ಕಾಗವಾಡ

ಕಾಗವಾಡ ತಾಲೂಕಾ ಸಂಪೂರ್ಣ ಬಂದ್ : ಭಿಕೋ ಎನ್ನುತ್ತಿರುವ ರಸ್ತೆಗಳು* ಸುಖಾ ಸುಮ್ಮನೆ ರೋಡಿಗೆ ಬಂದವರಿಗೆ ದಂಡ * ಜನರ ಸಹಕಾರವೇ ಯಶಸಿಗೆ ಕಾರಣ

ಕಾಗವಾಡ ತಾಲೂಕಾ ಸಂಪೂರ್ಣ ಬಂದ್ : ಭಿಕೋ ಎನ್ನುತ್ತಿರುವ ರಸ್ತೆಗಳು* ಸುಖಾ ಸುಮ್ಮನೆ ರೋಡಿಗೆ ಬಂದವರಿಗೆ ದಂಡ * ಜನರ ಸಹಕಾರವೇ ಯಶಸಿಗೆ ಕಾರಣ

ಲೋಕದರ್ಶನ ವರದಿ 


ಕಾಗವಾಡ 08: ಕೋವಿಡ್‌-19 ಮೂರನೇ ಅಲೆ ನಿಯಂತ್ರಣಕ್ಕಾಗಿ ರಾಜ್ಯ ಸರಕಾರ ಘೋಷಿಸಿರುವ ವಾರಾಂತ್ಯದ ಲಾಕ್‌ಡೌನ್ ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ಬಂದಿದ್ದು, ವಾಣಿಜ್ಯ ವಹಿವಾಟುಗಳು ಸಂಪೂರ್ಣ ಸ್ಥಗಿತಗೊಂಡಿವೆ. 

  ಶುಕ್ರವಾರ ರಾತ್ರಿ 9 ಗಂಟೆಯಿಂದಲೇ ವಾರಾಂತ್ಯದ ಲಾಕ್‌ಡೌನ್ ಜಾರಿ ಇದ್ದು, ಜನರ ಓಡಾಟ ನಿರ್ಭಂಧಿಸಲಾಗಿದೆ. ನೆರೆಯ ಮಹಾರಾಷ್ಟ್ರದಿಂದ ಬರುವ ವಾಹನಗಳು ಇಂದು ಬಹುತೇಕ ಬಂದ್ ಆಗಿದ್ದವು. ಆಸ್ಪತ್ರೆಗೆ ತೆರಳುವ ವಾಹನಗಳು ಮಾತ್ರ ಓಡಾಟ ಕಂಡು ಬಂತು. ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿಯಲ್ಲಿ ಕೋವಿಡ್ ಚಕ್ ಪೋಸ್ಟಗಳನ್ನು ತೆರೆದಿದ್ದು ಪ್ರತಿಯೊಬ್ಬರ ಆರ್‌.ಟಿ.ಪಿ.ಸಿ.ಆರ್ ಚೆಕ್ ಮಾಡಿ ಜನರನ್ನು ಬಿಡುತ್ತಿದ್ದಾರೆ. ಯಾರ ಬಳಿ ತಪಾಸನಾ ಪ್ರಮಾಣ ಪತ್ರ ಇಲ್ಲವೋ ಅಂಥವರನ್ನು ವಾಪಸ್ ಕಳಿಸುತ್ತಿರುವ ಕಾರ್ಯವನ್ನು ಖುದ್ದಾಗಿ ಕಾಗವಾಡ ತಹಸೀಲ್ದಾರ ರಾಜೇಶ ಬುಲಿ, ಸಿಪಿಐ ಶಂಕರಗೌಡ ಬಸಗೌಡರ, ಪಿಎಸ್‌ಐ ಬಿ.ಎಂ.ರಬಕವಿಯವರು ಸ್ವತ: ಫೀಲ್ಡಿಗಿಳಿದು ತಪಾಸನೆಗೆ ಮುಂದಾಗಿದ್ದು, ಕಂಡು ಬಂತು. 

ಕಾಗವಾಡ ತಾಲೂಕಿನ ಕಾಗವಾಡ ಶಿರಗುಪ್ಪಿ, ಜುಗೂಳ, ಐನಾಪುರ, ಉಗಾರ,ಮಂಗಸೂಳಿ ಕುಸನಾಳ,ಮೋಳೆ,  ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಇಂದು ಸಂಪೂರ್ಣ ಬಂದ್ ಮಾಡಿ ವಿಕೆಂಡ್ ಲಾಕ್ ಡೌನ್ಗೆ ಜನರು ಸಹಕಾರ ನೀಡಿದ್ದು ಕಂಡು ಬಂತು. 

 ಭೀಕೋ ಎನ್ನುತ್ತಿರುವ ರಸ್ತೆಗಳು ;ವೀಕೆಂಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಾಗವಾಡ ಪೊಲೀಸರು ಫಿಲ್ಡಿಗಿಳಿದಿದ್ದು,  ಕರ್ನಾಟಕ ಹಾಗೂ ಮಹಾರಾಷ್ಟ್ರವನ್ನು ಸಂಪರ್ಕಿಸುವ ಎಲ್ಲ ರಸ್ತೆಗಳಲ್ಲಿ ಪೊಲೀಸರು ಠಿಕಾನಿ ಹೂಡಿದ್ದು, ಸುಖಾ ಸುಮ್ಮನೆ ರೋಡಿಗೆ ಬಂದವರಿಗೆ ಪೊಲೀಸರು ವಾಪಸ್ ಕಳುಹಿಸುತ್ತಿದ್ದಾರೆ. ಕಾಗವಾಡ ತಾಲೂಕಿನ ಪ್ರತಿಯೊಂದು ಹಳ್ಳಿ ಹಾಗೂ ಪಟ್ಟಣಗಳ ಪ್ರಮುಖ ರಸ್ತೆ ಹಾಗೂ ವೃತ್‌ಗಳಲ್ಲಿ ಶುಕ್ರವಾರ ರಾತ್ರಿಯಿಂದಲೇ ಪೋಲಿಸರು ಬೀಡುಬಿಟ್ಟಿದ್ದು ಇಲ್ಲ ಸಲ್ಲದ ಕಾರಣ ಹೇಳಿ ಸುಖಾ ಸುಮ್ಮನೆ ಓಡಾಡುವವರಿಗೆ ಖಾಕಿ ಪಡೆ ದಂಡ ಪ್ರಯೋಗ ಮಾಡುತ್ತಿರುವುದು ಕಂಡು ಬಂತು. ಶುಕ್ರವಾರ ರಾತ್ರಿಯಿಂದಲೇ ಖಾಸಗಿ ವಾಹನಗಳ ಓಡಾಟ ಬಂದ್ ಆಗಿರುವದರಿಂದ ಪ್ರಮುಖ ರಸ್ತೆಗಳೆಲ್ಲ ಬೀಕೋ ಎನ್ನುತ್ತಿವೆ. 


ಸುದ್ದಿ ಓದಿ