ಜಗದ್ಗುರು ಪಂಚಾಚಾರ್ಯರರ ಅಡ್ಡಪಲ್ಲಕ್ಕಿ ಮಹೋತ್ಸವ
ಸಿಂದಗಿ 07: ಪಟ್ಟಣದಲ್ಲಿ ಆದಿ ಜಗದ್ಗುರು ಪಂಚಾಚಾರ್ಯರರ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಸಮ್ಮೇಳನದ ಸರ್ವಾಧ್ಯಕ್ಷ ಜಾಲಹಳ್ಳಿ ಬೃಹನ್ಮಠದ ವಿದ್ಯಾಮಾನ್ಯ ಶಿವಾಭಿನವ ಜಯಶಾಂತಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಭವ್ಯ ಮೆರವಣಿಗೆ ಬುಧವಾರ ವಿಜೃಂಭಣೆಯಿಂದ ಜರುಗಿತು.
ಆದಿ ಜಗದ್ಗುರು ಪಂಚಾಚಾರ್ಯರರ ಯುಗಮಾನೋತ್ಸವ ಹಾಗೂ ಅಖಿಲ ಭಾರತ ವೀರಶೈವ ಶಿವಾಚಾರ್ಯರ ಮಹಾಸಮ್ಮೇಳನದ ನಿಮಿತ್ತ ಹಮ್ಮಿಕೊಳ್ಳಲಾಗಿತ್ತು. ಸ್ಥಳೀಯ ಸಾರಂಗಮಠ-ಗಚ್ಚಿನಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರ ನೇತೃತ್ವ ವಹಿಸಿಕೊಂಡಿದ್ದರು. ಮೆರವಣಿಗೆಯಲ್ಲಿ ಮುತ್ತೈದೆಯರು ಪೂರ್ಣಕುಂಭ, ಕಲಶಗಳೊಂದಿಗೆ ಭಾಗವಹಿಸಿದ್ದರು. ಸಕಲವಾದ್ಯಗಳೊಂದಿಗೆ ಕಲಾವಿದರು ಭಾಗವಹಿಸಿದ್ದರು.
ನಾಡಿನ ವಿವಿಧೆಡೆಯ ಶ್ರೀಗಳ ಮುಂದಾಳತ್ವದಲ್ಲಿ ಅದೊಂದು ವಿಶಿಷ್ಠ ಹಾಗೂ ಐತಿಹ್ಯವಾದಂತಹ ಧರ್ಮ ಜಾಗೃತಿಯ ಪಾದಯಾತ್ರೆ. ಈ ಪಾದಯಾತ್ರೆಯಲ್ಲಿ ಅನೇಕ ಶ್ರೀಗಳು ಮುಂದೆ ಸಾಗುತ್ತಿದ್ದರೆ. ಶಿಷ್ಯ ಬಳಗ ಅವರುಗಳ ಹಿಂದೆ ಹೆಜ್ಜೆ ಹಾಕುತಿತ್ತು. ಆ ಮೂಲಕ ವೀರಶೈವ ಪರಂಪರೆಯನ್ನು ಜಾಗೃತಿಗೊಳಿಸುವ ಮಹತ್ವದಾದ ಮೇರವಣಿಗೆಯಾಗಿತ್ತು.
ಪ್ರತಿದಿನ ಮುಂಜಾನೆ 6ಕ್ಕೆ ಪಟ್ಟಣದ ವಾರ್ಡಗಳಲ್ಲಿ ಶ್ರೀಗಳ ಪಾದಯಾತ್ರೆ ಆಗಮಿಸುತ್ತೋ ಆ ವಾರ್ಡಿನ ಮುತ್ತೈದೆಯರು ತಮ್ಮ ತಮ್ಮ ಮನೆಗಳ ಅಂಗಳವನ್ನು ಸ್ವಚ್ಛಗೊಳಿಸಿ, ರಂಗೋಲಿಯಿಂದ ಅಲಂಕೃತಗೊಳಿಸಿ ಸ್ವಾಗತಿಸುತ್ತಿದ್ದರು. ಪಾದಯಾತ್ರೆ ತಮ್ಮ ಮನೆ ಮುಂಬಾಗಿಲಿಗೆ ಬಂದ ತಕ್ಷಣ ಮಠಾಧೀಶರೆಲ್ಲರಿಗೂ ಸುಮಂಗಲೆಯರು ಭಕ್ತಿಯಿಂದ ಆರತಿ ಬೆಳಗಿ ತಮ್ಮ ಗುರುಭಕ್ತಿಯನ್ನು ಪ್ರದರ್ಶಿಸಿದರು.
ಇದೇ ಸಂದರ್ಭ ಗುರುಕುಲ್ ಭಾಸ್ಕರ್ ಡಾ.ಪ್ರಭುಸಾರಂಗದೇವ ಶ್ರೀಗಳು ಮಾತನಾಡಿ, ಪ್ರತಿಯೊಬ್ಬರು ಧರ್ಮದಿಂದ ನಡೆಯಬೇಕು. ಕಾಯಕ, ನಿಷ್ಠೆ ಮತ್ತು ದಾಸೋಹವನ್ನು ಎಲ್ಲರ ಮನೆಗಳಲ್ಲಿ ಅಳವಡಿಸಿಕೊಳ್ಳಬೇಕು. ಮಕ್ಕಳಿಗೆ ಶಿಕ್ಷಣದ ಜೊತೆಗೆ ಭಾರತೀಯ ಸಂಸ್ಕೃತಿ, ಧರ್ಮದ ಬಗ್ಗೆ ಅರಿವು, ಲಿಂಗಪೂಜೆಯಂತಹ ಸಂಸ್ಕಾರವನ್ನು ಕಲಿಸಬೇಕು. ಕರೆ ನೀಡಿದರು.
ಈ ಪಾಯಾತ್ರೆಯಲ್ಲಿ ಕೊಕಟನೂರ, ದೇವರಹಿಪ್ಪರಗಿ, ರಟಗಲ್, ಕಲಕೇರಿ, ಗೋಲಗೇರಿ, ಕೊಣ್ಣೂರ, ಯಂಕಂಚಿ, ಬಸವನಬಾಗೇವಾಡಿ, ಕನ್ನೋಳ್ಳಿ, ಜಮಖಂಡಿ, ಕೆರೂಟಗಿ, ಕಲಬುರಗಿ, ಇಂಡಿ, ಡೋಣುರ, ಜೈನಾಪೂರ, ಮೈಂದರಗಿ, ಬೆನಕನಹಳ್ಳಿ, ನಾಗಪೂರ, ಶಿರಶ್ಯಾಡ, ಕಡಕೋಳ, ಬೆಂಗಳೂರು ಸೇರಿದಂತೆ ನಾಡಿನ ವಿವಿಧ ಮಠಾಧಿಪತಿಗಳು ಮೇರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಅಪಾರ ಭಕ್ತ ಸಮೂಹವು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.