ಚನ್ನವೀರ ಕಣವಿ ಅವರನ್ನು ಕಳೆದುಕೊಂಡಿರುವ ಕನ್ನಡ ಲೋಕ ನಿಜಕ್ಕೂ ಅನಾಥ: ಕಡಣಿ
ಸಿಂದಗಿ: ಓರ್ವ ಧೀಮಂತ ಮಾರ್ಗದರ್ಶಕ, ಸಾತ್ವಿಕ ಚಿಂತಕರ ಕೊರತೆ ಇರುವ ಈ ಸಂದರ್ಭದಲ್ಲಿ ಚನ್ನವೀರ ಕಣವಿ ಅವರನ್ನು ಕಳೆದುಕೊಂಡಿರುವ ಕನ್ನಡ ಲೋಕ ನಿಜಕ್ಕೂ ಅನಾಥವಾಗಿದೆ. ಸಾರಸ್ವತ ಲೋಕಕ್ಕೆ ಇದು ತುಂಬಲಾರದ ನಷ್ಟ ಎಂದು ಎಸ್.ಪಿ.ಬಿ.ಕೆ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಜಿ.ಎಸ್.ಕಡಣಿ ಹೇಳಿದರು.
ಪಟ್ಟಣದ ಪಿ.ಇ.ಎಸ್ ಗಂಗಾಧರ ಬಿರಾದಾರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಚನ್ನವೀರ ಕಣವಿಯವರಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜೂನ್ 28, 1928ರಂದು ಧಾರವಾಡ ಜಿಲ್ಲೆಯ ಹೊಂಬಳದಲ್ಲಿ ಚನ್ನವೀರ ಕಣವಿಯವರು ಜನಿಸಿದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿಎ ಮತ್ತು ಎಂಎ ಪದವಿ ಪಡೆದರು. ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಸಂಗ ಪ್ರಸರಣ ಮತ್ತು ಪ್ರಕಟಣಾ ವಿಭಾಗದ ಕಾರ್ಯದರ್ಶಿಯಾಗಿ, ಪ್ರಸಾರಾಂಗದ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಭಾವಜೀವಿ, ಸಮನ್ವಯ ಕವಿ ಎಂದೇ ಅವರು ಖ್ಯಾತಿಗಳಿಸಿದ್ದರು ಎಂದು ಹೇಳಿದರು.
1949ರಲ್ಲಿ ಡಾ. ಚನ್ನವೀರ ಕಣವಿ ಮೊದಲ ಕವಲ ಸಂಕಲನ ಕಾವ್ಯಾಕ್ಷಿ ಬಿಡುಗಡೆಗೊಂಡಿತು. ಭಾವಜೀವಿ, ಆಕಾಶಬುಟ್ಟಿ, ಮಣ್ಣಿನ ಮೆರವಣಿಗೆ, ನೆಲಮುಗಿಲು, ಜೀವಧ್ವನಿ ಮುಂತಾದ ಕವನ ಸಂಕಲನಗಳನ್ನು ಅವರು ರಚಿಸಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅನಕೃ ಪ್ರತಿಷ್ಠಾನ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗಳನ್ನು ಪಡೆದಿದ್ದಾರೆ ಎಂದು ಹೇಳಿದರು.
ಸಜ್ಜನಿಕೆಗೆ ಸಾಕಾರ ಮೂರ್ತಿ ಚನ್ನವೀರ ಕಣವಿಯಾಗಿದ್ದರು. ಅವರ ಮಾತುಗಳು ಅತ್ಯಂತ ಮಾನವೀಯ ಗುಣಗಳನ್ನು ಹೊಂದಿದ್ದರು. ಅವರ ನಿಧನ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ ಎಂದು ಹೇಳಿದರು.
ಉಪನ್ಯಾಸಕ ಎಸ್.ವಾಯ್. ಬೀಳಗಿ, ವಿ.ವಿ. ಪಾಟೀಲ, ಪಿ.ಎಸ್. ಬಿರಾದಾರ, ಎಚ್.ಬಿ. ಗುಮ್ಮಕ್ಕನವರ ಮತ್ತು ಉಮೇಶ ಗಣಿಯಾರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.