ಮುಂಗಾರು ಮಳೆ ಅನಂತರವೇ ಬಿತ್ತನೆ ಮಾಡಬೇಕೆಂದು ಮನವಿ
ರಾಣೆಬೆನ್ನೂರ 28: ಬಹುತೇಕವಾಗಿ ತಾಲೂಕಿನಾದ್ಯಂತ ಎರಡು ಉತ್ತಮ ಮಳೆಯಾಗಿದ್ದರೂ ಸಹ ಇದೀಗ ಭಿತ್ತನೆಗೆ ಸೂಕ್ತವಾಗಿಲ್ಲದ ಕಾರಣ ಜೂನ ಆರಂಭಕ್ಕೆ ಮುಂಗಾರು ಪ್ರವೇಶವಿರುವುದರಿಂದ ಭಿತ್ತನೆಗೆ ಮುಂದಾಗಬೇಕು ಎಂದು ಶಾಸಕ ಪ್ರಕಾಶ್ ಕೋಳಿವಾಡ ಹೇಳಿದರು. ಸೋಮವಾರದಂದು ಸುದ್ದಿಗಾರರೊಂದಿಗೆ ಮಾತನಾಡಿದರು. ತಾಲೂಕಿನಲ್ಲಿನ ಕೆಲಭಾಘಳಲ್ಲಿ ರೈತರು ಈಗಾಗಲೇ ಭಿತ್ತನೆಯಲ್ಲಿ ತೊಡಗಿದ್ದು, ಈ ಸಂದರ್ಭದಲ್ಲಿ ಭಿತ್ತನೆ ಮಾಡುವುದರಿಂದ ಸರಿಯಾದ ಇಳುವರಿ ಬರುವುದಿಲ್ಲ. ಕಾರಣ ಮುಂಗಾರು ಮಳೆ ಅನಂತರವೇ ಬಿತ್ತನೆ ಮಾಡಬೇಕೆಂದು ರೈತರಲ್ಲಿ ವಿನಂತಿಸಿದರು.
ತಾಲೂಕಿನಲ್ಲಿ ರೈತರಿಗೆ ಬೀಜ ಗೊಬ್ಬರದ ಕೊರತೆ ಇಲ್ಲ, ರೈತರು ಆತಂಕ ಪಡದೆ ಬಿತ್ತನೆಯ ಸಿದ್ಧತೆಗೆ ಮುಂದಾಗಬೇಕು ಎಂದರು. ತಾಲೂಕಿನಲ್ಲಿನ ಕೆಲ ಖಾಸಗಿ ಅಂಗಡಿಯವರು ಅನಧೀಕೃತ ಬೀಜ ಹಾಗೂ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದು, ಅವರ ಮೇಲೆ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲು ಈಗಾಗಲೇ ಕೃಷಿ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಕೋಳಿವಾಡ್ ಹೇಳಿದರು. ಬೀಜ ಹಾಗೂ ಗೊಬ್ಬರ ಮಾರಾಟ ಮಾಡುವ ಅಂಗಡಿಗಳ ಮುಂದೆ ದರ ಮತ್ತು ಸಂಗ್ರಹದ ವಿವರಣೆಯ ನಾಮಫಲಕ ಕಡ್ಡಾಯವಾಗಿ ಹಾಕಬೇಕು.
ಇಲ್ಲವಾದರೆ ಕ್ರಮ ಜರುಗಿಸಲಾಗಿವುದು ಎಂದು ಹೇಳಿದರು.2024-25 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮೇ-ತಿಂಗಳ ವರೆಗೆ 135 ಮಿ.ಮೀ ವಾಡಿಕೆ ಮಳೆ ಇದ್ದು, ಇಲ್ಲಿಯವರೆಗೆ 172.12 ಮಿ.ಮೀ ಮಳೆ ಆಗಿದೆ. ರೈತರು ಭೂಮಿ ಸಿದ್ಧತೆ ಕಾರ್ಯ ಪ್ರಗತಿಯಲ್ಲಿದ್ದು, ಹವಾಮಾನ ಇಲಾಖೆ ಮುನ್ಸೂಚನೆಯಂತೆ ಜೂನ್ ತಿಂಗಳ ಮೊದಲನೆ ವಾರ ವಾಡಿಕೆಯಂತೆ ಮುಂಗಾರು ಆರಂಭವಾಗಲಿದೆ. ಮುಂಗಾರು ಹಂಗಾಮಿನಲ್ಲಿ ಬಿತ್ತನೆಗಾಗಿ 7780 ಹೇಕ್ಟರ ಭತ್ತ, 42900ಹೆಕ್ಟೇರ ಗೋವಿನಜೋಳ, 615 ಹೇಕ್ಟರ್ ತೊಗರಿ, 1350 ಹೇಕ್ಟರ್ ಶೇಂಗಾ, 575 ಹೇಕ್ಟರ್ ಹತ್ತಿ, 570 ಹೇಕ್ಟರ್ ಸೋಯಾಬಿನ್ 150 ಹೆಕ್ಟ ಹೆಸರು ಮತ್ತು 1206 ಹೇಕ್ಟರ್ ಇತರೆ ಬೆಳೆಗಳು ಸೇರಿದಂತೆ ಒಟ್ಟಾರೆ 55,146ಹೇಕ್ಟರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ ಎಂದರು.
ಈಗಾಗಲೇ 350ಕ್ವಿಂಟಾಲ್ ಭತ್ತ, 1500ಕ್ವಿಂಟಾಲ್ ಗೋವಿನಜೋಳ, 90ಕ್ವಿಂಟಾಲ್ ಶೇಂಗಾ, 180ಕ್ವಿಂಟಾಲ್ ತೊಗರಿ, 430ಕ್ವಿಂಟಾಲ್ ಸೋಯಾಅವರೆ ಬಿತ್ತನೆ ಬೀಜಗಳ ಬೇಡಿಕೆ ಸಲ್ಲಿಸಿದ್ದು. ಈಗಾಗಲೇ ಬೇಡಿಕೆಗೆ ತಕ್ಕಂತೆ ದಾಸ್ತಾನು ಕಾರ್ಯ ಪ್ರಗತಿಯಲ್ಲಿದ್ದು, ಇಲ್ಲಿಯವರೆಗೆ ಹೈ.ಗೋವಿನಜೋಳ 414.ಕ್ವಿಂಟಾಲ್, ಶೇಂಗಾ 36ಕ್ವಿಂಟಾಲ್, ಭತ್ತ 57.5ಕ್ವಿಂಟಾಲ್, ತೊಗರಿ 96.4ಕ್ವಿಂಟಾಲ್, ಹೆಸರು 26.6ಕ್ವಿಂಟಾಲ್, ಸೋಯಾಬೀನ್ 137.5ಕ್ವಿಂಟಾಲ್ ಬಿತ್ತನೆ ಬೀಜಗಳು ದಾಸ್ತಾನು ಇದೆಎಂದರು. ತಾಲ್ಲೂಕಿನ ರೈತ ಸಂಪರ್ಕ ಕೇಂದ್ರ ರಾಣೀಬೆನ್ನೂರು, ಮೆಡ್ಲೇರಿ ಮತ್ತು ಕುಪ್ಪೇಲೂರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಾದ ಸುಣಕಲ್ಲಬಿದರಿ ಮತ್ತು ಹರನಗಿರಿ ಹಾಗೂ ಹೆಚ್ಚುವರಿ ಕೇಂದ್ರಗಳಾದ ಚಳಗೇರಿ ಮತ್ತು ಹಲಗೇರಿಗಳನ್ನೊಳಗೊಂಡಂತೆ ಒಟ್ಟು 7 ಬಿತ್ತನೆ ಬೀಜ ವಿತರಣಾ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳ ವಿತರಣೆಗೆ ಕ್ರಮಕೈಗೊಳ್ಳಲಾಗಿದೆ ಎಂದರು.ರಸಗೊಬ್ಬರಕ್ಕೆ ಸಂಬಂಧಿಸಿದಂತೆ 10260ಟನ್ ಯೂರಿಯಾ, 3548ಟನ್ ಡಿ.ಎ.ಪಿ, 516ಟನ್ ಎಂ.ಓ.ಪಿ. 9631ಟನ್ ಕಾಂಪ್ಲೆಕ್ಸ್ ಮತ್ತು 270ಟನ್ ಎಸ್.ಎಸ್.ಪಿ ಬೇಡಿಕೆ ಇದ್ದು ಹಂತ ಹಂತವಾಗಿ ಬಿತ್ತನೆಗೆ ತಕ್ಕಂತೆ ರಸಗೊಬ್ಬರ ಪೂರೈಕೆಗೆ ಕ್ರಮಕೈಗೊಳ್ಳಲಾಗಿದೆ. ಇಲ್ಲಿಯವರೆಗೆ 3113ಟನ್ ಯೂರಿಯಾ, 953ಟನ್ ಡಿ.ಎ.ಪಿ, 80ಟನ್ ಎಂ.ಓ.ಪಿ, 1932ಟನ್ ಕಾಂಪ್ಲೇಕ್ಸ್ ಮತ್ತು 45ಟನ್ ಎಸ್.ಎಸ್.ಪಿ ರಸಗೊಬ್ಬರ ಸರಬರಾಜು ಆಗಿದ್ದು, ಇಲ್ಲಿಯವರೆಗೆ 407ಟನ್ ಯೂರಿಯಾ, 705ಟನ್ ಡಿ.ಎ.ಪಿ, 15ಟನ್ ಎಂ.ಓ.ಪಿ, 379ಟನ್ ಕಾಂಪ್ಲೇಕ್ಸ್ ಮತ್ತು 15ಟನ್ ಎಸ್.ಎಸ್.ಪಿ ರಸಗೊಬ್ಬರ ವಿತರಣೆಯಾಗಿದೆ ಎಂದರು.
ಸಧ್ಯ 2706ಟನ್ ಯೂರಿಯಾ, 248ಟನ್ ಡಿ.ಎ.ಪಿ, 65ಟನ್ ಎಂ.ಓ.ಪಿ, 1553ಟನ್ ಕಾಂಪ್ಲೆಕ್ಸ್ ಮತ್ತು 30ಟನ್ ಎಸ್.ಎಸ್.ಪಿ ರಸಗೊಬ್ಬರ ದಾಸ್ತಾನು ಇದೆ. ರಸಗೊಬ್ಬರ ಕೊಳ್ಳಲು ರೈತರು ಕಡ್ಡಾಯವಾಗಿ ಹಿಡುವಳಿದಾರರ ಆಧಾರ ಕಾರ್ಡ್ ತೆಗೆದುಕೊಂಡು ಖಾಸಗಿ ಕೃಷಿ ಪರಿಕರ ಮಾರಾಟಗಾರರಿಂದ ಮತ್ತು ಸೊಸೈಟಿಗಳ ಮುಖಾಂತರ ರಸಗೊಬ್ಬರ ಪಡೆಯಬಹುದು ಎಂದರು.ರೈತರು ಡಿ.ಎ.ಪಿ ರಸಗೊಬ್ಬರ ಬದಲಾಗಿ ಅಥವಾ ಪೂರಕವಾಗಿ 20:20:0:13, 15:15:15, 10:26:26, 16:20:0:13, 28:28:0, 13:40:13, 12:32:16 ರಸಗೊಬ್ಬರಗಳನ್ನು ಬಳಸಿಕೊಳ್ಳಬೇಕು ಎಂದರು.ಪತ್ರಿಕಾಗೋಷ್ಠಿಯಲ್ಲಿ ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ಸಹಾಯಕ ನಿರ್ದೇಶಕರಾದ ಶಾಂತಮಣಿ, ರೇವಣಸಿದ್ದನಗೌಡ, ರವೀಂದ್ರಗೌಡ ಪಾಟೀಲ್ ಮಂಜಣ್ಣ ಮಾಗನೂರ, ಶಾರುಖಾನ್ ಕಾಬೂಲಿ, ಇಕ್ಬಾಲ್ ಸಾಬ್ ರಾಣಿಬೆನ್ನೂರು ಇದ್ದರು