ಜೀವನಯಾನ ಕವನ ಸಂಕಲನ ಬಿಡುಗಡೆ
ಧಾರವಾಡ 20: ಜೀವನ ವಿಧಾನವನ್ನು ಸಾಧನಾ ಪಥಗಳನ್ನು ಸಾರುವಂತಿವೆ. ಕಲಾವಿದನ ಒಂದು ಚಿತ್ರ, ಒಂದು ಕಲಾಕೃತಿ ನೂರಾರು ನೆನಪುಗಳನ್ನು ಹುಟ್ಟು ಹಾಕಬಲ್ಲವು ಎಂದರು.
ಮುಖ್ಯ ಅತಿಥಿಯಾಗಿದ್ದ ಬಿ. ಮಾರುತಿ ಅವರು ಕಲಾ ಪ್ರದರ್ಶನಗಳು ನಡೆದಾಗ ಮಾತ್ರ ಒಬ್ಬ ಕಲಾವಿದನ ಚಿಂತನೆಗಳು ಸಮಾಜಕ್ಕೆ ತಲುಪಿಸಲು ಸಾಧ್ಯವಾಗುವುದು. ಕಲಾ ಕ್ಷೇತ್ರ ಬೆಳೆಯಬೇಕೆಂದರೆ ಪ್ರದರ್ಶನಗಳು ಹೆಚ್ಚು ಹೆಚ್ಚು ಆಗಬೇಕು. ಅಂದಾಗಲೇ ಕಲೆಯ ಭಿನ್ನ ಶೈಲಿಗಳ ಆಸ್ವಾದಿಸಿ, ಅಂಥ ಕಲೆಗೆ ಪ್ರೋತ್ಸಾಹ ಸಿಗಲು ಸಾಧ್ಯವಾಗುವುದು. ತಾವೇ ಮಾಡಿದ ಫೋಟೋಗ್ರಾಫಿಗೆ ತಾವೇ ಕಾವ್ಯ ಬರೆದರೆ ಹೆಚ್ಚು ಶಕ್ತಿ ಬರುತ್ತದೆ. ಫೋಟೊಗ್ರಾಫಿಗೆ ಚಿತ್ರಕಲೆಗೆ ಅವಿನಾಭಾವ ಸಂಬಂಧ ಇದೆ. ಫೋಟೊಗ್ರಾಪಿ ಬಂದಾಗ ಕಲಾವಿದರ ಅಸ್ತಿತ್ವ ಹೋಗುತ್ತದೆ ಎಂದು ಭಾವಿಸಲಾಗಿತ್ತು ಆದರೆ ಫೋಟೊಗ್ರಾಫಿ ಬಂದದ್ದರಿಂದಲೇ ಹಲವು ಕಲಾ ಮ್ಯೂಸಿಯಂ ಸೃಷ್ಟಿಯಾದವು.
ಒಂದು ಚಿತ್ರಕಲೆಯನ್ನು ಹೇಗೆ ತಾಳ್ಮೆ ಮತ್ತು ಏಕಾಗ್ರತೆಯಿಂದ ಬಿಡಿಸುತ್ತೆವೆಯೋ ಹಾಗೇ ಫೋಟೊಗ್ರಾಫಿ ಮಾಡುವಾಗ ತಾಳ್ಮೆ ಮತ್ತು ಏಕಾಗ್ರತೆ ಇರಬೇಕಾಗುತ್ತದೆ. ಕಲಾಕೃತಿಗಳು ನೋಡುಗನ ಭಾವನೆಗಳನ್ನು ಸೃಷ್ಟಿ ಮಾಡುತ್ತವೆ. ಕಲೆ ಸಮಾಜದ ಸುಧಾರಣೆಗೆ ಸ್ಪಂದನೆ ಮಾಡಿಕೊಡುತ್ತದೆ. ಕಿರಣ ಜತ್ತಿಯವರು ತಮ್ಮದೇ ಚಿತ್ರಕಲೆಯ ಶೈಲಿಯನ್ನು ಸೃಷ್ಟಿಸಿಕೊಂಡಿರುವರು. ಒಳ್ಳೆಯ ಕಲಾಕಾರರಾಗಿ ರೂಪಗೊಂಡಿದ್ದಾರೆ. ಕಲಾವಿದರಿಗಾಗಿಯೇ ಗ್ಯಾಲರಿ ನಿರ್ಮಿಸಿ ದೊಡ್ಡ ವೇದಿಕೆಯನ್ನು ಕಲ್ಪಿಸಿಕೊಟ್ಟದ್ದಾರೆ. ಇದರ ಸದುಪಯೋಗವನ್ನು ನಾವೆಲ್ಲ ಪಡೆದುಕೊಳ್ಳಬೇಕೆಂದು ಬಿ. ಮಾರುತಿ ಹೇಳಿದರು.
ಪುಸ್ತಕ ಪರಿಚಯ ಮಾಡಿಕೊಟ್ಟ ಹಾವೇರಿಯ ಡಾ. ಅಂಬಿಕಾ ಹಂಚಾಟೆ ಅವರು ಖ್ಯಾತ ಛಾಯಾಗ್ರಾಹಕ ಸತ್ಯನ್ ಅವರ ಚಿತ್ರಗಳಿಗೆ ಮರು ಜನ್ಮವನ್ನು ಕವಿ ಕಿರಣ ಜತ್ತಿ ಕೊಟ್ಟಿದ್ದಾರೆ. ಒಪ್ಪಿದ್ದನ್ನು ಅಪ್ಪುವುದೇ ಜೀವನ ಸಂದೇಶ ಈ ಪುಸ್ತಕದ್ದು. ಅತ್ಯಂತ ಸೂಕ್ಷ್ಮಗ್ರಾಹಿಯಾಗಿ ಜೀವನವನ್ನು ನೋಡುವ ವಿಧಾನ ಕವಿಗಿದೆ. ಸತ್ಯನ್ ಕನ್ನಡಿಗರು. ಛಾಯಾಚಿತ್ರ ಗ್ರಹಣಕ್ಕಾಗಿ ಪದ್ಮಶ್ರೀ ಪಡೆದ ಏಕೈಕ ಛಾಯಾಗ್ರಾಹಕ. ಇದು ಕನ್ನಡಿಗರ ಹೆಮ್ಮೆ ಎಂದರು.
ಅಧ್ಯಕ್ಷತೆ ವಹಿಸಿ ಸಂಘದ ಉಪಾಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಮಾತನಾಡುತ್ತಾ, ಧಾರವಾಡ ಬರಿ ಸಾಹಿತಿಗಳ ನಾಡಲ್ಲ, ಕಲಾವಿದರ ಬೀಡೂ ಹೌದು. ಕಲೆಯ ಮೂಲ ಉದ್ದೇಶ ಒಳಗಿನ ಭಾವನೆಗಳಿಗೆ ಸೂಕ್ತ ಆಕೃತಿ ಕೊಟ್ಟು ಹೊರ ಹಾಕುವುದೇ ಆಗಿದೆ. ನಮ್ಮಲ್ಲಿ ಕಲೆಯ ಬಗ್ಗೆ ಪ್ರೀತಿ ಕಡಿಮೆ ಆಗುತ್ತಿದೆ, ಒಂದು ಕಾಲದಲ್ಲಿ ಕಲ್ಲೊಂದನ್ನು ಒಗೆದರೆ ಸಾಹಿತಿಯ ಮನೆಯ ಮೇಲೆ ಬೀಳುತ್ತದೆ ಎಂಬ ಮಾತಿತ್ತು. ಅದು ಬದಲಾಗಿ ಕಲಾವಿದನ ಮನೆಯ ಮೇಲೆ ಬೀಳುತ್ತದೆ ಎಂಬಂತಾಗ ಬೇಕು.
ಜೀವನಯಾನ ಒಂದು ಪ್ರಯೋಗಶೀಲ ಕವನ ಸಂಕಲನ. ಅಂತರ್ ರಾಷ್ಟ್ರೀಯ ಖ್ಯಾತಿಯ ಟ.ಎಸ್. ಸತ್ಯನ್ರ ಛಾಯಾ ಚಿತ್ರಗಳಿಗೆ ಕಿರಣ ಕವಿತೆಗಳನ್ನು ಬರೆಯುವ ಸಾಹಸ ಕೆಲಸ ಮಾಡಿದ್ದಾರೆ. ಚಿತ್ರಗಳು ಭಾರತದ ನಿಜ ದರ್ಶನ ಮಾಡಿಸುತ್ತವೆ. ಕವಿತೆಗಳು ಇಲ್ಲಿ ಬೀಜಭಾವಗಳಾಗಿವೆ. ವಾಸ್ತವತೆ ಇದೆ. ತಾಯಿ ಮಗುವಿನ ಪ್ರೀತಿಯ ಅನೇಕ ಛಾಯಾಚಿತ್ರಗಳು, ಕವಿತೆಗಳು ಓದುಗರನ್ನು ಬಹಳ ಕಾಲ ಕಾಡುತ್ತವೆ ಎಂದು ಪ್ರೊ. ಮಾಲತಿ ಪಟ್ಟಣಶೆಟ್ಟಿ ಹೇಳಿದರು.
ಇನ್ನೋರ್ವ ಖ್ಯಾತ ಕಲಾವಿದ ಲಲಿತ ಕಲಾ ಅಕಾಡೆಮಿ ಸದಸ್ಯ ಕರಿಯಪ್ಪ ಹಂಚಿನಮನಿ, ಹಾವೇರಿ ಸಾಹಿತಿ ಕಲಾ ಬಳಗದ ಎಸ್. ಆರ್. ಹಿರೇಮಠ ಮಾತನಾಡಿದರು. ಈ ಸಂದರ್ಭದಲ್ಲಿ ಕವಿ ಕಿರಣ ಜತ್ತಿ ಮತ್ತು ಅವರ ಪತ್ನಿ ಪ್ರತಿಭಾ ಅವರುಗಳನ್ನು ಸಂಘದಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಕಿರಣ ಜತ್ತಿ ಅವರು ಮಾತನಾಡುತ್ತಾ, ಎಲ್ಲಿಯೊ ಮೂಲೆಯಲ್ಲಿದ್ದ ನನ್ನನ್ನು ನಾಡಿಗೆ ಪರಿಚಯಿಸಿದ ಹಾವೇರಿ ಕಲಾ ಬಳಗ ಮತ್ತು ವಿದ್ಯಾವರ್ಧಕ ಸಂಘಕ್ಕೆ ನನ್ನ ನಮನಗಳನ್ನು ಸದಾ ಕಾಲ ಸಲ್ಲಿಸುವೆ ಎಂದರು. ಸಮಾರಂಭದಲ್ಲಿ ಛಾಯಾಗ್ರಾಹಕ ಕುಮಾರ ಕಾಟೇನಹಳ್ಳಿ, ನೇತ್ರಾ ಅಂಗಡಿ, ಸಂದೀಪ ಕುಲಕರ್ಣಿ, ಕಾವ್ಯಾ ಕುಲಕಲರ್ಣಿ, ಎಸ್.ಬಿ. ಪಂಪಣ್ಣನವರ, ರಾಜೇಂದ್ರ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.
ಆರಂಭದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಕಾರ್ಯಕ್ರಮ ನಿರ್ವಹಿಸಿದರು. ಕೊನೆಯಲ್ಲಿ ಹಾವೇರಿ ಕಲಾ ಬಳಗದ ಸಂಚಾಲಕ ಪೃಥ್ವಿರಾಜ ಬೆಟಗೇರಿ ವಂದಿಸಿದರು. ಹಾವೇರಿ ಮತ್ತು ಬಾಗಲಕೋಟಿ ಕಲಾಭಿಮಾನಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.