ಧಾರವಾಡ - ಹುಬ್ಬಳ್ಳಿ

ಕಾದಂಬರೀ ಅವಲೋಕನ- ಸಂವಾದ ಕಾರ್ಯಕ್ರಮ

ಕಾದಂಬರೀ ಅವಲೋಕನ- ಸಂವಾದ ಕಾರ್ಯಕ್ರಮ

ಧಾರವಾಡ, 24:  ಈ ಭಾಗದ ಚಿತ್ರಣವೇ ಬದ್ಲಾಗುತ್ತೆ ಅನ್ನೋಮಾತು ಒಬ್ಬರಿಗೂ ಅರ್ಥವಾಗಿಲೇ ಇಲ್ಲೆ ಕಾಣ್ತು. ಅರ್ಥವಾಗುವ ದಿನ ದೂರ ಇಲ್ಲೆ ಆನು ಮಾತಾಡಿದ್ರೆ ಮಳ್‌ಭಟ್ಟ ಅಂತ ಎಳ್ಕೊಂಡು ತಂದು ಹೊರಬಿಡ್ತ. ಆದರೆ ಈ ಸರಕಾರದವರು ಎಲ್ಲರನ್ನೂ ಎಳೆದು ಹೊರಗೆ ಬಿಡೋಕಾಲ ದೂರ ಇಲ್ಲೆ. ಯನ್ನನ್ನೂ ಮಾತ್ರ ಅಲ್ಲ, ನಿಂಗಳೆಲ್ಲರನ್ನೂ ನೆಲ ಬಿಡಿಸಿ, ನೆಲೆ ಚಪ್ಪಿಸ್ತ, ಸರಕಾರವೆಂಬೋ ದೈತ್ಯಶಕ್ತಿಗೆ ದೊಡ್ಡ ಹೆಗಡೆಯೂ ಒಂದೆ, ದನಕಾಯುವ ದ್ಯಾವನೂ ಒಂದೆ. ನೆನಪಿಡಿ ಮುಳುಗಿ ಮೂರಾಬಟ್ಟೆ ಆಗ್ತಿ ಜೋಗ ಪಟ್ಣಾಗ್ತು. ಗಾವುದಕ್ಕೊಂಗು ದೀಪವಾಗ್ತು ಆಕಾಶದ ತುಂಬ ವಿಷದ ಬಳ್ಳಿ ಹಬ್ತು’ ಎಂದು ಕೂಗುತ್ತಲೇ ಇದ್ದ”.  

ಸಾಗರದ ಸೀಮೆಯ ಈ ಅಚ್ಚಗನ್ನಡ ಮಾತುಗಳ ಪುಂಜ ಹವ್ಯಕ ಕನ್ನಡದ ಸವಿಯಿಂದ ತುಂಬಿಕೊಂಡು ಬರೆದಷ್ಟೇ ಸುಲಭವಾಗಿ ಘಟನೆಗಳು ಒಂದನ್ನೊಂದನ್ನು ತೆಕ್ಕೆಗೆ ತೆಗೆದುಕೊಳುತ್ತ ಉಪನದಿಗಳೆಲ್ಲ ಸೇರುತ್ತ ಸೇರುತ್ತ ಸಮುದ್ರ ಸೇರುವಂತೆ ಈ ‘ಪುನರ್ವಸು’ ಬೃಹತ್‌ಕಾದಂಬರಿ ಭರ್ಜರಿ 534 ಪುಟಗಳಲ್ಲಿ ಹೆಣೆದುಕೊಂಡಿದ್ದು ಕೊಂಡುಕೊಂಡಾದರೋ, ಕಸಿದುಕೊಂಡಾದರೋ ಅಥವಾ ಕದ್ದಾರೋ ಒಮ್ಮೆ ಓದಲೇಬೇಕಾದ ವಸ್ತುವಾಗಿದೆ ಎಂದು ಹಿರಿಯ ಚಿಂತಕ ಪ್ರೊ. ಹರ್ಷ ಡಂಬಳ ಅಭಿಪ್ರಾಯ ವ್ಯಕ್ತಪಡಿಸಿದರು. 

ಧಾರವಾಡದ ಸಾಹಿತ್ಯಿಕ ಸಂಘಟನೆ ಅನ್ವೇಷಣ ಕೂಟವು ದಿ: 23ರಂದು ಸಾಧನಕೇರಿಯ ‘ಚೈತ್ರ’ದ ಸಭಾಗೃಹದಲ್ಲಿ ಹಮ್ಮಿಕೊಂಡಿದ್ದ “ಕಾದಂಬರೀ ಅವಲೋಕನ ಮತ್ತು ಸಂವಾದ” ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಬಂದು ಅವರು ಮಾತನಾಡುತ್ತಿದ್ದರು.  

ಅವರು ಮುಂದುವರಿದು ಮಾತನಾಡಿ ಖ್ಯಾತಲೇಖಕ ಡಾ. ಗಜಾನನ ಶರ್ಮಾ, ಬೆಂಗಳೂರು ಅವರು ಅರ್ಥಪೂರ್ಣವಾಗಿ ಚಿತ್ರಿಸಿದ ಈ ಕಾದಂಬರಿಯ ಮೇಲಿನ ಅದರ ಮುಖಪುಟವೇ ಸಾರುತ್ತಿರುವ ಮುಳುಗಿದ್ದು ಭಾರಂಗಿಯೇ, ಭರವಸೆಯೇ? ಬದುಕೆ? ಎನ್ನುವ ಶರಾವತಿ ಜಲವಿದ್ಯುತ್ ಯೋಜನೆಯ ಮುಳುಗಡೆಯ ಪರಿಣಾಮವನ್ನು ಅತ್ಯಂತ ಪರಿಣಾಮಕಾರಿಯಾಗಿ ಅವರು ತೆರೆದಿಟ್ಟರು. 

ಕಾರ್ಯಕ್ರಮವಾದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಡಾ. ವಿ.ಟಿ.ನಾಯಕ ಅವರು ಮಾತನಾಡಿ ಜೀವನಕ್ಕೆ ವಿದ್ಯುತ್ತು ಎಷ್ಟೇ ಅವಶ್ಯವೊ ಅಷ್ಟೇ ಪ್ರಮುಖವಾಗಿ ಶರಾವತಿಯಂಥ ಬೃಹತ್ ಜಲವಿದ್ಯುತ್ ಯೋಜನೆಯಿಂದಾಗುವ ಆಧುನಿಕ ಭ್ರಮೆಗಳು, ಪರೋಕ್ಷವಾಗಿ ಉಂಟಾಗುವ ಮೌಲ್ಯಗಳ ಅಧಃಪತನಗಳು, ಜೀವನದ ವಿಚ್ಛಿದ್ರತೆಗಳನ್ನು ತೀವ್ರವಾಗಿ ಗಮನಿಸಿ ಉದ್ದೇಶದ ಸದ್ಭಳಕೆಯತ್ತ ಲಕ್ಷ್ಯವಿಡಲೇಬೇಕೆಂದರು. 

ನಂತರ ರೋಚಕ ಸಂವಾದ ಜರುಗಿತು. 

ಅನ್ವೇಷಣಾ ಕೂಟದ ಅಧ್ಯಕ್ಷ ನರಸಿಂಹ ಪರಾಂಜಪೆ, ವೆಂಕಟೇಶ ದೇಸಾಯಿ, ರಾಜೀವ ಪಾಟೀಲ ಕುಲಕರ್ಣಿ ಗಣ್ಯರಾದ ಪ್ರೊ. ದುಷ್ಯಂತ ನಾಡಗೌಡ, ಡಾ. ಬಾಳಣ್ಣ ಶೀಗಿಹಳ್ಳಿ, ಡಾ. ಕೃಷ್ಣ ಕಟ್ಟಿ, ಮಹಾಬಲೇಶ್ವರ ಸಿಂದಗಿ, ಡಾ. ದೀಪಕ ಆಲೂರ, ಶ್ರೀನಿವಾಸ ಹುದ್ದಾರ, ಅನಂತ ಸಿದ್ಧೇಶ್ವರ, ಕುಮಾರಸ್ವಾಮಿ ಪುರಾಣಿಕಮಠ, ಎಸ್‌.ವಿ. ದ್ವಾರಪಾಲಕ, ಡಾ.ಅರುಣ ಬಾಬು ಅಂಗಡಿ, ಬದರೀವಿಶಾಲ ಪರ್ವತೀಕರ, ರಮೇಶ ನಾಡಗೀರ, ಎಸ್‌.ಎಮ್‌. ದೇಶಪಾಂಡೆ, ಆರ್‌.ಎಸ್‌. ಗೊಜನೂರ, ಬಿ.ಜಿ. ಗುಂಡೂರ, ಎಂ.ವಿ. ಹೊಸಮನಿ. ಡಾ. ಮಂದಾಕಿನಿ ಪುರೋಹಿತ, ಆರ್‌. ವಿಮಲಾ, ಶೀಲಾ ಚೌಗುಲೆ, ಸರೋಜಾ ಕುಲಕರ್ಣಿ, ಸೀಮಾ ಪರಾಂಜಪೆ ಮುಂತಾದವರು ಉಪಸ್ಥಿತರಿದ್ದರು. 


ಸುದ್ದಿ ಓದಿ