ಬೆಳಗಾವಿ

ಕನಕದಾಸರು ಸಮಸ್ತ ಮನುಕುಲದ ಆಸ್ತಿ: ಮಹಾಂತೇಶ ಕುರಿ

ಕನಕದಾಸರು ಸಮಸ್ತ ಮನುಕುಲದ ಆಸ್ತಿ: ಮಹಾಂತೇಶ ಕುರಿ


           ಬೆಳಗಾವಿ 27: ಕನಕದಾಸರು ಕೇವಲ ಜಾತಿಗೆ ಸೀಮಿತವಾಗದೆ ಅವರು ಸಮಸ್ತ ಮನುಕುಲದ ಆಸ್ತಿಯಾಗಿದ್ದಾರೆ. ಕನಕದಾಸರ ಆದರ್ಶ ಮತ್ತು ಕೊಡುಗೆಗಳನ್ನು ಕೇವಲ ಭಾಷಣಕ್ಕೆ ಸೀಮಿತಗೊಳಿಸದೆ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮಹಾಂತೇಶ ಕುರಿ ಹೇಳಿದರು.  

         ಇಲ್ಲಿನ ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಸಂತ ಕವಿ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಕನಕದಾಸರು ಜ್ಞಾನದ ಜೊತೆಗೆ ಕೌಶಲ್ಯವನ್ನೂ ಪಡೆದಿದ್ದರು. ಇದನ್ನು ವಿದ್ಯಾರ್ಥಿಗಳು ಗಮನಿಸಿ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಜ್ಞಾನ ಮತ್ತು ಕೌಶಲ್ಯ ಎರಡನ್ನೂ ಕಲಿಯಬೇಕು ಎಂದರು. ತಿಮ್ಮಪ್ಪ ನಾಯಕರು ಕನಕದಾಸರಾಗಿ, ದಾರ್ಶನಿಕರಾಗಿ ಮತ್ತು ಸಮಾಜ ಸುಧಾರಕರಾದರು. ’ನಾನು’ ಎಂಬ ಅಹಂಕಾರವನ್ನು ತ್ಯಜಿಸಿದಾಗ ಮಾತ್ರ ಬದುಕಿನಲ್ಲಿ ಮುಂದೆಬರುತ್ತೇವೆ. ಎಂದು ಹೇಳಿದರು.  

                ಕನಕದಾಸರು ಕನ್ನಡ ಸಾಹಿತ್ಯಕ್ಕೆ ತಮ್ಮ ಕೀರ್ತನೆಗಳ ಮೂಲಕ ಮಹತ್ವದ ಕೊಡುಗೆ ನೀಡಿದ್ದಾರೆ. ಸಂಸ್ಕೃತದ ಕ್ಲಿಷ್ಟ ಸಂಗತಿಗಳನ್ನು ಜನಪದರಿಗೆ ಅರ್ಥವಾಗುವಂತೆ ಸರಳವಾಗಿ ತಿಳಿಸಿದರು. ಬಸವಣ್ಣನವರು ಹಚ್ಚಿದ ದೀಪವನ್ನು ಕನಕದಾಸರು ತೆಗೆದುಕೊಂಡು ಮುಂದೆ ಸಾಗಿದರು ಎಂದು ಅವರು ವಿವರಿಸಿದರು.  

               ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಸಚಿವ ಶ್ರವಣ ನಾಯ್ಕ್‌, ಕನಕದಾಸರು ಯೋಧನಿಂದ ಯೋಗಿಯಾದರು. ನಾವು ಕೂಡ ’ನಾನು’ ಎನ್ನುವುದನ್ನು ಬಿಟ್ಟು ’ನಮ್ಮವರು’ ಎಂಬ ಸಮಾನತೆಯ ಪರಿಕಲ್ಪನೆಯನ್ನು ನಂಬಬೇಕು ಎಂದರು. ನಮ್ಮ ಮಾನವೀಯ ಮೌಲ್ಯಗಳಿಂದ ಮತ್ತು ವೈಚಾರಿಕತೆಯಿಂದ ನಾವು ಶ್ರೀಮಂತರಾಗುತ್ತೇವೆ. ಶಿಕ್ಷಣದಿಂದ ಮಾನವೀಯ ಮೌಲ್ಯಗಳನ್ನು ಬೆಳೆಸಿ ಸಮಾನತೆಯನ್ನು ತರಬೇಕು. ವಿದ್ಯಾರ್ಥಿಗಳು ಕಲಿಕೆಯನ್ನು ಎಂದೂ ನಿಲ್ಲಿಸಬೇಡಿ ಎಂದು ಕಿವಿಮಾತು ಹೇಳಿದರು.  

                ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಘಟಕದ ಪ್ರಭಾರಿ ಸಂಯೋಜಕಿ ಕವಿತಾ ಕುಸುಗಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಣಕಾಸು ಅಧಿಕಾರಿ ಪ್ರೊ. ಬಿ. ಎಸ್‌. ನಾವಿ, ಪರಿಶಿಷ್ಟ ಜಾತಿ ಮತ್ತು ಪಂಗಡದ ನಿರ್ದೇಶಕಿ ವಿಜಯಲಕ್ಷ್ಮಿ ಸೀಗಿಹಳ್ಳಿ, ಸಮಾಜ ವಿಜ್ಞಾನ ವಿಭಾಗದ ಡೀನ್ ಪ್ರೊ. ಚಂದ್ರಶೇಖರ್ ವಾಗ್ಮಾರೆ, ಸಹಾಯಕ ಕುಲಸಚಿವ ಸುಧೀರ್ ಗು. ಮಾಳಗೆ ಸೇರಿದಂತೆ ವಿವಿಧ ಸ್ನಾತಕೋತ್ತರ ವಿಭಾಗಗಳ ಮುಖ್ಯಸ್ಥರು, ಬೋಧಕ-ಬೋಧಕೇತರ ಸಿಬ್ಬಂದಿ, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ