ಕಳ್ಳರನ್ನು ಬಂಧಿಸುವಲ್ಲಿ ಕಾಗವಾಡ ಪೊಲೀಸರು ಸಂಪೂರ್ಣ ವಿಫಲ :ಮಾಜಿ ಶಾಸಕ ರಾಜು ಕಾಗೆ ಆರೋಪ: ಬುಧವಾರ ರಾತ್ರಿ 18 ರೈತರ ಪಂಪಸೆಟ್ ಕೇಬಲ ಕಳ್ಳತನ
ಲೋಕದರ್ಶನ ವರದಿ
ಕಾಗವಾಡ 17: ತಾಲೂಕಿನಲ್ಲಿ ಕಳೆದ ಮೂರು ತಿಂಗಳುಗಳಿಂದ ಸುಮಾರು 10 ಗ್ರಾಮಗಳಲ್ಲಿ ಸರಣಿ ಕಳ್ಳತನ ಪ್ರಕರಣಗಳಾಗಿದ್ದು, ಕಳ್ಳರನ್ನು ಬಂಧಿಸುವಲ್ಲಿ ಕಾಗವಾಡ ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಕಾಗವಾಡದ ಮಾಜಿ ಶಾಸಕ ರಾಜು ಕಾಗೆ ಆರೋಪಿಸಿದ್ದಾರೆ.
ಗುರುವಾರ ದಿ. 17ರಂದು ಉಗಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳೆದ 4 ತಿಂಗಳಿನಿಂದ ಇಲ್ಲಿಯವರೆಗೆ ಕಾಗವಾಡ ಶೇಡಬಾಳ, ಐನಾಪುರ, ಉಗಾರ, ಮೋಳೆ, ಮಂಗಸೂಳಿ, ಕೆಂಪವಾಡ, ಲೋಕುರ, ಕೃಷ್ಣಾ-ಕಿತ್ತೂರ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಸರಣಿ ಕಳ್ಳತನಗಳಾಗಿದ್ದು ಲಕ್ಷಾಂತರ ರೂ ಮೌಲ್ಯದ ಬೆಳ್ಳಿ, ಬಂಗಾರ ಸೇರಿದಂತೆ ನಗದು ಹಣವನ್ನು ದೋಚಿಕೊಂಡು ಹೋಗಿದ್ದಾರೆ.
ಈ ಕುರಿತು ಸಾರ್ವಜನಿಕರು ಕಾಗವಾಡ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರೂ ಕಳ್ಳರನ್ನು ಬಂಧಿಸುವಲ್ಲಿ ಕಾಗವಾಡ ಪೊಲೀಸರು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ರಾಜು ಕಾಗೆ ಆರೋಪಿಸಿದರು.
150 ಪಂಪಸೆಟ್ಗಳ ಕೇಬಲ ಕಳ್ಳತನ
ಕಳೆದ ಎರಡು ತಿಂಗಳುಗಳಲ್ಲಿ ಉಗಾರ ಬಿಕೆ ಹಾಗೂ ಉಗಾರ ಖುರ್ದ ಗ್ರಾಮಗಳಲ್ಲಿಯ ರೈತರು ಕಳೆದ ಅನೇಕ ವರ್ಷಗಳಿಂದ ಕೃಷ್ಣಾ ನದಿಗೆ ಸುಮಾರು 700 ಪಂಪಸೆಟ್ಗಳನ್ನು ಅಳವಡಿಸಿದ್ದಾರೆ. ಆದರೆ ಸುಮಾರು 150 ಕ್ಕೂ ಹೆಚ್ಚು ಪಂಪಸೆಟ್ಗಳ ಕೆಬಲ್ ಕಳ್ಳತನವಾಗಿವೆ.
ಅದರಲ್ಲಿ ನನ್ನಪಂಪಸೆಟ್ ಕೇಬಲ ಮೂರು ಬಾರಿ ಕಳ್ಳತನವಾಗಿದೆ, ಹಲವಾರು ಬಾರಿ ಠಾಣೆಗೆ ದೂರು ನೀಡಿದ್ದರೂ ಸಹ ಇನ್ನುವರೆಗೆ ಕಳ್ಳರನ್ನು ಬಂಧಿಸಿಲ್ಲ, ಇದರಿಂದ ತಾಲೂಕಿನಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂದರು.
ನಿನೆ ರಾತ್ರಿ ಮಾಜಿ ಶಾಸಕ ರಾಜು ಕಾಗೆ ಸೇರಿ 18 ರೈತರ ಕೇಬಲ ಕಳ್ಳತನ
ಬುಧವಾರ ಮಧ್ಯರಾತ್ರಿ ಮತ್ತೇ ಉಗಾರ ಗ್ರಾಮದಲ್ಲಿ ಮಾಜಿ ಶಾಸಕ ರಾಜು ಕಾಗೆ, ಮಹಾದೇವ ಕಟಗೇರಿ, ಪ್ರಫುಲ್ ಥೋರುಸೆ, ವಿಜಯ ಥೋರುಸೆ, ಸತ್ಯಪ್ಪ ದಾನೊಳ್ಳಿ, ಬಾಹುಬಲಿ ಶೆಟ್ಟಿ, ಮಹಾಲಿಂಗ ಕಟಗೇರಿ, ಉತ್ತಮ ಮಲ್ಲೇವಾಡಿ ಸೇರಿದಂತೆ 18 ಜನರ ಕೇಬಲ್ ಕಳ್ಳತನವಾಗಿವೆ. ಬೇಸಿಗೆಯ ಸುಡು ಬಿಸಿಲು ಇರುವದರಿಂದ ಕಬ್ಬಿನ ಬೆಳೆಗಳಿಗೆ ನೀರುಣಿಸಲು ತುಂಬಾ ಅನಾನುಕೂಲವಾಗುತ್ತಿದೆ ಎಂದರು.
ನನ್ನದು ಯಾವುದೇ ರಾಜಕೀಯ ಪ್ರೇರಿತ ಹೇಳಿಕೆಯಲ್ಲ, ಇದರಲ್ಲಿ ಬಿಜೆಪಿ, ಜೆಡಿಎಸ್, ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಎಲ್ಲ ವರ್ಗದವರ ಕೇಬಲಗಳು ಮತ್ತು ಮನೆಗಳು ಕಳ್ಳತನವಾಗಿವೆ ಎಂದು ರಾಜು ಕಾಗೆ ಹೇಳಿದರು.
ಕಾಗವಾಡ ತಾಲೂಕಿನಲ್ಲಿ ಶಾಂತಿ ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ, ಜಿಲ್ಲಾ ಪೊಲೀಸ್ ಅಧಿಕಾರಿಗಳು ತಕ್ಷಣವೇ ಗಮನ ಹರಿಸಿ ಕಳ್ಳರನ್ನು ಬಂಧಿಸಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ರಾಜು ಕಾಗೆ ಎಚ್ಚರಿಸಿದ್ದಾರೆ.
ಮಾಜಿ ಶಾಸಕ ರಾಜು ಕಾಗೆ