ಹಾಳೆ ಕೊಟ್ಟ ಸದಸ್ಯ, ಜೇಬಿಗೆ ಹಾಕಿದ ಸಿದ್ದರಾಮಯ್ಯ!
ಗುಳೇದಗುಡ್ಡ 11: ಸೋಮವಾರ ದಿ. 9ರಂದು ಗುಳೇದಗುಡ್ಡ ಪುರಸಭೆಗೆ ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯನವರು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಚುನಾವಣೆಗೆ ಮತ ಚಲಾಯಿಸಲು ಆಗಮಿಸಿದ ಸಂದರ್ಭದಲ್ಲಿ ಪುರಸಭೆ ಜೆಡಿಎಸ್ ಸದಸ್ಯ ಉಮೇಶ ಹುನಗುಂದ ತಮ್ಮ ಜೇಬಿನಲ್ಲಿದ್ದ ಹಾಳೆಯೊಂದನ್ನು ಸಿದ್ದರಾಮಯ್ಯನವರಿಗೆ ನೀಡಿದ ಘಟನೆ ನಡೆಯಿತು.
ಶಾಸಕರಿಗೆ ಹಾಳೆ ಕೊಟ್ಟ ಸದಸ್ಯ : ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯನವರು ಸರಿಯಾಗಿ 2 ಗಂಟೆಗೆ ಪುರಸಭೆ ಸಭಾಭವನಕ್ಕೆ ಆಗಮಿಸಿದಾಗ ಸದಸ್ಯರು ಒಬ್ಬೊಬ್ಬರಾಗಿ ಸಭೆಗೆ ಆಗಮಿಸುತ್ತಿದ್ದರು. ಅವರಿಗಾಗಿಯೇ ಮೀಸಲಾಗಿಟ್ಟಿದ್ದ ಆಸನದಲ್ಲಿ ಶಾಸಕ ಸಿದ್ದರಮಯ್ಯನವರು ಕೂಡುತ್ತಿದ್ದಂತೆ, ಸಮಯ ನೋಡಿ, ಸಭೆಗೆ ಆಗಮಿಸಿದ್ದ ಸದಸ್ಯ ಜೇಬಿನಿಂದ ಹಾಳಿಯೊಂದನ್ನು ತೆಗೆದು ಶಾಸಕರ ಕೈಗೆ ನೀಡಿದರು. ಸಭೆಯಲ್ಲಿ ಇನ್ನೂ ಯಾವ ಗದ್ದಲದ ವಾತಾವರಣವೂ ಇಲ್ಲದ ಕಾರಣ ಶಾಸಕರು ಹಾಳೆ ಕಡೆ ಗಮನಹರಿಸಿ, ಕುತೂಹಲದಿಂದ ಸದಸ್ಯರ ಮುಖ ನೋಡಿದರು. ಅದಕ್ಕೆ ಸದಸ್ಯ ಉಮೇಶ ಹುನಗುಂದ, ಸಾಹೇಬರೇ ಇದು ಗುಳೇದಗುಡ್ಡ ಪಟ್ಟಣದ ಸಮಸ್ಯೆಗಳ ಪಟ್ಟಿ. ಇವುಗಳನ್ನು ಗಮನಿಸಿ ದಯವಿಟ್ಟು ಬಗೆಹರಿಸಿ ಎಂದರು.
ಹಾಳೆ ಗಮನಿಸಿದ ಸಿದ್ದರಾಮಯ್ಯ: ಸದಸ್ಯ ನೀಡಿದ ಹಾಳೆಯನ್ನು ಕುತುಹಲದಿಂದ ಸಿದ್ದರಾಮಯ್ಯನವರು ತೆಗೆದು ನೋಡತೊಡಗಿದರು. ಅದರಲ್ಲಿ ಸುಮಾರು 10 ಸಮಸ್ಯಗಳನ್ನು ಬರೆಯಲಾಗಿತ್ತು. ಪುರಸಭೆಗೆ ಸಿಬ್ಬಂದಿ ಕೊರತೆಯಿದೆ. ಮುಖ್ಯಾಧಿಕಾರಿ, ಜೆಇ, ಮ್ಯಾನೇಜರ್ ಇಲ್ಲ, ಗಾಂಧಿ ಭವನ ಕೆಲಸ ಅರ್ಧಕ್ಕೆ ನಿಂತಿದೆ ಪೂರ್ಣ ಆಗಬೇಕು, ಕಂದಗಲ್ ಹಣಮಂತರಾಯ ಭವನ ಅರ್ಧಕ್ಕೆ ನಿಂತಿದೆ ಪೂರ್ಣ ಆಗಬೇಕು. ಊರಿನ ಹಳ್ಳ ಸ್ವಚ್ಚ ಮಾಡಿಸಬೇಕು, ಊರಲ್ಲಿ ರಸ್ತೆ ಮೇಲೆ ಸದಾ ನೀರು ಹರಿಯುತ್ತದೆ. ನೀರು ಪೋಲಾಗುತ್ತಿದೆ ಮತ್ತು ರಸ್ತೆ ಹಾಳಾಗುತ್ತಿವೆ ದುರಸ್ತಿ ಕಾರ್ಯವಾಗಬೇಕು. 24*7 ನೀರಿನ ಮೂರು ವಲಯ ಮಾಡಿದ್ದು ಅದರಲ್ಲಿ 2 ವಲಯ ಕೆಲಸವಾಗಿದೆ. ಇನ್ನೂ ಒಂದು ವಲಯ ಕೆಲಸವಾಗಿಲ್ಲ. ಊರಲ್ಲಿ ಬೀದಿ ಲೈಟ್ ಸರಿಯಾಗಿ ಹತ್ತುವುದಿಲ್ಲ, ಊರಿನ ಸ್ವಚ್ಚತಾ ಕಾರ್ಯ ಸರಿಯಾಗಿ ಆಗುತ್ತಿಲ್ಲ. ಊರಲ್ಲಿ 9 ಕುಡಿಯುವ ನೀರಿನ ಫಿಲ್ಟರ್ ಇದ್ದೂ ಅವುಗಳಲ್ಲಿ 2 ಸರಿಯಾಗಿ ಕೆಲಸ ಮಾಡುತ್ತಿದ್ದೂ ಉಳಿದ 7ಫಿಲ್ಟರ್ ಬಂದ್ ಆಗಿವೆ. ಊರಲ್ಲಿ ಮನೆ ಕಟ್ಟುವವರು ಪುರಸಭೆಯಿಂದ ಪರ್ಮಿಷನ್ ತಗೋಳಲ್ಲ ಇದಕ್ಕೆ ಸಿಬ್ಬಂದಿ ಕಾರಣ. ಹೀಗೆ 10 ಸಮಸ್ಯೆಗಳ ಪಟ್ಟಿ ನೀಡಿದ್ದು ಓದಿದ ಶಾಸಕರು, ಇವು ಗುಳೇದಗುಡ್ಡ ಸಮಸ್ಯೆಗಳೇ? ಎಂದು ಸದಸ್ಯ ಉಮೇಶ ಹುನಗುಂದ ಅವರಿಗೆ ಕೇಳಿದರು. ಹೌದು ಸರ್ ಅಂತ ಅವರು ಅಂದಾಗ ಹಾಳೆಯನ್ನು ಮಡಿಚಿ ತಮ್ಮ ಜೇಬಿನಲ್ಲಿ ಇಟ್ಟುಕೊಂಡರು.
•ನಾನು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಬಳಿಕ ಎಲ್ಲರ ಸಮಕ್ಷಮ ಈ ಪಟ್ಟಿ ಓದಬೇಕೆಂದಿದ್ದೆ.ಆದರೆ ಶಾಸಕರು ಯಾವ ಗದ್ದಲವಿಲ್ಲದೇ ನಿವಾಂತವಾಗಿ ಕುಳಿತಿದ್ದರಿಂದ ಅವರ ಕೈಗೆ ನಾನು ಲಿಸ್ಟ್ ಮಾಡಿದ್ದ ಸಮಸ್ಯೆಗಳ ಪಟ್ಟಿ ಅವರ ಹತ್ತಿರ ಹೋಗಿ ಕೋಟ್ಟೆ. ಅವರು ಅವುಗಳನ್ನು ಓದಿದರು. ಸರಿಪಡಿಸುವುದಾಗಿ ಪುನಃ ಹೆಳಿದರು. ಖುಷಿಯಾಯಿತು. ಕೆಲಸಗಳಾದರೆ ಅಷ್ಟೇ ಸಾಕು—ಉಮೇಶ ಹುನಗುಂದ ಪುರಸಭೆ ಸದಸ್ಯ, ಗುಳೇದಗುಡ್ಡ.