶ್ರಿ ಅಲೂರು ವೆಂಕಟರಾಯರು, ಡೆಪ್ಯೂಟಿ ಚೆನ್ನಬಸಪ್ಪ, ಗುದ್ಲೆಪ್ಪಾ ಹಳ್ಳಿಕೇರಿ, ಗಂಗಾಧರ ದೇಶಪಾಂಡೆ, ಹರ್ಡಿಕರ ಮಂಜಪ್ಪಾ, ಡಾ. ದಿವಾಕರ್, ಬಿ.ಎಂ.ಶ್ರೀಕಂಠಯ್ಯನವರು ಪ್ರಮುಖ ಪಾತ್ರವಹಿಸದ್ದಾರೆ. ಅಲ್ಲದೇ ಅನಕೃ, ಕೆ. ಶಿವರಾಮ ಕಾರಂತ, ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಎ.ಎನ್.ಕೃಷ್ಣರಾವ್ ತಮ್ಮ ಸಾಹಿತ್ಯದ ಮೂಲಕ ಪುಷ್ಠಿ ನೀಡಿದರು. ಕರ್ನಾಟಕ ವಿದ್ಯಾವರ್ಧಕ ಸಂಘ, ಕರ್ನಾಟಕ ಸಾಹಿತ್ಯ ಪರಿಷತ್ತು, ಕರ್ನಾಟಕ ಇತಿಹಾಸ ಮಂಡಲ, ಕರ್ನಾಟಕ ಸಭಾ ಸಂಸ್ಥೆಗಳು ತಮ್ಮ ಕರ್ನಾಟಕ ಏಕೀಕರಣ ಹಾಗೂ ಕನ್ನಡ ಭಾಷೆಯ ಬೆಳವಣಿಗೆ ಕೊಡುಗೆಯನ್ನು ನೀಡಿವೆ. ಕರ್ನಾಟಕದ ಏಕೀಕರಣದ ಸಲುವಾಗಿ ಹತ್ತಕ್ಕಿಂತ ಹೆಚ್ಚು ಅಧಿವೇಶನಗಳು ನಡೆದವು. ಅದರಲ್ಲಿ 1924 ರಲ್ಲಿ ಜರುಗಿದ ಬೆಳಗಾವಿ ಅಧಿವೇಶನದಲ್ಲಿ ಗಾಂಧೀಜಿಯವರು ಭಾಗವಹಿಸಿದ್ದು ಕರ್ನಾಟಕ ರಾಜ್ಯದ ಉದಯಕ್ಕೆ ಇನ್ನಷ್ಟು ಬಲ ತುಂಬಿತು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಡಾ. ಆರ್. ವಿ. ಚಿಟಗುಪ್ಪಿಯವರು ಮಾತನಾಡಿ ನಮ್ಮ ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ಬರಲ್ಹುಲವಾರು ಕಾರಣಗಳಿವೆ. ಕರ್ನಾಟಕ ಎಂಬ ಹೆಸರನ್ನು ನಾವು ರಾಮಾಯಣ ಮಹಾಭಾರತ ಮಹಾಕಾವ್ಯಗಳಲ್ಲಿಯೂ ಕಾಣಬಹುದು. ಇದು ಕಪ್ಪು ಮಣ್ಣಿನ ನಾಡು ಆಗಿದ್ದರಿಂದ ಇದನ್ನು ಕರುನಾಡು ಎಂದು ಕರೆಯುತ್ತಾರೆ. ತಮಿಳಿನ ಮಹಾಕಾವ್ಯವಾದ ಸಿಲಪ್ಪತಿಕಾರಂ ನಲ್ಲಿ ಕಾವೇರಿಯಿಂದ ಉತ್ತರ ಬಾಗಕ್ಕೆ ಇರುವ ಎತ್ತರವಾದ ಪ್ರದೇಶವನ್ನು ಕರು-ನಾಟಕ ಎಂಬ ಪದದಿಂದ ಕರ್ನಾಟಕ ಎಂಬ ಹೆಸರು ಬಂದಿದೆ. ಮತ್ಸ್ಯ ಪುರಾಣ ಹಾಗೂ ಭಾಗವತ ಪುರಾಣದಲ್ಲಿ ಇದರ ಉಲ್ಲೇಖವಿದೆ. ರಾಷ್ಟ್ರಕೂಟರ ಶಾಸನಗಳಲ್ಲಿ ಇ ಪದದ ಬಳಕೆ ಆಗಿದೆ. ಬದಾಮಿ ಚಾಲುಕ್ಯ ಸೈನ್ಯವನ್ನು ಕರ್ನಾಟಕ ಬಲ ಎಂದು ವರ್ಣಿಸಲಾಗಿದೆ. ಹೀಗಾಗಿ ಇದು ಪ್ರಾಚೀನ ಪದವಾಗಿದ್ದು, ಮುಂಬೈ ಕರ್ನಾಟಕ ಪ್ರದೇಶದಲ್ಲಿ ಈ ಪದದ ಬಳಕೆ ಹೆಚ್ಚಾಗಿತ್ತು. ಏಕೀಕರಣ ಪೂರ್ವದಲ್ಲೆ ಬಹಳಷ್ಟು ಸಂಘ ಸಂಸ್ಥೆಗಳಿಗೆ ಕರ್ನಾಟಕ ಎಂಬು ಹೆಸರನ್ನು ಸೇರಿಸಿ ನಾಮಕರಣ ಮಾಡಲಾಗಿತ್ತು. ಮೈಸೂರು ರಾಜ್ಯ ಎಂಬ ಹೆಸರು ಕೇವಲ ಒಂದು ಸಂಸ್ಥಾನ ಸಂಬಂದಿಸಿದ್ದು ಆಗಬಾರದು ಎಂದು ಈ ಎಲ್ಲ ವಿಚಾರವನ್ನು ಪರಿಗಣಿಸಿ ನಮ್ಮ ರಾಜ್ಯಕ್ಕೆ ಕರ್ನಾಟಕ ರಾಜ್ಯ ನಾಮಕರಣ ಮಾಡಲಾಯಿತು ಎಂದು ಹೇಳೀದರು.
ಇದೇ ಸಂದರ್ಭದಲ್ಲಿ ಡಾ. ಸೂರಜ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಮಹಾವೀರ ಉಪಾದ್ಯೆ ವಂದಿಸಿದರು. ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.