ಕಾಗವಾಡ

ಸಂಘಟಿತರಾಗಿ ಹೋರಾಡಿದಾಗ ಮಾತ್ರ ನ್ಯಾಯ ದೊರೆಯಲು ಸಾಧ್ಯ: ತಳವಲಕರ

ಸಂಘಟಿತರಾಗಿ ಹೋರಾಡಿದಾಗ ಮಾತ್ರ ನ್ಯಾಯ ದೊರೆಯಲು ಸಾಧ್ಯ: ತಳವಲಕರ

ಶೇಡಬಾಳ 24: ನಮ್ಮ ನಮ್ಮಲ್ಲಿನ ಒಳ ಜಗಳ, ಅಸೂಯೆ, ಒಣ ಪ್ರತಿಷ್ಠೆಗಳನ್ನು ಮರೆತು ಡಾ. ಬಾಬಾಸಾಹೇಬ ಅಂಬೇಡಕರ ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಾವೆಲ್ಲರೂ ಸಂಘಟಿತರಾಗಿ ಹೋರಾಡಿದಾಗ ಮಾತ್ರ ನಮ್ಮ ಹೋರಾಟಕ್ಕೆ ನ್ಯಾಯ ದೊರೆಯಲು ಸಾಧ್ಯವೆಂದು ಕಾಗವಾಡ ತಾಲೂಕಾ ದಲಿತ ಮುಖಂಡ ಸಂಜಯ ತಳವಲಕರ ಹೇಳಿದರು. 

ಅವರು ಶುಕ್ರವಾರ ದಿ. 24 ರಂದು ಶೇಡಬಾಳದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ನೂತನ ಕಾಗವಾಡ ತಾಲೂಕಾ ಪದಾಧಿಕಾರಿಗಳ ನೇಮಕ ಆದೇಶ ಪತ್ರಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ನಾವು ಎಲ್ಲಿಯವರೆಗೆ ಒಂದಾಗಿ ಹೋರಾಡುವುದಿಲ್ಲವೋ ಅಲ್ಲಿಯವರೆಗೆ ನಮಗೆ ನ್ಯಾಯ ದೊರೆಯಲು ಸಾಧ್ಯವಿಲ್ಲ. ನೂತನ ಪದಾಧಿಕಾರಿಗಳು ತಮ್ಮ ಹೆಚ್ಚಿನ ಸಮಯವನ್ನು ಸಾರ್ವಜನಿಕರ ಸೇವೆಗಾಗಿ ಮೀಸಲಿಡುವುದರ ಜತೆಗೆ ದಲಿತರ ಮೇಲೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಡಲು ಸದಾ ಮುಂಚೂಣಿಯಲ್ಲಿರುವಂತೆ ಪ್ರೇರೆಪಿಸಿದರು. ಯಾವುದೇ ಮುಲಾಜು, ಒಣ ಪ್ರತಿಷ್ಠೆ, ಆಸೆ ಆಮಿಷಗಳಿಗೆ ಒಳಗಾಗದೇ ಬಡ ಜನರ ದೀನ ದಲಿತರ ಸೇವೆಗಾಗಿ ಸದಾ ಸನ್ನದ್ಧರಾಗಿರುವಂತೆ ಕರೆ ನೀಡಿದರು. 

ಕಾಗವಾಡ ತಾಲೂಕಿನ ದಲಿತರ ಸಂಪೂರ್ಣ ಜವಾಬ್ದಾರಿಯನ್ನು ನಿಮ್ಮ ಹೆಗಲ ಮೇಲೆ ಇರಿಸಲಾಗಿದ್ದು, ಅವರೆಲ್ಲರಿಗೂ ನ್ಯಾಯ ದೊರಕಿಸಿ ಕೊಡುವಂತೆ ಹೇಳಿದರು.  

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಬೆಳಗಾವಿ ಜಿಲ್ಲಾ ಸಂಚಾಲಕರಾದ ಶ್ರೀಕಾಂತ ತಳವಾರ ಅವರು ರಾಜ್ಯ ಸಂಚಾಲಕರಾದ ಡಿ.ಜಿ.ಸಾಗರ ಅವರ ಆದೇಶದಂತೆ ಕಾಗವಾಡ ತಾಲೂಕಾ ಘಟಕದ ಅಧ್ಯಕ್ಷರಾಗಿ ಸಚೀನ ಪೂಜಾರಿ, ಸದಸ್ಯರಾಗಿ ರವಿ ಕಾಂಬಳೆ, ಶ್ರೀನಿವಾಸ ಕಾಂಬಳೆ, ಸಂದೀಪ ಬಿರಣಗಿ, ರಾಜು ಪವಾರ, ರಾಕೇಶ ಸಿಂಗೆ, ರವಿ ಕುರಣೆ, ಸುನೀಲ ಕಾಂಬಳೆ, ಪ್ರಕಾಶ ಕಾಂಬಳೆ, ಅಣ್ಣಾಸಾಬ ಕಾಂಬಳೆ ನೂತನ ಪದಾಧಿಕಾರಿಗಳಾಗಿ ನೇಮಕ ಆದೇಶ ಪತ್ರಗಳನ್ನು ನೀಡಿದರು. 

ಇದೇ ಸಮಯದಲ್ಲಿ ಕಾಗವಾಡ, ಅಥಣಿ, ರಾಯಬಾಗ ತಾಲೂಕಿನ ನೂತನ ಪದಾಧಿಕಾರಿಗಳ ಆದೇಶ ಪತ್ರಗಳನ್ನು ವಿತರಿಸಲಾಯಿತು. 

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಬೆಳಗಾವಿ ಜಿಲ್ಲಾ ಸಂಚಾಲಕರಾದ ಶ್ರೀಕಾಂತ ತಳವಾರ, ದಲಿತ ಮುಖಂಡರುಗಳಾದ ಸಂಜಯ ತಳವಲಕರ, ಮಚ್ಚೇಂದ್ರ ಖಾಂಡೇಕರ, ಪ್ರಲ್ಹಾದ ಪರಾಂಜಪೆ, ಅಮೀನ ಭಾಯಿ ಜಾತಗಾರ, ಸಚೀನ ಪೂಜಾರಿ, ರವಿ ಕಾಂಬಳೆ ಸೇರಿದಂತೆ ಕಾಗವಾಡ, ಅಥಣಿ, ಕುಡಚಿ ತಾಲೂಕಿನ ಅನೇಕ ದಲಿತ ಹಾಗೂ ಅಲ್ಪಸಂಖ್ಯಾತರ ಸಮಾಜದ ಮುಖಂಡರು ಇದ್ದರು. 


ಸುದ್ದಿ ಓದಿ