ಜೆಡಿಎಸ್ ಮನ್ವಂತರ ಆರಂಭ : ಜಿಲ್ಲೆಯಲ್ಲಿ ಬಲಿಷ್ಠವಾಗಲಿದೆ ಜೆಡಿಎಸ್
ಗುಳೇದಗುಡ್ಡ ನವೆಂಬರ್ 03: ಬಿಜೆಪಿ ಹಾಗೂ ಕಾಂಗ್ರೆಸ್ಸಿನಲ್ಲಿ ಉಸಿರುಗಟ್ಟುವ ವಾತಾವರಣದಿಂದ ಬೇಸತ್ತ ಕಾಂಗ್ರೆಸ್ ಹಾಗೂ ಬಿಜೆಪಿಯ ನೂರಾರು ಕಾರ್ಯಕರ್ತರು, ಮುಖಂಡರು ಜೆಡಿಎಸ್ ತತ್ವ, ಸಿದ್ಧಾಂತಗಳಿಗೆ ಮನಸೋತು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ. ಹೀಗಾಗಿ ಜಿಲ್ಲೆಯಾದ್ಯಂತ ಜೆಡಿಎಸ್ ಪಕ್ಷ ಬಲಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಜೆಡಿಎಸ್ ಮನ್ವಂತರ ಆರಂಭವಾಗಲಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಹಣಮಂತ ಮಾವಿನಮರದ ಹೇಳಿದರು.
ಬಾದಾಮಿ ಮತಕ್ಷೇತ್ರದ ಕುಟಕನಕೇರಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ವಿವಿಧ ಸಮುದಾಯಗಳ ಮುಖಂಡರು, ಕಾರ್ಯಕರ್ತರು ಜೆಡಿಎಸ್ ಪಕ್ಷಕ್ಕೆ ಬರುತ್ತಿದ್ದಾರೆ. ಇದರಿಂದ ಜೆಡಿಎಸ್ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ. ಮುಂಬರುವ ಎಲ್ಲ ಚುನಾವಣೆಗಳಲ್ಲಿ ಪಕ್ಷ ಅಭೂತಪೂರ್ವ ಯಶಸ್ಸು ಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿದು ರೈತರ, ಕಾರ್ಮಿಕರ, ಬಡವರ ಅಭಿವೃದ್ಧಿಗೆ ಪಕ್ಷ ಶ್ರಮಿಸಲಿದೆ. ಪಕ್ಷದ ವರಿಷ್ಠ ದೇವೇಗೌಡ ಅವರು ಪ್ರಧಾನಿಗಳಾಗಿದ್ದಾಗ ಕೃಷ್ಣಾ ಮೇಲ್ದಂಡೆ ಯೋಜನೆ ಜಾರಿಗೊಳಿಸಿದರು. ಮಹದಾಯಿ ಯೋಜನೆ ಕೈಗೊಂಡರು. ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಕೊಡುಗೆ ಸಲ್ಲಿಸಿದ್ದಾರೆ. ಎಚ್.ಡಿ.ಕುಮಾರಸ್ವಾಮಿಯವರು ಅನೇಕ ಜನಪರ ಯೋಜನೆ ಜಾರಿಗೊಳಿಸಿದ್ದಾರೆ. 2023 ರ ವಿಧಾನಸಭಾ ಚುನಾವಣೆಗೆ ನಿಮ್ಮೆಲ್ಲರ ಆಶೀರ್ವಾದದಿಂದ ಬಾದಾಮಿ ಮತಕ್ಷೇತ್ರದಿಂದ ಶಾಸಕನಾಗುವಂತೆ ಮಾಡಿದರೆ, ತಮ್ಮ ಸೇವೆ ನಿರಂತರ ಮಾಡುವೆ. ಜಿಲ್ಲೆಯಲ್ಲಿ ಪಕ್ಷ ಬಲಪಡಿಸುವೆ ಎಂದರು.
ಇದೇ ಸಂದರ್ಭದಲ್ಲಿ ನಿವೃತ್ತ ಪಿಡಿಓ ವಿ.ಕೆ.ಹುಲ್ಲೂರ ಪಕ್ಷಕ್ಕೆ ಸೇರ್ಪಡೆಯಾಗಿ ಮಾತನಾಡಿದರು. ಬಿ.ಎಸ್.ಪಡತಪ್ಪನ್ನವರ್, ಮಲ್ಲಪ್ಪ ಉಳ್ಳಾಗಡ್ಡಿ, ಅಬ್ದುಲ್ಸಾಬ ಬಾಗವಾನ, ಮೈಬೂಬಸಾಬ ಬುಕ್ಕಟಗೇರಿ, ಮರಿಯಪ್ಪ ಮಾದರ, ಮಹಗುಂಡಪ್ಪ ಮಾದರ, ತಿಪ್ಪಣ್ಣ ಮಂತ್ರಿ ಸೇರಿದಂತೆ ನೂರಾರು ಜನ ಬೇರೆಪಕ್ಷ ತೊರೆದು ಜೆಡಿಎಸ್ ಸೇರ್ಪಡೆಯಾದರು. ಇವರ ಕೈಗೆ ಜೆಡಿಎಸ್ ಪಕ್ಷದ ಧ್ವಜ ನೀಡಿ ಮಾವಿನಮರದ ಸ್ವಾಗತಿಸಿಕೊಂಡರು.
ಕಾರ್ಯಕ್ರಮದಲ್ಲಿ ಗುಳೇದಗುಡ್ಡ ಪುರಸಭಾ ಸದಸ್ಯ ಸಂತೋಷ ನಾಯನೇಗಲಿ, ನಂದನಗೌಡ ಕೋಟಿ, ಬಸಪ್ಪ ಮೆಣಸಗಿ, ಹುಚ್ಚಪ್ಪ ಹುಲ್ಲನ್ನವರ್, ಮಂಜು ತೋಟದ, ಶರಣಪ್ಪ ಮವಿನಮರದ, ಚಂದ್ರು ಸೂಡಿ ಹಾಗೂ ಇತರರು ಪಾಲ್ಗೊಂಡಿದ್ದರು.