ವಸತಿ ರಹಿತ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ
ಕಾಗವಾಡ 17: ಸಮೀಪದ ಉಗಾರ ಬಿಕೆ ಗ್ರಾಮದ ಪದ್ಮಾವತಿ ದೇವಸ್ಥಾನ ಆವರಣದಲ್ಲಿ ಶುಕ್ರವಾರ ದಿ16ರಂದು ಜಿಪಂ, ತಾಪಂ ಮತ್ತು ಗ್ರಾಪಂ ಸಂಯುಕ್ತಾಶ್ರಯದಲ್ಲಿ ಸನ್ 2021-22ನೇ ಸಾಲಿನ ಬಸವ ಯೋಜನೆಯಲ್ಲಿ ಮಂಜೂರಾದ ವಸತಿ ರಹಿತ ಅರ್ಹ 48ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣಾ ಸಮಾರಂಭ ಜರುಗಿತು.
ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿ ಮಾತನಾಡಿದ ಪಿಎಲ್ಡಿ ಬ್ಯಾಂಕಿನ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡರಾದ ಶೀತಲ ಪಾಟೀಲ ಶಾಸಕರ ವಿಶೇಷ ಕಾಳಜಿ ಹಾಗೂ ಗ್ರಾಪಂ ಸದಸ್ಯರು ನಿಷ್ಠೆ, ಪ್ರಾಮಾಣಿಕ, ನಿಸ್ವಾರ್ಥ ಪ್ರಯತ್ನ ಹಾಗೂ ಅಧಿಕಾರಿಗಳ ಇಚ್ಛಾಸಕ್ತಿಯ ಫಲವಾಗಿ ಗ್ರಾಮದಲ್ಲಿ 48 ನಿವೇಶನ ರಹಿತರಿಗೆ ಬೇಗ ಸೂರು ಕಲ್ಪಿಸುವಲ್ಲಿ ಯಶಸ್ವಿಯಾಗಿರುವುದು ಸಂತಸದ ಸಂಗತಿ ಎಂದ ಅವರು ಗ್ರಾಪಂ ಸದಸ್ಯರು ಯಾರ ಬಳಿಯು ಹಣದ ಆಮಿಸೆ ಮಾಡದೆ ನಿಜವಾದ ಫಲಾನುಭವಿಗಳನ್ನು ಗುರುತಿಸಿ ಮನೆ ಮಂಜೂರು ಮಾಡಿಸಿದ್ದಾರೆ. ನೆರೆ ಹಾವಳಿಯಿಂದ ಬಹಳ ಜನರಿಗೆ ಅನ್ಯಾಯವಾಗಿದೆ. ಇನ್ನೂ 100 ಮನೆ ಮಂಜೂರಾತಿ ಅನುಮೋದನೆಗಾಗಿ ಕಳುಹಿಸಲಾಗಿದೆ. ಮನೆ ಬಂದ ತಕ್ಷಣ ನಿಜವಾದ ಬಡವರನ್ನು ಗುರುತಿಸಿ ಅವರಿಗೆ ನೀಡಲಾಗುವದು ಎಂದು ತಿಳಿಸಿದರು.ಗ್ರಾಪಂ ಅಧ್ಯಕ್ಷೆ ಭುಜಗೌಡ ಪಾಟೀಲ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪಿಡಿಓ ಬಾಬು ಐತವಾಡೆ, ಗ್ರಾಪಂ ಸದಸ್ಯರಾದ ಶ್ರಾವಣ ಗೋಂಧಳೆ, ಅಸ್ಲಾಂ ಜಮಾದಾರ, ಅಪ್ಪಾಸಾಬ ಚೌಗಲಾ ಮತ್ತಿತರರು ಉಪಸ್ಥಿತರಿದ್ದರು.