ದೈಹಿಕ ಬೆಳವಣಿಗೆಗೆ ಅಯೋಡಿನ್ ಅತ್ಯವಶ್ಯಕ: ಅಂಬಲಗಿ
ಇಂಡಿ: ಮಾನವನ ಉತ್ತಮ ಆರೋಗ್ಯಕ್ಕೆ ಅಯೋಡಿನ್ ಯುಕ್ತ ಉಪ್ಪು ಅತ್ಯಂತ ಪೂರಕವಾಗಿದ್ದು, ಅದನ್ನೇ ಬಳೆಕೆ ಮಾಡಲು ಪ್ರತಿಯೊಬ್ಬರು ಮುಂದಾಗಬೇಕು ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಸುನಂದ ಅಂಬಲಗಿ ಹೇಳಿದರು.
ಶುಕ್ರವಾರ ತಾಲೂಕಿನ ಮಾವಿನಹಳ್ಳಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಅಯೋಡಿನ್ ಯುಕ್ತ ಉಪ್ಪು ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಯೋಡಿನ್ ಯುಕ್ತ ಉಪ್ಪು ನಿಮ್ಮ ಮಕ್ಕಳ ಹಾಗೂ ಕುಟುಂಬದ ಆರೋಗ್ಯ ಸಂರಕ್ಷಕ. ಮಾನಸಿಕ, ದೈಹಿಕ ಬೆಳವಣಿಗೆಗೆ ಅಯೋಡಿನ್ ಅತ್ಯವಶ್ಯಕ. ಈ ಹಿನ್ನೆಲೆಯಲ್ಲಿ ವ್ಯಾಪಾರಿಗಳು ತಮ್ಮ ಅಂಗಡಿಗಳಿಗೆ ಬರುವಂತ ಗ್ರಾಹಕರಿಗೆ ಸ್ಥಳದಲ್ಲೇ ಪರೀಕ್ಷಿಸಿ ಅಯೋಡಿನ್ ಯುಕ್ತ ಉಪ್ಪನ್ನೆ ಮಾರಟ ಮಾಡಬೇಕು ಎಂದರು.
ಅಯೋಡಿನ್ ಯುಕ್ತ ಉಪ್ಪನ್ನು ಸೇವಿಸದಿದ್ದರೆ, ಗರ್ಭಾವಸ್ಥೆ ಯಲ್ಲಿರುವ ಮಗುವಿನಲ್ಲೂ ನ್ಯೂನತೆ ಕಂಡು ಬರುವ ಸಾಧ್ಯತೆಗಳಿವೆ. ಹಾಗಾಗಿ ಗರ್ಭಿಣಿಯರು, ಬಾಣಂತಿಯರು 200 ಮೈಕ್ರೋ ಗ್ರಾಂ, ವಯಸ್ಕರು 150 ಮೈಕ್ರೋ ಗ್ರಾಂ, ಶಾಲಾ ವಯಸ್ಸಿನ ಮಕ್ಕಳಿಗೆ 120 ಮೈಕ್ರೋ ಗ್ರಾಂ, 12ರಿಂದ 59 ತಿಂಗಳ ಮಕ್ಕಳಿಗೆ 90 ಮೈಕ್ರೋ ಗ್ರಾಂ, 11 ತಿಂಗಳವರೆಗಿನ ಮಕ್ಕಳು 50 ಮೈಕ್ರೋ ಗ್ರಾಂ ಪ್ರಮಾಣ ಇರುವ ಅಯೋಡಿನ್ ಯುಕ್ತ ಉಪ್ಪು ಸೇವಿಸಬೇಕು ಎಂದರು.
ಹಿರಿಯ ಆರೋಗ್ಯ ನೀರೀಕ್ಷಣಾಧಿಕಾರಿ ಎಸ್.ಎಸ್. ಪತ್ತಾರ್ ಮಾತನಾಡಿ, ಅಯೋಡಿನ್ ಪೂರೈಸುವ ಏಕೈಕ್ ಮಾರ್ಗವೆಂದರೆ ಆಹಾರ ಧಾನ್ಯಗಳು ದ್ವಿದಳ ಧಾನ್ಯಗಳು, ಹಾಲು, ಮೀನು, ಮತ್ತು ಮೌಂಸ, ಮೊಟ್ಟೆ ಕೂಡಾ ಸೇವಿಸಬೇಕು. ಅಯೋಡಿನ್ ಕೊರತೆಯಿಂದ ಮಕ್ಕಳಲ್ಲಿ ಬುದ್ದಿಮಾಂದ್ಯತೆ, ಕಲಿಕೆಯಲ್ಲಿ ಹಿಂದೆ ಉಳಿಯುವೆಕೆ, ದೈಹಿಕ ಹಾಗೂ ಮಾನಸಿಕ ವಿಕಲತೆ, ಕಿವುಡ ಹಾಗೂ ಮೂಕತನ, ಮೆಳ್ಳಗಣ್ಣು, ಸ್ನಾಯುಗಳ ಮರಗಟ್ಟುವಿಕೆ, ನಡಿಗೆಯಲ್ಲಿ ಲೋಪದೋಷ, ಗರ್ಭಿಣಿಯರಲ್ಲಿ ಗರ್ಭಪಾತ, ಮತ್ತು ಸತ್ತುಹುಟ್ಟುವ ಮಕ್ಕಳ ಸಂಖ್ಯೆ ಹೆಚ್ಚು ಸಂಖ್ಯೆಯಲ್ಲಿ ಕಂಡುಬರುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀದೇವಿ ಕುಮಟಗಿ, ಭುವನೇಶ್ವರಿ ಬಂಗಲಿ, ವಿಜಯಲಕ್ಷ್ಮೀ ಪೂಜಾರಿ. ಪಲ್ಲವಿ ಗೋಟ್ಯಾಳ ಸೇರಿದಂತೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆರು ಮತ್ತು ಗರ್ಭಿಣಿ, ಬಾಣಂತಿಯರು, ಶಾಲಾ ಮಕ್ಕಳು ಇದ್ದರು.