ಕಲಿ- ಕಲಿಸು ಕಲಾ ಅಂತರ್ಗತ ಕಲಿಕಾ ಯೋಜನೆ
ಧಾರವಾಡ ಜಿಲ್ಲೆಯ ಎರಡು ಪ್ರಸ್ತಾವನೆಗಳು ಆಯ್ಕೆ
ಧಾರವಾಡ 03: ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ ಸಂಸ್ಥೆಯು ಡಿ.ಎಸ್.ಇ.ಆರ್.ಟಿ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಕಲಿ-ಕಲಿಸು ಕಲಾ ಅಂತರ್ಗತ ಕಲಿಕಾ ಯೋಜನೆಗಾಗಿ ಶಿಕ್ಷಕರಿಂದ, ಕಲಾವಿದರಿಂದ ನಾವಿನ್ಯಯುತ ಕಲಾ ಚಟುವಟಿಕೆಗಳ ಯೋಜನೆಯ ಪ್ರಸ್ತಾವನೆಗಳನ್ನು ಆಹ್ವಾನಿಸಿತ್ತು. ರಾಜ್ಯದ ವಿವಿಧ ಭಾಗಗಳ ನೂರಾರು ಯೋಜನೆಗಳ ಪೈಕಿ 14 ಪ್ರಸ್ತಾವನೆಗಳು ಅಂತಿಮ ಸುತ್ತಿನಲ್ಲಿದ್ದವು. ಅವುಗಳಲ್ಲಿ ಆಯ್.ಎಫ್.ಎ 6 ಪ್ರಸ್ತಾವನೆಗಳನ್ನು ಕಾರ್ಯಾನುಷ್ಠಾನಕ್ಕೆ ಆಯ್ಕೆ ಮಾಡಿದ್ದು ಅದರಲ್ಲಿ ಧಾರವಾಡ ಜಿಲ್ಲೆಯ ಎರಡು ಪ್ರಸ್ತಾವನೆಗಳು ಆಯ್ಕೆಯಾಗಿರುವುದು ವಿಶೇಷ.
ಹುಬ್ಬಳ್ಳಿ ತಾಲೂಕಿನ ಕಿರೇಸೂರ ಸರಕಾರಿ ಪ್ರೌಢಶಾಲೆಯ ಆಂಗ್ಲಭಾಷಾ ಶಿಕ್ಷಕ ಡಾ.ಲಿಂಗರಾಜ ರಾಮಾಪೂರ ಮಂಡಿಸಿದ ಅರಳೀಕಟ್ಟೆ ತೆರೆದ ವಾಚನಾಲಯ ಹಾಗೂ ಧಾರವಾಡ ತಾಲೂಕಿನ ಹಂಗರಕಿ ಸಹಿಪ್ರಾ ಶಾಲೆಯ ಶಿಕ್ಷಕಿ ಸಕ್ಕೂ ರಾಯಣ್ಣವರ ಮಂಡಿಸಿದ ನೆಲದಲ್ಲೂ, ನೂಲಿನಲ್ಲೂ ದೇಶಪ್ರೇಮ ಅಂತಿಮವಾಗಿ ಆಯ್ಕೆಯಾದ ಯೋಜನೆಗಳಾಗಿವೆ. ಇವುಗಳ ಕಾರ್ಯಾನುಷ್ಠಾನಕ್ಕೆ ಆಯ್.ಎಫ್.ಎ ತಲಾ ಒಂದು ಲಕ್ಷ ರೂಪಾಯಿಗಳನ್ನು ಸಹಾಯಧನ ನೀಡಲಿದೆ.
ಅರಳಿಕಟ್ಟೆ ತೆರೆದ ವಾಚನಾಲಯ ಮಕ್ಕಳಲ್ಲಿ ಓದುವ ಸದಭಿರುಚಿ ಬೆಳೆಸುವುದಲ್ಲದೇ ಮರಗಳ ಶಾಸ್ತ್ರೀಯ ಅಧ್ಯಯನದ ಮೂಲಕ ಪರಿಸರ ಅರ್ಥೈಯಿಸಿಕೊಳ್ಳುವಲ್ಲಿ ಸಹಕಾರಿಯಾಗಲಿದೆ. ಇದರ ಜೊತೆಗೆ ಮಕ್ಕಳು ಮರಗಳ ಕುರಿತಾದ ಕಥೆ, ಕವಿತೆ, ಚಿತ್ರ, ಹರ್ಬೇರಿಯಂ, ಅಟೋಗ್ರಾಫ್ ಸಿದ್ಧಪಡಿಸುವ ಚಟುವಟಿಕೆಗಳಲ್ಲಿ ತೊಡಗುವ ಮೂಲಕ ಒಂದು ಕಲಾ ಸಂಯೋಜಿತ ಆಂದೋಲನವನ್ನಾಗಿಸುವ ಗುರಿ ಹೊಂದಿದೆ.
ನೆಲದಲ್ಲೂ ನೂಲಿನಲ್ಲೂ ದೇಶಪ್ರೇಮ ಖಾದಿ ಜನಜೀವನದ ನಾಡಿ ಮತ್ತು ಸ್ವಾತಂತ್ರ್ಯ ಸಂಗ್ರಾಮಕ್ಕೆ ನಾಂದಿಯಾದ ಕಥೆಯನ್ನು ಕಟ್ಟಿ ಕೊಡುತ್ತದೆ. ರಾಷ್ಟ್ರಧ್ವಜ, ದೇಶಪ್ರೇಮ ಮತ್ತು ಖಾದಿಯ ಮಹತ್ವವನ್ನು ಪ್ರಚುರಪಡಿಚುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.
ಶಿಕ್ಷಕರ ಈ ನಾವಿನ್ಯಯುತ ಪ್ರಯತ್ನಗಳಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಜಿಲ್ಲಾ ಉಪನಿರ್ದೇಶಕರಾದ ಎಸ್.ಎಸ್.ಕೆಳದಿಮಠ, ಡಯಟ್ ಪ್ರಾಚಾರ್ಯ ಜಯಶ್ರೀ ಕಾರೇಕಾರ, ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ಎಸ್.ಎಮ್.ಹುಡೇದಮನಿ ಹರ್ಷ ವ್ಯಕ್ತಪಡಿಸಿದ್ದಾರೆ.