ನವ್ಹೆಂಬರ 21ರಂದು ಬೆಳಗಾವಿಯಲ್ಲಿ ಜನ ಸ್ವರಾಜ್ಯ ಸಮಾವೇಶ: ಲಕ್ಷ್ಮಣ ಸವದಿ
ಲೋಕದರ್ಶನ ವರದಿ
ಅಥಣಿ 19: ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಚಿಕ್ಕೋಡಿ ಹಾಗೂ ಬೆಳಗಾವಿಯಲ್ಲಿ ನವ್ಹೆಂಬರ 21 ಭಾನುವಾರದಂದು ಜನ ಸ್ವರಾಜ್ಯ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯುರ್ಪ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೇರಿದಂತೆ ಸಂಪುಟದ ಅನೇಕ ಸಚಿವರು, ಜಿಲ್ಲೆಯ ಶಾಸಕರು ಭಾಗವಹಿಸಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಪರ ಪ್ರಚಾರ ಕಾರ್ಯ ಕೈಗೊಳ್ಳುವರು ಎಂದು ಮಾಜಿ ಡಿಸಿಎಮ್ ಲಕ್ಷ್ಮಣ ಸವದಿ ಹೇಳಿದರು. ಅವರು ಕ್ಷೇತ್ರದ ಜನರ ಸಮಸ್ಯೆ ಆಲಿಸಿದ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದರು.
ಬೆಳಗಾವಿ ಜಿಲ್ಲೆಯ ಸ್ಥಳೀಯ ಸಂಸ್ಥೆ ಸದಸ್ಯರ ಮೂಲಕ ಆಯ್ಕೆಯಾಗುವ ವಿಧಾನ ಪರಿಷತ್ ಚುನಾವಣೆಯಲ್ಲಿ ಇಬ್ಬರು ಅಭ್ಯರ್ಥಿಗಳು ಸ್ಪರ್ಧಿಸುವ ಅವಕಾಶ ಇದ್ದರೂ ಕೂಡ ಬಿಜೆಪಿಯಿಂದ ಸದ್ಯದ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಇವರನ್ನೊಬ್ಬರನೇ ಕಣಕ್ಕಿಳಿಸುವ ನಿರ್ಣಯ ಕೈಗೊಂಡ ಪರಿಣಾಮ ನಾಳೆಯೋಳಗೆ ಮಹಾಂತೇಶ ಕವಟಗಿಮಠ ಅವರ ಹೆಸರು ಅಂತಿಮಗೊಳ್ಳಲಿದೆ ಎಂದ ಅವರು ಚಿಕ್ಕೋಡಿ ಹಾಗೂ ಬೆಳಗಾವಿಯಲ್ಲಿ ನಡೆಯಲಿರುವ ಜನ ಸ್ವರಾಜ ಸಮಾವೇಶದಲ್ಲಿ ಜಿಲ್ಲೆಯ ಗ್ರಾಮ ಪಂಚಾಯತ, ಪಟ್ಟಣ ಪಂಚಾಯತ ಹಾಗೂ ಪುರಸಭಾ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನೀರೀಕ್ಷೆ ಇದೆ ಎಂದು ಹೇಳಿದರು.
ವಿಧಾನ ಪರಿಷತ್ ಚುನಾವಣೆಯ ಇತಿಹಾಸವನ್ನು ಕಳೆದ ವರ್ಷದವರೆಗೂ ಗಮನಿಸಿದಲ್ಲಿ ಬಿಜೆಪಿ ಇಬ್ಬರು ಅಭ್ಯರ್ಥಿಗಳು ಸ್ಪರ್ಧಿಸಿದರೂ ಕೂಡ ಒಬ್ಬ ಅಭ್ಯರ್ಥಿಯ ಗೆಲುವು ಆಗಿದೆ ಹೀಗಾಗಿಯೇ ಬೆಳಗಾವಿ ಜಿಲ್ಲೆಯ ವಿಧಾನ ಪರಿಷತ್ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿಯನ್ನೇ ಕಣಕ್ಕಿಳಿಸಲು ಬಹುತೇಕ ನಿರ್ಧರಿಸಲಾಗಿದೆ ಎಂದ ಅವರು ಕಳೆದ ವರ್ಷ ವಿಧಾನ ಪರಿಷತ್ ಚುನಾವಣೆಯಲ್ಲಿ ಅತೀ ಸುಲಭವಾಗಿಯೇ ಬಿಜೆಪಿ ಅಭ್ಯರ್ಥಿ ಗದ್ದೇ ಗೆಲ್ಲುತ್ತಾರೆ ಎಂದು ಅತೀ ಆತ್ಮ ವಿಶ್ವಾಸ ಹೊಂದಿದ್ದ ಪರಿಣಾಮ ಚುನಾವಣೆಯಲ್ಲಿ ಸ್ವಲ್ಪ ಮಟ್ಟಿಗೆ ನಿರ್ಲಕ್ಷದ ಭಾವ ಬಂದಿತ್ತು ಹೀಗಾಗಿಯೇ ಮಹಾಂತೇಶ ಕವಟಗಿಮಠ ಗೆಲುವಿಗೆ ಪ್ರಯಾಸ ಪಡಬೇಕಾಯಿತು ಆದರೆ ಈ ಬಾರಿ ಚುನಾವಣಾ ಪೂರ್ವದಲ್ಲಿಯೇ ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದೇವೆ ಹೀಗಾಗಿ ನಿಶ್ಚಿತವಾಗಿಯೂ ಮಹಾಂತೇಶ ಕವಟಗಿಮಠ 4500 ಕ್ಕೂ ಹೆಚ್ಚು ಪ್ರಥಮ ಪ್ರಾಶಸ್ತ್ಯ ಮತಗಳನ್ನು ಪಡೆಯುವ ಮೂಲಕ ಮೂರನೇ ಬಾರಿ ಆಯ್ಕೆಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ರಾಜ್ಯದಲ್ಲಿ 25 ಸ್ಥಾನಗಳಿಗೆ ವಿಧಾನ ಪರಿಷತ್ ಚುನಾವಣೆ ನಡೆಯಲಿದ್ದು, ಈ ಪೈಕಿ ಬಿಜೆಪಿ 20 ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಕಣಕ್ಕೀಳಿಸುವುದು ಬಹುತೇಕ ಖಚಿತವಾಗಿದೆ ಎಂದ ಅವರು 20 ಸ್ಥಾನಗಳಲ್ಲಿ ಬಿಜೆಪಿಯ 15 ಅಭ್ಯರ್ಥಿಗಳು ನಿಶ್ಚಿತವಾಗಿ ಗೆಲುವು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು ಅನೇಕ ಕಾರಣಗಳಿಂದ ಕೆಲ ನಗರ ಸಭಾ, ಪುರಸಭಾ, ಪಟ್ಟಣ ಪಂಚಾಯತಗಳಿಗೆ ಅವಧಿ ಮುಕ್ತಾಯಗೊಂಡಿದ್ದರೂ ಕೂಡ ಚುನಾವಣೆ ನಡೆದಿಲ್ಲ ಹೀಗಾಗಿ ರಾಜ್ಯದ ಉಚ್ಚ ನ್ಯಾಯಾಲಯ ಡಿಸೆಂಬರ 31 ರ ಒಳಗಾಗಿ ಚುನಾವಣೆ ನಡೆಸಲು ರಾಜ್ಯ ಚನಾವಣಾ ಆಯೋಗಕ್ಕೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ನಿಗದಿತ ಅವಧಿಯೊಳಗಾಗಿಯೇ ಅಥಣಿ ಸೇರಿದಂತೆ ಬಾಕಿ ಉಳಿದ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ರಾಜ್ಯ ಸರಕಾರವೂ ಕೂಡ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಹೇಳಿದರು.
ನಾನೊಬ್ಬ ವಿಧಾನ ಪರಿಷತ್ ಸದಸ್ಯ ಆದರೂ ಕೂಡ ಅಥಣಿ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬೇರೆ ಬೇರೆ ಇಲಾಖೆಗಳಿಂದ ಅಭಿವೃದ್ಧಿ ಮತ್ತು ಜನಪರ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 100 ಕೋಟಿಗೂ ಹೆಚ್ಚು ಅನುದಾನ ಕೆಲವೇ ದಿನಗಳಲ್ಲಿ ಹರಿದು ಬರಲಿದೆ. ಗ್ರಾಮೀಣ ಪ್ರದೇಶದ ರಸ್ತೆಗಳ ಮೇಲ್ದರ್ಜೆ ಮತ್ತು ಅಭಿವೃದ್ಧಿಗಾಗಿ ಪಂಚಾಯತ ರಾಜ್ಯ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ಮೂಲಕ ಹಂತ ಹಂತವಾಗಿ 50 ಕೋಟಿ ಅನುದಾನ ಎರಡು ಹಂತಗಳಲ್ಲಿ ಮಂಜೂರಾಗಲಿದೆ ಎಂದ ಅವರು ನಾನು ಅಥಣಿ ಕ್ಷೇತ್ರದ ಶಾಸಕನಲ್ಲ ಆದರೂ ಕೂಡ ಅಥಣಿ ಜನರ ಋಣ ತಿರಿಸಲು ಅನುದಾನ ಮಂಜೂರು ಮಾಡಿಕೊಳ್ಳುವ ನಿಟ್ಟಿನಲ್ಲಿ ಯತ್ನ ನಡೆದಿದೆ ಎಂದರು.