ಕಾಜಲ್ - ಕಿಚ್ಲು ಕಲ್ಯಾಣ
ಮುಂಬೈ, ಅ 30:ಖ್ಯಾತ ನಟಿ ಕಾಜಲ್ ಅಗರ್ವಾಲ್ ಇಂದು ಹಸೆಮಣೆ ಏರಿದ್ದಾರೆ. ಬಹುಕಾಲದ ಗೆಳೆಯ ಗೌತಮ್ ಕಿಚ್ಲು ಜೊತೆ ಕಾಜಲ್ ಶುಕ್ರವಾರ ಸಪ್ತಪದಿ ತುಳಿದಿದ್ದು, ವಾಣಿಜ್ಯ ನಗರಿಯಲ್ಲಿ ನಡೆದ ಸರಳ ಮದುವೆ ಸಮಾರಂಭದಲ್ಲಿ ಕೋವಿಡ್ ಕಾರಣದಿಂದ ಕುಟುಂಬ ಸದಸ್ಯರು, ಆಪ್ತರು ಹಾಗೂ ಹತ್ತಿರದ ಸಂಬಂಧಿಕರು ಮಾತ್ರ ಪಾಲ್ಗೊಂಡಿದ್ದರು.ಮದುವೆ ಸಮಾರಂಭದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಕಳೆದ ಎರಡು ದಿನಗಳಿಂದ ಕಾಜಲ್ ಮನೆಯಲ್ಲಿ ಮದುವೆ ಶಾಸ್ತ್ರಗಳು ಜೋರಾಗಿ ನಡೆದಿದ್ದು, ಹಳದಿ, ಮೆಹಂದಿ ಶಾಸ್ತ್ರಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಕಾಜಲ್ ಕೈ ಹಿಡಿದಿರುವ ಗೌತಮ್ ಕಿಚ್ಲು ಉದ್ಯಮಿಯಾಗಿದ್ದು, ಒಳಾಂಗಣ ವಿನ್ಯಾಸ ಮತ್ತು ಮನೆ ಅಲಂಕಾರಿಕ ಪರಿಕರಗಳನ್ನು ಒದಗಿಸುವ ಇ-ಕಾಮರ್ಸ್ ವೇದಿಕೆಯಾದ ಡಿಸ್ಕರ್ನ್ ಲಿವಿಂಗ್ ಸ್ಥಾಪಕರಾಗಿದ್ದಾರೆ.ನಟಿ ಕಾಜೋಲ್ ಅವರು ಸಿಂಗಮ್, ಮಗಧೀರ, ಕವಚಮ್, ತುಪ್ಪಕ್ಕಿ, ಜಿಲ್ಲಾ, ಟೆಂಪರ್, ಮಿಸ್ಟರ್ ಪರ್ಫೆಕ್ಟ್, ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದು, ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ.
“ಗೌತಮ್ ಕಿಚ್ಲು ಜತೆ ನಾನು ಮದುವೆಯಾಗುತ್ತಿರುವ ವಿಚಾರವನ್ನು ಹಂಚಿಕೊಳ್ಳಲು ಅಪಾರ ಸಂತೋಷವಾಗಿದೆ. ಕೋವಿಡ್ ಕಾರಣದಿಂದ ಸಣ್ಣ, ಖಾಸಗಿ ಸಮಾರಂಭದಲ್ಲಿ ವಿವಾಹ ನಡೆಯುತ್ತಿದೆ. ನಮ್ಮ ಜೀವನವನ್ನು ಒಟ್ಟಿಗೆ ಪ್ರಾರಂಭಿಸಲು ನಾವು ರೋಮಾಂಚನಗೊಂಡಿದ್ದೇವೆ. ಹೊಸ ಪಯಣದ ಆರಂಭದಲ್ಲಿ ನಿಮ್ಮೆಲ್ಲರ ಆಶೀರ್ವಾದ ಬಯಸುತ್ತೇವೆ. ನಿಮ್ಮೆಲ್ಲರ ನಿರಂತರ ಬೆಂಬಲಕ್ಕೆ ಧನ್ಯವಾದಗಳು” ಎಂದು ಹಸೆಮಣೆ ಏರುವ ಮುನ್ನ ಕಾಜೋಲ್ ಅಗರ್ ವಾಲ್ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.